ರಷ್ಯಾ ಜಾಗಕ್ಕೆ ನುಗ್ಗಿದ ಉಕ್ರೇನ್ ಸೇನೆ, ಮುಂದೆ ಆಗಿದ್ದೇನು?
ನ್ಯಾಟೋ ಹಾಗೂ ಅಮೆರಿಕ ನೀಡುತ್ತಿರುವ ಆಯುಧಗಳ ಪರಿಣಾಮ ಉಕ್ರೇನ್ ಮತ್ತಷ್ಟು ಗಟ್ಟಿಯಾಗಿದೆ. ಹೀಗಾಗಿ ತನ್ನ ಶತ್ರು ರಷ್ಯಾ ವಿರುದ್ಧ ಭೀಕರ ದಾಳಿ ನಡೆಸುತ್ತಿದೆ ಉಕ್ರೇನ್. ಅದರಲ್ಲೂ ಕಳೆದುಕೊಂಡ ಜಾಗಗಳನ್ನು ಒಂದೊಂದಾಗಿ ಮತ್ತೆ ತನ್ನ ವಶಕ್ಕೆ ಪಡೆಯುತ್ತಿದೆ ಉಕ್ರೇನ್. ಈಗಲೂ ಅಷ್ಟೇ ಕ್ರಿಮಿಯಾದಲ್ಲಿ ಇರುವ ರಷ್ಯಾದ ಹಡಗು ನಿರ್ಮಾಣ ಕೇಂದ್ರದ ಮೇಲೆ ಭೀಕರ ದಾಳಿ ನಡೆಸಿವೆ ಉಕ್ರೇನಿಯನ್ ಪಡೆಗಳು.
ಕ್ರಿಮಿಯಾದ ಸೆವೆಸ್ಟೊಪೊಲ್ ಹಡಗು ನಿರ್ಮಾಣ ಕೇಂದ್ರದ ಮೇಲೆ ಉಕ್ರೇನ್ ಸೇನೆ ದಿಢೀರ್ ಮಿಸೈಲ್ ಅಟ್ಯಾಕ್ ಮಾಡಿದೆ. ಹೀಗಾಗಿ ಅಲ್ಲಿದ್ದ ಎರಡು ಹಡಗುಗಳಿಗೆ ಹಾನಿಯಾಗಿ, 24ಕ್ಕೂ ಹೆಚ್ಚು ರಷ್ಯಾ ಸೈನಿಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ರಷ್ಯಾ ಸೇನೆ ಉಕ್ರೇನ್ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸಿರುವ ಬಗ್ಗೆ ವರದಿಯಾಗುತ್ತಿತ್ತು. ಆದರೆ ಈಗ ಉಕ್ರೇನ್ ಕೂಡ ಇದೇ ರೀತಿ ಕ್ಷಿಪಣಿ ದಾಳಿ ಆರಂಭಿಸಿದೆ. ಅದರಲ್ಲೂ ಇದೀಗ ಸೆವೆಸ್ಟೊಪೊಲ್ ಹಡಗು ನಿರ್ಮಾಣ ಕೇಂದ್ರದ ಮೇಲೆ ಉಕ್ರೇನ್ ನಡೆಸಿದ ದಾಳಿಯು ಇತ್ತೀಚಿನ ದಿನಗಳಲ್ಲಿ ನಡೆಸಿರುವ ಬೃಹತ್ ದಾಳಿ ಅಂತಾ ಹೇಳಲಾಗಿದೆ.

ದಿಢೀರ್ ನುಗ್ಗಿ ಬಂದ ಕ್ಷಿಪಣಿಗಳು
ಕಪ್ಪು ಸಮುದ್ರದ ಕರಾವಳಿಯ ಸೆವೆಸ್ಟೊಪೊಲ್ ಹಡಗು ನಿರ್ಮಾಣ ಕೇಂದ್ರದ ಮೇಲೆ ಉಕ್ರೇನ್ ಸೇನೆಯು ಸುಮಾರು 10 ಕ್ರೂಸ್ ಕ್ಷಿಪಣಿ ಮತ್ತು 3 ಸಮುದ್ರ ಡ್ರೋನ್‌ಗಳ ಮೂಲಕ ಅಟ್ಯಾಕ್ ಮಾಡಿದೆ ಎನ್ನಲಾಗಿದೆ. ಈ ಪೈಕಿ 7 ಕ್ಷಿಪಣಿ ಛಿದ್ರ ಮಾಡಿದ್ದಾಗಿ ರಷ್ಯಾ ಪಡೆಗಳು ಮಾಹಿತಿ ನೀಡಿದೆ. ಇಷ್ಟಾದ್ರೂ ಕೆಲ ಕ್ಷಿಪಣಿಗಳು ಹಡಗು ನಿರ್ಮಾಣ ಕೇಂದ್ರಕ್ಕೆ ಅಪ್ಪಳಿಸಿವೆ. ಹೀಗಾಗಿ ಹಲವರು ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಸ್ಥಳೀಯ ಸೇನಾ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ರತಿದಾಳಿ ನಡೆಸುತ್ತಾ ರಷ್ಯಾ?
ಎರಡು ದಿನದ ಹಿಂದಷ್ಟೇ ಕಪ್ಪು ಸಮುದ್ರದ ಮೇಲೆ ಉಕ್ರೇನ್ ಸೇನೆ ಅಟ್ಯಾಕ್ ಮಾಡಿತ್ತು. ರಷ್ಯಾ ಹಿಡಿತಕ್ಕೆ ಸಿಲುಕಿದ್ದ 4 ಗ್ಯಾಸ್ ಡ್ರಿಲ್ಲಿಂಗ್ ಘಟಕ ಮರಳಿ ಉಕ್ರೇನ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಲಾಗಿತ್ತು. ಉಕ್ರೇನ್ ಸೇನೆ ವಿಶೇಷ ಘಟಕದ ಯೋಧರು ಕಾರ್ಯಾಚರಣೆ ನಡೆಸಿ, ಇನ್ನೂ ಒಂದು ದಿನ ಕಳೆಯುವ ಮೊದಲೇ ಕ್ಷಿಪಣಿ ದಾಳಿ ನಡೆದಿದೆ. ಈ ಮೂಲಕ ರಷ್ಯಾ ಸೇನೆ ಇನ್ನಷ್ಟು ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಜ್ಜಾಗುವ ಮುನ್ಸೂಚನೆ ಸಿಕ್ಕಂತಾಗಿದೆ.

ಕಪ್ಪು ಸಮುದ್ರಕ್ಕಾಗಿ ತೀವ್ರ ಪೈಪೋಟಿ
ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಇದೇ ಜಲಮಾರ್ಗದ ಮೂಲಕವೇ ಉಕ್ರೇನ್ ವ್ಯವಹಾರ ನಡೆಯುತ್ತಿತ್ತು. ಹೀಗಿದ್ದಾಗ ರಷ್ಯಾ ಜಿದ್ದಿಗೆ ಬಿದ್ದಿದ್ದು, ಕಳೆದ ತಿಂಗಳಷ್ಟೇ ಇಲ್ಲಿ ಉಕ್ರೇನ್ ನೌಕೆಯನ್ನು ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತ ಭಾಗಶಃ ಕೈತಪ್ಪಿದೆ. 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ದಿನದಿನಕ್ಕೆ ಉಕ್ರೇನ್ ನರಳುತ್ತಿದೆ. ಅಗತ್ಯ ಇರುವ ದಿನಬಳಕೆ ವಸ್ತು ತರಿಸಿಕೊಳ್ಳುವುದಕ್ಕೂ ಪರದಾಡುತ್ತಿದೆ ಉಕ್ರೇನ್. ಹೀಗಿದ್ದಾಗ ಉಕ್ರೇನ್ ಪಡೆಗಳು ಪುಟಿದೇಳುವ ಮುನ್ಸೂಚನೆ ಸಿಕ್ಕಿದೆ. ಆದರೆ ರಷ್ಯಾ ಯಾವ ರೀತಿ ಶತ್ರು ಸೇನೆ ಕಟ್ಟಿಹಾಕುತ್ತೆ? ಕಾದು ನೋಡಬೇಕು.
ಕಿಮ್ ಭೇಟಿ ಬಳಿಕ ಮತ್ತಷ್ಟು ಆತಂಕ
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಹೇಗಿದೆ ಎಂದರೆ, ಈ ಪ್ರಪಂಚ ಈಗಾಗಲೇ 2 ಭಾಗವಾಗಿ ಹೋಗಿದೆ. ಕೆಲವು ದೇಶಗಳು ರಷ್ಯಾ ಪರ ನಿಂತರೆ, ಹಲವು ದೇಶಗಳು ಈಗ ಅಮೆರಿಕ ಜೊತೆ ಸೇರಿವೆ. ಹೀಗಾಗಿ ಎರಡೂ ಬಣಗಳ ನಡುವೆ ಕಿತ್ತಾಟ ಜೋರಾಗಿದ್ದು, ಈ ಸಂದರ್ಭದಲ್ಲೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬೆಂಕಿ ಇಟ್ಟಿದ್ದಾನೆ. ರಷ್ಯಾಗೆ ವಿಸಿಟ್ ಕೊಟ್ಟು, ಪುಟಿನ್ ಭೇಟಿ ಮಾಡಿದ ಕಿಮ್ ದಕ್ಷಿಣ ಕೊರಿಯಾ & ಜಪಾನ್ ಸೇರಿದಂತೆ ಆತನ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾನೆ. ಹೀಗಾಗಿ ಅಮೆರಿಕ & ದಕ್ಷಿಣ ಕೊರಿಯಾ ಕಿಮ್ ಮತ್ತು ರಷ್ಯಾಗೆ ಎಚ್ಚರಿಕೆ ನೀಡಿವೆ.












Click it and Unblock the Notifications