ಓಮಿಕ್ರಾನ್: ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲಾತಿ ಪ್ರಮಾಣ ಒಂದೇ ದಿನದಲ್ಲಿ ದ್ವಿಗುಣ
ಕೇಪ್‌ಟೌನ್, ಡಿಸೆಂಬರ್ 08: ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ಮೊದಲ ಬಾರಿಗೆ ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಜನರು ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ತೀವ್ರ ಮಟ್ಟದಲ್ಲಿ ಏರಿಕೆ ಆಗಿದೆ. ಮಂಗಳವಾರ ಒಂದು ದಿನದಲ್ಲೇ ದಕ್ಷಿಣ ಆಫ್ರಿಕಾದಲ್ಲಿ ಜನರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಎರಡು ಪಟ್ಟು ಅಧಿಕವಾಗಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್ ಪ್ರಕಾರ ಕಳೆದ 24 ಗಂಟೆಗಳಲ್ಲಿ 383 ಜನರು ಕೊರೊನಾ ವೈರಸ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಇದಕ್ಕೂ ಮುಂಚಿನ ದಿನ 24 ಗಂಟೆಗಳ ಅವಧಿಯಲ್ಲಿ 175 ಜನರು ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲು ಆಗಿದ್ದರು.
ದಾಖಲಾದ 13,147 ಹೊಸ ಪ್ರಕರಣಗಳಲ್ಲಿ ಗೌಟೆಂಗ್‌ನಲ್ಲಿಯೇ ಶೇಕಡ 64 ರಷ್ಟು ಕೋವಿಡ್ ಪ್ರಕರಣಗಳು ವರದಿ ಆಗಿದೆ. ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾವನ್ನು ಒಳಗೊಂಡಿರುವ ಪ್ರಾಂತ್ಯ ಇದಾಗಿದೆ. ಹಿಂದಿನ ದಿನದಲ್ಲಿ 6,381 ಪ್ರಕರಣಗಳಲ್ಲಿ ಶೇಕಡ 70 ರಷ್ಟು ಪ್ರಕರಣವು ಗೌಟೆಂಗ್‌ನಲ್ಲಿಯೇ ವರದಿ ಆಗುತ್ತಿದ್ದವು ಎಂದು ಎನ್‌ಐಸಿಡಿ ವರದಿ ಹೇಳಿದೆ.

ಕೋವಿಡ್ ಪರೀಕ್ಷೆಗಳ ಪಾಸಿಟಿವ್ ಪ್ರಮಾಣವು ಮಂಗಳವಾರ ಶೇಕಡ 24.9 ಆಗಿತ್ತು. ಇದಕ್ಕೂ ಹಿಂದಿನ ದಿನದಲ್ಲಿ ಶೇಕಡ 26.4 ಪಾಸಿಟಿವ್ ದರ ಆಗಿತ್ತು. ಈ ಹಿನ್ನೆಲೆಯಲ್ಲಿ ನೋಡುವಾದ ದಕ್ಷಿಣ ಆಫ್ರಿಕಾದಲ್ಲಿ ಪಾಸಿಟಿವ್ ದರವು ಕಡಿಮೆ ಆಗಿದೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ದೇಶದಲ್ಲಿ ಒಟ್ಟು ದೃಢಪಡಿಸಿದ ಕೋವಿಡ್ ಸಾವಿನ ಸಂಖ್ಯೆಯು 90,002 ಕ್ಕೆ ಏರಿಕೆ ಆಗಿದೆ. ಇನ್ನು ದೇಶದಲ್ಲಿ ಯಾವುದೇ ಓಮಿಕ್ರಾನ್ ಸಾವು ಪ್ರಕರಣಗಳು ವರದಿ ಆಗಿಲ್ಲ.
ದಕ್ಷಿಣಾ ಆಫ್ರಿಕಾದಲ್ಲಿ ಮಕ್ಕಳಲ್ಲಿ ಅಧಿಕ ಕೋವಿಡ್
ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರಿ ಹೆಚ್ಚಳವಾಗಿದ್ದು, ಮಕ್ಕಳ ಆರೋಗ್ಯದ ಚಿಂತೆ ಕಾಡುತ್ತಿದೆ. ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಓಮಿಕ್ರಾನ್ ರೂಪಾಂತರಿ ಕಂಡುಬಂದಿದ್ದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ದಕ್ಷಿಣ ಆಫ್ರಿಕಾ ತಜ್ಞರಲ್ಲಿ ಆತಂಕವನ್ನುಂಟುಮಾಡಿದೆ. ಆದರೆ ಈ ಓಮಿಕ್ರಾನ್ ಡೆಲ್ಟಾ ಹಾಗೂ ಬೀಟಾಗಿಂತ ಅಧಿಕ ಗಂಭೀರ ಪರಿಣಾಮವನ್ನು ಉಂಟು ಮಾಡಲ್ಲ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಆದರೆ ಮಕ್ಕಳಲ್ಲಿ ಸೋಂಕು ಹರಡುವ ಪ್ರಮಾಣವು ಅಧಿಕವಾಗುವ ಆತಂಕ ಇದೆ.
ಹಲವು ದೇಶಗಳಲ್ಲಿ ಇದು ಕೋವಿಡ್ ನಾಲ್ಕನೇ ಅಲೆಯ ಆರಂಭವಾಗಿದ್ದು ವಿಶೇಷವಾಗಿ ಮಕ್ಕಳಲ್ಲಿ ಸೇರಿದಂತೆ ಎಲ್ಲಾ ವಯೋಮಾನದವರಲ್ಲಿ ಬೇಗವಾಗಿ ಹರಡುತ್ತಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ (NICD)ಯ ಡಾ ವಾಸಿಲಾ ಜಸ್ಸತ್ ಹೇಳಿದ್ದಾರೆ. ಈ ಮೊದಲು ಒಂದು ಮತ್ತು ಎರಡನೇ ಕೋವಿಡ್ ಅಲೆ ಸಂದರ್ಭದಲ್ಲಿ ಮಕ್ಕಳು ಹೆಚ್ಚಾಗಿ ಸೋಂಕಿಗೆ ತುತ್ತಾಗಿರಲಿಲ್ಲ. ಆಸ್ಪತ್ರೆಗಳಿಗಂತೂ ದಾಖಲಾಗಿರುವ ಮಕ್ಕಳ ಸಂಖ್ಯೆ ಇಡೀ ವಿಶ್ವದಲ್ಲಿ ಕಡಿಮೆಯೇ. ಆದರೆ ಮೂರನೇ ಅಲೆಯಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಮತ್ತು 15ರಿಂದ 19 ವರ್ಷದೊಳಗಿನ ಹದಿಹರೆಯದವರು ಮೂರನೇ ಅಲೆಯ ಕೋವಿಡ್ ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ.
ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ಓಮಿಕ್ರಾನ್‌ನಿಂದಾಗಿ ದೇಶದಲ್ಲಿ ಕೋವಿಡ್ 4ನೇ ಅಲೆ ಕಾಣಿಸಿಕೊಂಡಿದೆ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ಈಗಾಗಲೇ ಅಧಿಕೃತ ಘೋಷಣೆ ಮಾಡಿದೆ. ಇದರಿಂದಾಗಿ ಇತರೆ ದೇಶಗಳಲ್ಲಿಯೂ ಭೀತಿ ಉಂಟಾಗಿದೆ. ಅದರಲ್ಲೂ ಓಮಿಕ್ರಾನ್ ಪತ್ತೆಯಾದ ಬಳಿಕ ಚಿಕ್ಕ ಮಕ್ಕಳು ಮತ್ತು ಯುವಸಮೂಹದಲ್ಲೇ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಆಫ್ರಿಕಾದಲ್ಲಿ ಮೊದಲ ಓಮಿಕ್ರಾನ್ ಕೇಸು ಪತ್ತೆಯಾದ ಗೌಟೆಂಗ್ ಪ್ರಾಂತ್ಯದಲ್ಲಿ ಪತ್ತೆಯಾದ ಒಟ್ಟು ಪ್ರಕರಣದಲ್ಲಿ ಶೇ.10ರಷ್ಟುಮಕ್ಕಳದ್ದೇ ಆಗಿದೆ. ಅದರಲ್ಲೂ 0-2 ವರ್ಷ ಮತ್ತು 28-38ರ ವಯೋಮಾನದವರಲ್ಲೇ ಹೆಚ್ಚಿನ ಸೋಂಕು ಕಂಡುಬಂದಿದೆ. ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ 180ಕ್ಕೂ ಹೆಚ್ಚು ಒಮಿಕ್ರೋನ್ ಪ್ರಕರಣ ಪತ್ತೆಯಾಗಿದೆ.












Click it and Unblock the Notifications