Godhra Riot: ಗೋಧ್ರಾ ಹತ್ಯಾಕಾಂಡ ಪ್ರಕರಣದ ಬಗ್ಗೆ ಮಹತ್ವದ ಆದೇಶ!
ನವದೆಹಲಿ: 2002ರಲ್ಲಿ ಗೋಧ್ರಾ ರೈಲು ದುರಂತದ ನಂತರ ಸಂಭವಿಸಿದ್ದ ಕೋಮು ಗಲಭೆಯ ವಿಚಾರ ಇಂದು ಮತ್ತೆ ಚರ್ಚೆಗೆ ಬಂದಿದೆ. ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಈ ಘಟನೆ ಅಂದಿನ ಕಾಲಕ್ಕೆ ದೊಡ್ಟ ಸುದ್ದಿಯಾಗಿತ್ತು. ಈ ದುರಂತದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನ ಇಂದು ನೀಡಿದೆ. ಹಾಗಾದರೆ ಗೋಧ್ರಾ ಹತ್ಯಾಕಾಂಡ ಪ್ರಕರಣದ ಬಗ್ಗೆ ಸುಪ್ರೀಂ ನೀಡಿರುವ ಆ ಮಹತ್ವದ ಆದೇಶ ಏನು?
ಹೌದು 2002ರಲ್ಲಿ ನಡೆದಿದ್ದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಕೇಸ್ ಮತ್ತು ಮಹಿಳೆ ಕುಟುಂಬದ 14 ಸದಸ್ಯರ ಹತ್ಯೆಗೆ ಸಂಬಂಧಿಸಿದಂತೆ 11 ಆರೋಪಿಗಳಿಗೆ ಕ್ಷಮಾದಾನ ನೀಡಿದ ಬಗ್ಗೆ ಇಂದು ಸುಪ್ರೀಂ ಮಹತ್ವದ ಆದೇಶ ನೀಡಿದೆ. ಹೀಗೆ 11 ಆರೋಪಿಗಳಿಗೆ ಕ್ಷಮಾದಾನ ನೀಡಿದ ಬಗ್ಗೆ ಮೂಲ ದಾಖಲಾತಿಗಳನ್ನು ಅಕ್ಟೋಬರ್ 16ರ ಒಳಗಾಗಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಇದೀಗ ಗುಜರಾತ್ ಮತ್ತು ಕೇಂದ್ರ ಸರ್ಕಾರಕ್ಕೆ ಖಡಕ್ ಸೂಚನೆಯನ್ನ ನೀಡಿದೆ. ಈ ಮೂಲಕ ಸುಪ್ರೀಂ ಆದೇಶವು ದೇಶದಲ್ಲಿ ಮತ್ತೊಮ್ಮೆ ಸಖತ್ ಸದ್ದು ಮಾಡುತ್ತಿದೆ.

ಇದು ಎಂತಹ ಘಟನೆ ಗೊತ್ತಾ?
ಅಷ್ಟಕ್ಕೂ ಈ ಕೇಸ್‌ನ ಒಟ್ಟಾರೆ 11 ಆರೋಪಿಗಳಿಗೆ ಕ್ಷಮಾದಾನ ನೀಡಿದ್ದನ್ನು ಪ್ರಶ್ನೆ ಮಾಡಿ, ಅರ್ಜಿಯನ್ನ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠ, ವಾದ & ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿ ಇದೀಗ ಆದೇಶ ಕಾಯ್ದಿರಿಸಿದೆ. ಆರೋಪಿಗಳನ್ನು ಬಿಡುಗಡೆಗೊಳಿಸುವ ಮುನ್ನ ಅಪರಾಧದ ಸ್ವರೂಪ, ಅದು ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ಸರ್ಕಾರ ಪರಿಗಣಿಸಬೇಕಿತ್ತು. ಅಪರಾಧಿಗಳು 14 ಮಂದಿ ಹತ್ಯೆ ಮಾಡಿದ್ದಲ್ಲದೆ, ಸಂತ್ರಸ್ತೆಯ 3 ವರ್ಷದ ಪುತ್ರಿಯ ತಲೆಯನ್ನು ಬಂಡೆಗೆ ಅಪ್ಪಳಿಸಿ ಸಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದಾಗ ಸಂತ್ರಸ್ತೆಯ ವಯಸ್ಸು 21 ಆಗಿತ್ತು, ಆಗ 5 ತಿಂಗಳ ಗರ್ಭಿಣಿಯಾಗಿದ್ದರು.
ವಾಪಸ್ ಜೈಲಿಗೆ ಕಳುಹಿಸಲು ಒತ್ತಾಯ
ಇನ್ನು ಬಿಲ್ಕಿಸ್ ಬಾನೊ ಪರ ವಕೀಲರು ಬಲವಾಗಿ ವಾದ ಮಂಡಿಸಿದ್ದರು, ಈ ಅಪರಾಧಗಳು ಘನಘೋರ. ನಿರ್ದಿಷ್ಟ ಅವಧಿ ತನಕ ಶಿಕ್ಷೆಯನ್ನ ಅನುಭವಿಸಿದ ಬಳಿಕ ಶಿಕ್ಷೆ ಕಡಿತ ಮಾಡಲು ಕೋರಲು ಅಪರಾಧಿಗಳಿಗೆ ಹಕ್ಕಿದೆ. ಆದರೆ, ಈ ಕೇಸ್‌ನಲ್ಲಿ ಸರ್ಕಾರವು ಕಡೆಗಣಿಸಿದ ಅಂಶಗಳು ಮುಖ್ಯವಾಗಿವೆ. ಅಪರಾಧಿಗಳು ಜೈಲಲ್ಲಿ ಇರುವಾಗಲೂ ಅವರಿಗೆ ಪೆರೋಲ್ ಮೇಲೆ ಬಿಡುಗಡೆ ದೊರೆಯುತ್ತಿತ್ತು. ಆದರೆ, ಕ್ಷಮಾದಾನಕ್ಕೆ ಅರ್ಹ ಕೇಸ್ ಇದಲ್ಲ, ಅವರನ್ನು ವಾಪಸ್ ಜೈಲಿಗೆ ಕಳಿಸಬೇಕು ಎಂದು ಬಿಲ್ಕಿಸ್ ಬಾನೊ ವಕೀಲರು ವಾದವನ್ನು ಮಂಡಿಸಿದ್ದಾರೆ.
ಘಟನೆಯ ಹಿನ್ನೆಲೆಯೇ ಘೋರವಾಗಿದೆ
ಅಂದಹಾಗೆ 2002ರಲ್ಲಿ ಗೋದ್ರಾ ರೈಲು ದುರಂತದ ಬಳಿಕ ಸಂಭವಿಸಿದ ಕೋಮು ಗಲಭೆಯಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ 11 ಆರೋಪಿಗಳು ಸಾಮೂಹಿಕ ಅತ್ಯಾಚಾರವನ್ನ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ ಅವರ ಕುಟುಂಬದ 14 ಸದಸ್ಯರನ್ನು ಹತ್ಯೆಗೈದು ಶಿಕ್ಷೆಗೆ ಗುರಿಯಾಗಿದ್ದರು. 2022ರ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆ, ಕ್ಷಮಾದಾನದ ಆಧಾರದ ಮೇಲೆ ಪ್ರಕರಣದ 11 ಆರೋಪಿಗಳನ್ನ ರಿಲೀಸ್ ಮಾಡಲಾಗಿತ್ತು.

ಹೀಗೆ ಪ್ರಕರಣದ 11 ಜನರನ್ನು ರಿಲೀಸ್ ಮಾಡಿದ ನಂತರ, ಈ ನಿರ್ಧಾರ ಪ್ರಶ್ನೆ ಮಾಡಿದ್ದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಸಿಪಿಐ (ಎಂ) ನಾಯಕಿ ಸುಭಾಷಿಣಿ ಅಲಿ ಸೇರಿ ಪತ್ರಕರ್ತೆ ರೇವತಿ ಲಾಲ್, ಲಖನೌ ವಿವಿ ಮಾಜಿ ಉಪಕುಲಪತಿಗಳಾದ ರೂಪ್ ರೇಖಾ ವರ್ಮಾ ಮತ್ತಿತರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಸಲ್ಲಿಸಿದ್ದರು. ಒಟ್ನಲ್ಲಿ ಈ ಮೂಲಕ 2002ರ ಭೀಕರ ಘಟನೆ ಮತ್ತೊಮ್ಮೆ ದೇಶದಲ್ಲಿ ಸುದ್ದಿಯಾಗಿ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications