ಆಸ್ಟ್ರೇಲಿಯಾ: ಭಾರತದ ರಾಯಭಾರ ಕಚೇರಿಯಲ್ಲಿ ಅನುಮಾನಾಸ್ಪದ ಪೊಟ್ಟಣ ಪತ್ತೆ
ಮೆಲ್ಬರ್ನ್, ಜನವರಿ 9: ಭಾರತದ ರಾಯಭಾರ ಕಚೇರಿ ಸೇರಿದಂತೆ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ವಿವಿಧ ರಾಯಭಾರ ಕಚೇರಿಗಳಲ್ಲಿ ಅನುಮಾನಾಸ್ಪದ ಪೊಟ್ಟಣಗಳು ಪತ್ತೆಯಾಗಿವೆ.
ಮೆಲ್ಬರ್ನ್‌ನ ವಿವಿಧೆಡೆ ಕನಿಷ್ಠ 10 ಅಂತಾರಾಷ್ಟ್ರೀಯ ರಾಯಭಾರ ಕಚೇರಿಗಳಲ್ಲಿ ಈ ರೀತಿಯ ಅನುಮಾನಾಸ್ಪದ ಪೊಟ್ಟಣಗಳು ಕಂಡುಬಂದಿದ್ದು, ಅಪಾಯದ ಮುನ್ಸೂಚನೆಯಿಂದ ತೀವ್ರ ಮಟ್ಟದ ಪರಿಶೀಲನಾ ಕಾರ್ಯಾಚರಣೆ ನಡೆಸಲಾಗಿದೆ.
ಸೇಂಟ್ ಕಿಲ್ಡಾ ರಸ್ತೆಯಲ್ಲಿರುವ ಭಾರತ ಮತ್ತು ಅಮೆರಿಕದ ರಾಯಭಾರ ಕಚೇರಿಗಳ ಬಳಿ ಅಗ್ನಿಶಾಮಕ ದಳ ವಾಹನಗಳು ಮತ್ತು ಆಂಬುಲೆನ್ಸ್‌ಗಳನ್ನು ರವಾನಿಸಲಾಗಿದೆ.

'ರಾಯಭಾರ ಕಚೇರಿಗಳಿಗೆ ಅನುಮಾನಾಸ್ಪದ ಪೊಟ್ಟಣಗಳು ತಲುಪಿರುವ ವಿಚಾರದಲ್ಲಿ ಪೊಲೀಸರು ಮತ್ತು ತುರ್ತುಸೇವಾ ವಿಭಾಗಗಳು ಕೂಡಲೇ ಸ್ಪಂದಿಸಿವೆ. ತುರ್ತು ಸೇವಾ ತಂಡಗಳು ಈ ಪೊಟ್ಟಣಗಳನ್ನು ತಪಾಸಣೆ ನಡೆಸುತ್ತಿವೆ. ಈ ಬಗ್ಗೆ ವ್ಯಾಪಕ ತನಿಖೆ ನಡೆಯುತ್ತಿದೆ' ಎಂದು ಆಸ್ಟ್ರೇಲಿಯಾ ಫೆಡರಲ್ ಪೊಲೀಸ್ ಟ್ವೀಟ್ ಮಾಡಿದ್ದಾರೆ.
ಬೇರೆ ಬೇರೆ ಮಾರ್ಗಗಳಲ್ಲಿ ಇರುವ ಇಂಗ್ಲೆಂಡ್‌ನ ರಾಯಭಾರ ಕಚೇರಿ, ಕೊರಿಯಾ, ಜರ್ಮನಿ, ಇಟಲಿ, ಸ್ವಿಟ್ಜರ್ಲೆಂಡ್, ಪಾಕಿಸ್ತಾನ, ಗ್ರೀಸ್ ಮತ್ತು ಇಂಡೋನೇಷ್ಯಾ ರಾಯಭಾರ ಕಚೇರಿಗಳಲ್ಲಿ ಕೂಡ ಈ ರೀತಿಯ ಪೊಟ್ಟಣಗಳು ಪತ್ತೆಯಾಗಿವೆ ಎನ್ನಲಾಗಿದೆ.
Australian Federal Police: Police and emergency services have responded to suspicious packages to embassies and consulates in ACT & VIC today. The packages are being examined by attending emergency services. The circumstances are being investigated. #Melbourne pic.twitter.com/oAehVjBHHY
— ANI (@ANI) 9 January 2019
ತುರ್ತು ಸೇವಾ ಸಿಬ್ಬಂದಿ ರಾಸಾಯನಿಕ ದಿರಿಸುಗಳನ್ನು ಧರಿಸಿ ಕಟ್ಟಡಗಳ ಒಳಗೆ ಪ್ರವೇಶಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಇದುವರೆಗೂ ಬೇರೆ ಯಾವುದೇ ಅಪಾಯ ಸಂಭವಿಸಿಲ್ಲ.
ಎರಡು ದಿನಗಳ ಹಿಂದೆಯಷ್ಟೇ ಸಿಡ್ನಿಯಲ್ಲಿರುವ ಅರ್ಜೆಂಟೀನಾ ರಾಯಭಾರ ಕಚೇರಿಯಲ್ಲಿ ಅನುಮಾನಾಸ್ಪದ ಬಿಳಿ ಪೌಡರ್ ಕಂಡು ಬಂದಿತ್ತು. ಹೀಗಾಗಿ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.











Click it and Unblock the Notifications