Tsunami Warning: ಚಿಲಿ, ಅರ್ಜೆಂಟಿನಾದಲ್ಲಿ ಭೂಕಂಪ; ಸುನಾಮಿ ಎಚ್ಚರಿಕೆ
ಚಿಲಿ ಮತ್ತು ಅರ್ಜೆಂಟೀನಾದ ದಕ್ಷಿಣ ಕರಾವಳಿಯಲ್ಲಿ ಶುಕ್ರವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನೀಡಿದೆ. ಇಲ್ಲಿನ ಕೇಪ್ ಹಾರ್ನ್ ಮತ್ತು ಅಂಟಾರ್ಕ್ಟಿಕಾ ನಡುವೆ ಸ್ಥಳೀಯ ಸಮಯ ಬೆಳಿಗ್ಗೆ 9:58 ಕ್ಕೆ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಅದಾದ ಬಳಿಕ ಹಲವು ಸಣ್ಣ ಕಂಪನಗಳು ಸಂಭವಿಸಿವೆ ಎಂದು ವರದಿಯಾಗಿದೆ.
ಎಎಫ್‌ಪಿ ವರದಿ ಮಾಡಿರುವ ಪ್ರಕಾರ, ಚಿಲಿಯ ಅಧಿಕಾರಿಗಳು ದೇಶದ ದಕ್ಷಿಣ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಸುನಾಮಿ ಎಚ್ಚರಿಕೆ ಬಳಿಕ ದಕ್ಷಿಣ ಭಾಗದಲ್ಲಿರುವ ಮ್ಯಾಗಲ್ಲನೆಸ್ ಪ್ರದೇಶದ ಕರಾವಳಿ ಪ್ರದೇಶದಲ್ಲಿರುವ ಜನರನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಚಿಲಿಯ ರಾಷ್ಟ್ರೀಯ ವಿಪತ್ತು ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ ಸೇವೆ ತಿಳಿಸಿದೆ.

ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಸಾರ್ವಜನಿಕರು ಮ್ಯಾಗಲ್ಲನೆಸ್ ಪ್ರದೇಶದ ಕರಾವಳಿಯನ್ನು ಸ್ಥಳಾಂತರಿಸುವಂತೆ ಸೂಚನೆ ಕೊಟ್ಟಿದ್ದಾರೆ. ಮ್ಯಾಗಲ್ಲನೆಸ್ ಪ್ರದೇಶದಾದ್ಯಂತ ಕರಾವಳಿಯನ್ನು ಸ್ಥಳಾಂತರಿಸಲು ನಾವು ಕರೆ ನೀಡುತ್ತೇವೆ ಎಂದು ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಜನರ ಸ್ಥಳಾಂತರ ಕೆಲಸ ಆರಂಭ
ಸಾಮಾಜಿಕ ಮಾಧ್ಯಮಗಳಲ್ಲಿ ಜನರನ್ನು ಬೇರೆ ಕಡೆ ಸ್ಥಳಾಂತರಿಸುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಸೈರನ್‌ಗಳು ಮೊಳಗಿದ ಬಳಿಕ ಜನ ಶಾಂತವಾಗಿ ಪ್ರದೇಶವನ್ನು ತೊರೆಯುತ್ತಿದ್ದಾರೆ. ಚಿಲಿಯ ಹೈಡ್ರೋಗ್ರಾಫಿಕ್ ಮತ್ತು ಓಷಿಯೋಗ್ರಾಫಿಕ್ ಸರ್ವಿಸ್ (SHOA) ಅಂದಾಜಿನ ಪ್ರಕಾರ, ಮುಂದಿನ ಗಂಟೆಗಳಲ್ಲಿ ಅಂಟಾರ್ಕ್ಟಿಕಾ ಮತ್ತು ಚಿಲಿಯ ದಕ್ಷಿಣದ ತೀವ್ರ ನಗರಗಳಿಗೆ ದೊಡ್ಡ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ.
ಬಿಬಿಸಿ ವರದಿ ಮಾಡಿರುವ ಪ್ರಕಾರ, ಚಿಲಿಯ ಸ್ಥಳೀಯ ಮಾಧ್ಯಮಗಳು ನಿವಾಸಿಗಳನ್ನು ಸಮುದ್ರ ಮಟ್ಟದಿಂದ 30 ಮೀಟರ್ ಎತ್ತರದಲ್ಲಿರುವ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದೆ. ದಕ್ಷಿಣ ಅಮೆರಿಕಾದ ದಕ್ಷಿಣ ತುದಿಯಲ್ಲಿರುವ ಮ್ಯಾಗಲ್ಲನೆಸ್ ಪ್ರದೇಶವು ಚಿಲಿಯ ಎರಡನೇ ಅತಿದೊಡ್ಡ ಆದರೆ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ.
ಚಿಲಿಯಲ್ಲಿ ಭೂಕಂಪದಿಂದ ಹೆಚ್ಚಿನ ಹಾನಿಯಾಗಿದೆ. ಇದು ಪದೇ ಭೂಕಂಪವನ್ನು ಅನುಭವಿಸುವ ದೇಶಗಳಲ್ಲಿ ಒಂದಾಗಿದೆ. ನಾಜ್ಕಾ, ದಕ್ಷಿಣ ಅಮೆರಿಕಾ ಮತ್ತು ಅಂಟಾರ್ಕ್ಟಿಕ್ ಒಟ್ಟು ಮೂರು ಟೆಕ್ಟೋನಿಕ್ ಪ್ಲೇಟ್‌ಗಳು ಅದರ ಪ್ರದೇಶದೊಳಗೆ ಒಮ್ಮುಖವಾಗುತ್ತವೆ.
1960 ರಲ್ಲಿ 9.5 ತೀವ್ರತೆಯ ಭೂಕಂಪದ ಬಳಿಕ ವಾಲ್ಡಿವಿಯಾ ಸಂಪೂರ್ಣ ನಾಶವಾಗಿತ್ತು. ಈ ದುರಂತದಲ್ಲಿ 9,500 ಜನ ಮೃತಪಟ್ಟಿದ್ದರು. 2010 ರಲ್ಲಿ, ಮಧ್ಯ ಚಿಲಿಯ ಕರಾವಳಿಯಲ್ಲಿ 8.8 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಸುನಾಮಿ ಅಪ್ಪಳಿಸಿದ್ದರಿಂದ 520 ಮಂದಿ ಮೃತಪಟ್ಟಿದ್ದರು.












Click it and Unblock the Notifications