WHO ಎಚ್ಚರಿಕೆ ನಿರ್ಲಕ್ಷಿಸಿ ಮಿಶ್ರ ಕೊರೊನಾ ಲಸಿಕೆ ನೀಡಲು ಮುಂದಾದ ಥಾಯ್ಲೆಂಡ್
ಬ್ಯಾಂಕಾಕ್, ಜುಲೈ 13: ಕೊರೊನಾ ಸೋಂಕಿನ ವಿರುದ್ಧ ಎರಡು ಕೊರೊನಾ ಲಸಿಕೆಗಳ ಮಿಶ್ರ ಡೋಸ್ ನೀಡುವ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ನಿರ್ಲಕ್ಷಿಸಿರುವ ಥಾಯ್ಲೆಂಡ್, ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಮಿಶ್ರ ಲಸಿಕೆ ನೀಡುವುದನ್ನು ಸಮರ್ಥಿಸಿಕೊಂಡಿದೆ.
ಡೆಲ್ಟಾ ರೂಪಾಂತರದಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಭಯಂಕರ ರೀತಿಯಲ್ಲಿ ಏರುತ್ತಿದೆ. ಕೊರೊನಾ ಸೋಂಕಿನ ಪ್ರಮಾಣ ಹಾಗೂ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಇಂಥ ಹೊತ್ತಿನಲ್ಲಿ ಮಿಶ್ರ ಕೊರೊನಾ ಲಸಿಕೆ ನೀಡುವುದು ಅವಶ್ಯಕವಾಗಿದೆ ಎಂದು ಥಾಯ್ಲೆಂಡ್ ಹೇಳಿದೆ.
ಚೀನಾ ಮೂಲದ ಸಿನೋವ್ಯಾಕ್ ಹಾಗೂ ಆಸ್ಟ್ರಾಜೆನೆಕಾ ಲಸಿಕೆಯನ್ನು ಸಂಯೋಜಿಸಿ ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 12 ವಾರಗಳ ಬದಲು ಆರು ವಾರಗಳ ಅಂತರದಲ್ಲೇ ಈ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಸಿನೋವ್ಯಾಕ್, ಆಸ್ಟ್ರಾಜೆನೆಕಾ ಲಸಿಕೆಯ ಎರಡು ಡೋಸ್‌ಗಳ ಮಿಶ್ರಣ ಮಾಡಿ ಲಸಿಕೆ ನೀಡಲಾಗುವುದು. ಕೊರೊನಾ ಸೋಂಕು ವೇಗವಾಗಿ ವ್ಯಾಪಿಸುತ್ತಿರುವ ಈ ಹೊತ್ತಿನಲ್ಲಿ ಬೂಸ್ಟರ್ ಲಸಿಕೆ ನೀಡಲು 12 ವಾರಗಳವರೆಗೆ ಕಾಯುವ ಪರಿಸ್ಥಿತಿ ಸದ್ಯಕ್ಕಿಲ್ಲ. ಭವಿಷ್ಯದಲ್ಲಿ, ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಉತ್ತಮ ಆಯ್ಕೆ ಕುರಿತು ಯೋಜಿಸುತ್ತೇವೆ" ಎಂದು ಥಾಯ್ಲೆಂಡ್‌ನ ಮುಖ್ಯ ವೈರಾಣು ತಜ್ಞ ಯೋಂಗ್ ಪೂವೊರವಾನ್ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಒಬ್ಬರಿಗೆ ಎರಡು ಭಿನ್ನ ಕಂಪನಿಗಳ ಲಸಿಕೆಗಳ ಬಳಕೆಯನ್ನು "ಅಪಾಯಕಾರಿ ಪ್ರವೃತ್ತಿ" ಎಂದು ಸೋಮವಾರ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು. "ಈ ಪ್ರಯೋಗದ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಆರೋಗ್ಯದ ಮೇಲೆ ಇದರ ಪರಿಣಾಮದ ಬಗ್ಗೆಯೂ ಸೂಕ್ತ ಅರಿವಿಲ್ಲ. ಹೀಗಾಗಿ ಈ ಪ್ರಯೋಗವನ್ನು ಮಾಡದೇ ಇರುವುದು ಒಳಿತು" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದರು.












Click it and Unblock the Notifications