ಉಕ್ರೇನ್ ಹೊಟ್ಟೆಗೆ ತಣ್ಣೀರು ಬಟ್ಟೆ, ವ್ಯಾಪಾರ ಹಾಗೂ ವ್ಯವಹಾರಕ್ಕೂ ಬಿತ್ತು ಕಲ್ಲು... Ukraine Businesses
ಉಕ್ರೇನ್ ದೇಶಕ್ಕೆ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಿರುವ ರಷ್ಯಾ, ಸಾಲು ಸಾಲು ಸಂಕಷ್ಟಕ್ಕೆ ಸಿಲುಕುವ ರೀತಿ ಮಾಡುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ರಷ್ಯಾ ನಡೆಸಿರುವ ದಾಳಿ ಪರಿಣಾಮ ಉಕ್ರೇನ್ ದೇಶದ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದ್ದು, ಎಲ್ಲಿ ನೋಡಿದರೂ ಬರೀ ಕತ್ತಲೆಯೇ ತುಂಬಿ ಹೋಗಿದೆ. ಉಕ್ರೇನ್ ಜನ ಕೂಡ ಚಳಿಗಾಲದ ಸಮಯದಲ್ಲಿ ಕರೆಂಟ್ ಇಲ್ಲದೆ, ಸೂಕ್ತ ಹೀಟರ್ ವ್ಯವಸ್ಥೆ ಇಲ್ಲದೆ ಸಾವು & ಬದುಕಿನ ನಡುವೆ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಇನ್ನುಳಿದಂತೆ ರಷ್ಯಾ ಸೇನೆ ಕೂಡ ಯಾವುದೇ ಗ್ಯಾಪ್ ಕೊಡದಂತೆ ವಿದ್ಯುತ್ ಘಟಕಗಳ ಮೇಲೆ ದಾಳಿ ಮಾಡಿ ಎಲ್ಲವನ್ನ ಉಡೀಸ್ ಮಾಡಿದೆ. ಹೀಗಿದ್ದಾಗ ಉಕ್ರೇನ್ ದೇಶದ ಉದ್ದಿಮೆಗಳು ದೊಡ್ಡ ಸಂಕಷ್ಟಕ್ಕೆ ಸಿಲುಕಿಬಿಟ್ಟಿವೆ. ಒಂದು ಕಡೆ ಮಾರುಕಟ್ಟೆ ಸಮಸ್ಯೆ ಕಾಡುವಾಗ, ಇನ್ನೊಂದು ಕಡೆ ಉತ್ಪಾದನೆ ಕೂಡ ಮಾಡಲು ಆಗದೆ ಉಕ್ರೇನ್ ದೇಶದ ದೊಡ್ಡ ದೊಡ್ಡ ಫ್ಯಾಕ್ಟರಿಗಳು ಬಾಗಿಲು ಮುಚ್ಚುವ ಹಂತಕ್ಕೆ ಈಗ ಬಂದಿವೆ. ಯುರೋಪ್ ಮತ್ತು ಅಮೆರಿಕದ ಕಾಲು ಹಿಡಿದು ಹಣ ತರುತ್ತಿರುವ ಉಕ್ರೇನ್‌ಗೆ ಈಗ ಮತ್ತೆ ಮತ್ತೆ ಹೊಸದಾದ ಸಮಸ್ಯೆಗಳು ಎದುರಾಗುತ್ತಿದೆ.

ಯುದ್ಧ ನಿಲ್ಲದಿದ್ದರೆ ಸರ್ವನಾಶ ಗ್ಯಾರಂಟಿ
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಆದಷ್ಟು ಬೇಗ ನಿಲ್ಲಬೇಕಿದ್ದು, ಯುದ್ಧ ನಿಂತಾಗ ಮಾತ್ರ ಉಕ್ರೇನ್ ನೆಮ್ಮದಿಯಾಗಿ ಬದುಕಲು ಸಾಧ್ಯ. ಅಕಸ್ಮಾತ್ ಇದೇ ರೀತಿಯಾಗಿ ಯುದ್ಧವನ್ನ ರಷ್ಯಾ ಮುಂದುವರಿಸಿದರೆ ಅದು ಭವಿಷ್ಯದಲ್ಲಿ ಇಡೀ ಯುರೋಪ್ ದೇಶಗಳನ್ನೇ ಸಂಕಷ್ಟಕ್ಕೆ ಸಿಲುಕಿಸಿಬಿಡುವ ಆತಂಕ ಕಾಡುತ್ತಿದೆ. ಮತ್ತೊಂದು ಕಡೆ ಅಮೆರಿಕ ಹಗಲು & ರಾತ್ರಿ ಲೆಕ್ಕ ಹಾಕದೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಪರದಾಡುತ್ತಿದೆ. ಈ ಸಮಯದಲ್ಲಿ ಉಕ್ರೇನ್ ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.
ಉಕ್ರೇನ್ ದೇಶದಲ್ಲಿ ಹಲವು ಲೋಹ ತಯಾರಿಕಾ ಫ್ಯಾಕ್ಟರಿಗಳು ಕಾರ್ಯನಿರ್ವಹಣೆ ಮಾಡುತ್ತಿವೆ, ಈ ಕಾರ್ಖಾನೆಗಳ ಜೊತೆಗೆ ಉಕ್ರೇನ್ ದೇಶ ಕೃಷಿ ಉತ್ಪನ್ನಗಳಿಗೆ ಕೂಡ ಫೇಮಸ್ ಆಗಿದೆ. ಇನ್ನೊಂದು ಕಡೆ 2022 ಫೆಬ್ರವರಿ ತಿಂಗಳಲ್ಲಿ ಯುದ್ಧ ಆರಂಭ ಆಗುವುದಕ್ಕೂ ಮೊದಲು ಉಕ್ರೇನ್ ದೇಶ ಐಟಿ ಹಬ್ & ತಂತ್ರಜ್ಞಾನದ ಕೇಂದ್ರವಾಗುವ ಗುರಿ ಇಟ್ಟುಕೊಂಡು ದುಡಿಯುತ್ತಿತ್ತು. ಆದರೆ ಎಡವಟ್ಟು ಮಾಡಿಕೊಂಡು ಯುದ್ಧದ ಬಲೆಯಲ್ಲಿ ಸಿಲುಕಿರುವ ಉಕ್ರೇನ್‌ಗೆ ಈಗ ವಿದ್ಯುತ್ ಸಿಗುವುದು ಕೂಡ ಕಷ್ಟವಾಗಿದೆ. ಇದೇ ಕಾರಣಕ್ಕೆ ಉಕ್ರೇನ್ ದೇಶದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಉದ್ದಿಮೆಗಳು ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂದು ತಲುಪಿವೆ.
ಆಹಾರ ತಯಾರಿಕೆಗೂ ಸಂಕಷ್ಟದ ಸ್ಥಿತಿ
ಉಕ್ರೇನ್ ಜನರ ದಿನನಿತ್ಯದ ಆಹಾರಗಳ ಪೈಕಿ ಬ್ರೆಡ್ ಕೂಡ ಒಂದಾಗಿದ್ದು ಉಕ್ರೇನ್ ನೆಲದಲ್ಲಿ ಸಾವಿರಾರು ಬೇಕರಿಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ ಇದೀಗ ದಿಢೀರ್ ವಿದ್ಯುತ್ ಕೈಕೊಟ್ಟ ಪರಿಣಾಮ ಬೇಕರಿಗಳು ಬಾಗಿಲು ಎಳೆಯುವ ಸ್ಥಿತಿಗೆ ಬಂದಿವೆ. ಇನ್ನೂ ಕೆಲವು ಭಾಗದಲ್ಲಿ ವಿದ್ಯುತ್ ಇಲ್ಲದೆಯೇ ಜನರೇಟರ್ ಬಳಸಿ ಬ್ರೆಡ್ ಸೇರಿ ಹಲವು ತಿನಿಸು ತಯಾರಿಸಲಾಗುತ್ತಿದೆ. ಹೀಗೆ ಸಾಲು ಸಾಲು ಸಂಕಷ್ಟ ಉಕ್ರೇನ್ ಉದ್ದಿಮೆಗಳಿಗೆ ಇದೀಗ ಎದುರಾಗಿದೆ. ಹಾಗೇ ಯುದ್ಧದ ಕಾರಣಕ್ಕೆ ಕಾರ್ಮಿಕರು ಕೂಡ ವಲಸೆ ಹೋಗುತ್ತಿದ್ದು, ಪರಿಸ್ಥಿತಿ ತುಂಬಾ ಕಠಿಣವಾಗಿದೆ.
ಜೂನ್ ತಿಂಗಳ ಒಳಗೆ ಯುದ್ಧ ನಿಲ್ಲುತ್ತಾ?
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಹೇಳಿರುವಂತೆ, ಇದೇ ವರ್ಷದ ಜೂನ್ ತಿಂಗಳ ಒಳಗಾಗಿ ಯುದ್ಧ ನಿಲ್ಲಲಿದೆಯಂತೆ. ರಷ್ಯಾ ಮತ್ತು ಉಕ್ರೇನ್ ನಡುವೆ ಶುರುವಾಗಿರುವ ಭೀಕರ ಕಾಳಗಕ್ಕೆ 4 ವರ್ಷ ತುಂಬುತ್ತಿದ್ದು, 2022 ಫೆಬ್ರವರಿ 24 ಗುರುವಾರ ಭೀಕರ ಯುದ್ಧ ಶುರುವಾಗಿತ್ತು. ಕೆಲ ದಿನಗಳಲ್ಲಿ ಮುಗಿದು ಹೋಗಬಹುದು ಎಂದು ಊಹಿಸಿದ ಯುದ್ಧ ಈಗಾಗಲೇ 4 ವರ್ಷ ಮುಗಿಸಿ 5ನೇ ವರ್ಷಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಇದೇ ಸಮಯದಲ್ಲಿ ವೊಲೊಡಿಮಿರ್ ಝಲೆನ್‌ಸ್ಕಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಜೂನ್ ಒಳಗಾಗಿ ಯುದ್ಧ ನಿಲ್ಲುವ ಮುನ್ಸೂಚನೆ ನೀಡಿದ್ದಾರೆ.












Click it and Unblock the Notifications