ಯುಎಸ್ ಪತ್ರಕರ್ತನ ಹತ್ಯೆಗೆ ರಷ್ಯಾವನ್ನು ದೂಷಿಸಿದ ಉಕ್ರೇನ್
ಕೀವ್, ಮಾರ್ಚ್ 13: ಯುಎಸ್ ಮೂಲದ ಚಲನಚಿತ್ರ ನಿರ್ಮಾಪಕ ಮತ್ತು ಪತ್ರಕರ್ತನನ್ನು ಉಕ್ರೇನ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪತ್ರಕರ್ತನ ಸಾವಿಗೆ ಉಕ್ರೇನಿಯನ್ ಅಧಿಕಾರಿಗಳು ರಷ್ಯಾವನ್ನು ದೂಷಿಸಿದ್ದಾರೆ. ಆದರೆ ಸಾವಿನ ಕುರಿತು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ ಎಂದು ವರದಿಯಾಗಿದೆ.
ಯುಎಸ್ ಪತ್ರಕರ್ತ ಬ್ರೆಂಟ್ ರೆನಾಡ್ ಇರ್ಪಿನ್‌ನಲ್ಲಿ ಭಾನುವಾರ ಹತ್ಯೆಯಾಗಿರುವ ಬಗ್ಗೆ ಕೀವ್ ಒಬ್ಲಾಸ್ಟ್ ಪೊಲೀಸ್ ಮುಖ್ಯಸ್ಥ ಆಂಡ್ರಿ ನೆಬಿಟೊವ್ ಹೇಳಿದ್ದಾರೆ. ಇನ್ನಿಬ್ಬರು ಪತ್ರಕರ್ತರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಂಡ್ರಿ ನೆಬಿಟೋವ್ ಹೇಳಿರುವ ಕುರಿತು ಕೀವ್ ಇಂಡಿಪೆಂಡೆಂಟ್ ಉಲ್ಲೇಖಿಸಿದೆ.
ಬ್ರೆಂಟ್ ರೆನಾಡ್ ಅವರ ಮೃತದೇಹದಲ್ಲಿ ಕಂಡುಬಂದ ದಾಖಲೆಗಳಲ್ಲಿ ನ್ಯೂಯಾರ್ಕ್ ಟೈಮ್ಸ್ ಗುರುತಿನ ಚೀಟಿ ಪತ್ತೆಯಾಗಿದ್ದು, ಇದು ಅವರು ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ತಿಳಿಸಿದೆ. ಇದರ ಬೆನ್ನಲ್ಲೇ ನ್ಯೂಯಾರ್ಕ್ ಟೈಮ್ಸ್ ಹೇಳಿಕೆಯೊಂದಿಗೆ ಬಿಡುಗಡೆ ಮಾಡಿದ್ದು, ಬ್ರೆಂಟ್ ರೆನಾಡ್ ಸುದ್ದಿ ನೀಡುವವರಾಗಿದ್ದರು ಎಂದು ಹೇಳಿದೆ. ಆದಾಗ್ಯೂ, ಅವರನ್ನು ಉಕ್ರೇನ್‌ನಲ್ಲಿ ವರದಿಗಾರಿಕೆಗೆ ನಿಯೋಜಿಸಿರಲಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಪತ್ರಕರ್ತ ಬ್ರೆಂಟ್ ರೆನಾಡ್ ಸಾವಿಗೆ ಸಂತಾಪ:
"ಬ್ರೆಂಟ್ ರೆನಾಡ್ ಅವರ ಸಾವಿನ ಸುದ್ದಿ ಕೇಳಿ ನಮಗೆ ಅತೀವ ದುಃಖವಾಗಿದೆ. ಬ್ರೆಂಟ್ ಪ್ರತಿಭಾವಂತ ಚಲನಚಿತ್ರ ನಿರ್ಮಾಪಕರಾಗಿದ್ದು, ಹಲವು ವರ್ಷಗಳಿಂದ ನ್ಯೂಯಾರ್ಕ್ ಟೈಮ್ಸ್‌ಗೆ ವರದಿಗಳನ್ನು ನೀಡುತ್ತಿದ್ದರು. ಅವರು ಈ ಹಿಂದೆ ಟೈಮ್ಸ್‌ಗೆ ಕೊಡುಗೆ ನೀಡಿದ್ದರೂ, ಅವರನ್ನು ಇತ್ತೀಚಿಗೆ ಉಕ್ರೇನ್‌ನ ಟೈಮ್ಸ್‌ನಲ್ಲಿ ಯಾವುದೇ ಡೆಸ್ಕ್‌ಗೆ ನಿಯೋಜನೆ ಮಾಡಿರಲಿಲ್ಲ. ಹಲವು ವರ್ಷಗಳ ಹಿಂದೆ ನಿಯೋಜನೆಗಾಗಿ ನೀಡಲಾಗಿದ್ದ ಟೈಮ್ಸ್ ಪ್ರೆಸ್ ಬ್ಯಾಡ್ಜ್ ಅನ್ನು ಧರಿಸಿದ್ದರಿಂದ ಅವರು ಟೈಮ್ಸ್‌ಗಾಗಿ ಕೆಲಸ ಮಾಡಿದ್ದಾರೆ ಎಂಬ ಆರಂಭಿಕ ವರದಿಗಳು ಪ್ರಸಾರವಾದವು," ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.












Click it and Unblock the Notifications