
ಪುರುಷರ ನಡುವೆ ಲೈಂಗಿಕ ಸಂಬಂಧ; ಸಿಂಗಾಪುರ, ವಿಯೆಟ್ನಾಂನಲ್ಲಿ ಬದಲಾವಣೆಯ ಗಾಳಿ
ನವದೆಹಲಿ, ಆಗಸ್ಟ್ 22: ಪುರುಷರ ನಡುವೆ ಲೈಂಗಿಕ ಸಂಬಂಧವನ್ನು ಅಪರಾಧಮುಕ್ತಗೊಳಿಸುತ್ತೇವೆ ಎಂದು ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಭಾನುವಾರ ಹೇಳಿದ್ದಾರೆ. ಸಿಂಗಾಪುರದ ಸಮಾಜದಲ್ಲಿ ಸಲಿಂಗಿ ಪುರುಷರಿಗೆ ಹೆಚ್ಚೆಚ್ಚು ಮಾನ್ಯತೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಸಲಿಂಗಿಗಳ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸುವ ಅಗತ್ಯತೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇದೇ ವೇಳೆ ಸಲಿಂಗಿಗಳ ಮದುವೆಯನ್ನು ಸರಕಾರ ಮಾನ್ಯ ಮಾಡಲು ಇನ್ನೂ ಸಿದ್ಧವಿಲ್ಲ. ಗಂಡು ಮತ್ತು ಹೆಣ್ಣಿನ ನಡುವೆ ಆಗುವ ಮದುವೆಗೆ ಮಾತ್ರ ಮಾನ್ಯತೆ ಇದೆ. ಹೆಣ್ಣು ಮತ್ತು ಹೆಣ್ಣು, ಗಂಡು ಮತ್ತು ಗಂಡು ಆಗುವ ಮದುವೆ ಈಗಲೂ ಅಕ್ರಮವೇ. ಈಗ ಸಿಂಗಾಪುರ ಸರಕಾರ ಮಾಡಲು ಹೊರಟಿರುವುದು ಗಂಡು ಮತ್ತು ಗಂಡು ನಡುವಿನ ಲೈಂಗಿಕ ಸಂಬಂಧಕ್ಕೆ ಇದ್ದ ಅಪರಾಧೀಕರಣವನ್ನು ಹಿಂಪಡೆದುಕೊಳ್ಳುವ ಕ್ರಮವಾಗಿದೆ.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಚಿಲಿ
"ಸಲಿಂಗಿಗಳ ಲೈಂಗಿಕ ಸಂಬಂಧವನ್ನು ಡೀಕ್ರಿಮಿನಲೈಸ್ ಮಾಡುವ ಕ್ರಮ ಸರಿಯಾದುದು ಎಂದು ನನ್ನ ಭಾವನೆ. ಸಿಂಗಾಪುರದ ಬಹುತೇಕ ಜನರು ಇದನ್ನು ಒಪ್ಪುತ್ತಾರೆ" ಎಂದು ಪ್ರಧಾನಿ ಲೀ ಸೀನ್ ಲೂಂಗ್ ಸಿಂಗಾಪುರದ ರಾಷ್ಟ್ರೀಯ ದಿನ ಸಮಾವೇಶದ ಭಾಷಣದ ವೇಳೆ ಹೇಳಿದ್ದಾರೆ.
ಸಿಂಗಾಪುರದ ಅಪರಾಧ ಸಂಹಿತೆಯ ಸೆಕ್ಷನ್ 377A ನಲ್ಲಿ ಪುರುಷರ ನಡುವಿನ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈಗ ಸರಕಾರವು ಈ ಕಾನೂನನ್ನು ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ.
"ಸೆಕ್ಷನ್ 377A ಅನ್ನು ನಾವು ರದ್ದು ಮಾಡುತ್ತೇವಾದರೂ ಮದುವೆ ವ್ಯವಸ್ಥೆಯನ್ನು ಅಲುಗಾಡಿಸುವುದಿಲ್ಲ. ಈ ಕಾನೂನು ಪ್ರಕಾರ, ಗಂಡು ಮತ್ತು ಹೆಣ್ಣಿನ ನಡುವಿನ ಮದುವೆಗೆ ಮಾತ್ರ ಮಾನ್ಯತೆ ನೀಡಲಾಗುತ್ತದೆ" ಎಂದು ಪ್ರಧಾನಿಗಳು ತಿಳಿಸಿದ್ದಾರೆ.
ರಾಜಕುಮಾರ ಸಲಿಂಗಿಯಾದರೆ? ಭಾರತದ ಈ ಮರಿದೊರೆ ಪಟ್ಟ ಪಾಡು ಅಷ್ಟಿಷ್ಟಲ್ಲ
ವಿಯೆಟ್ನಾಂನಲ್ಲಿ ಸಲಿಂಗಿಗಳ ಮದುವೆಗೆ ಕಾನೂನು
ಸಿಂಗಾಪುರ ಸರಕಾರ ಸಲಿಂಗಿಗಳ ನಡುವಿನ ಲೈಂಗಿಕ ಸಂಬಂಧವನ್ನು ಸಕ್ರಮಗೊಳಿಸುವ ಕಾನೂನಿಗೆ ಮುಂದಾದರೆ ವಿಯೆಟ್ನಾಂನಲ್ಲಿ ಸಲಿಂಗಿಗಳ ಮದುವೆಯನ್ನೇ ಮಾನ್ಯ ಮಾಡಲು ಪ್ರಯತ್ನ ನಡೆದಿದೆ.

ಇತ್ತೀಚೆಗೆ ವಿಯೆಟ್ನಾಂ ಸರಕಾರ ಸಲಿಂಗಕಾಮ ರೋಗವಲ್ಲ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಮಾನವ ಹಕ್ಕು ಹೋರಾಟಗಾರ ಫೋಂಗ್ ವುವೋಂಗ್ ಅವರು ಪುರುಷ ಸಲಿಂಗಿಗಳ ನಡುವಿನ ವಿವಾಹಕ್ಕೆ ಕಾನೂನು ಮಾನ್ಯತೆ ಕೊಡುವಂತೆ ಅಭಿಯಾನ ಆರಂಭಿಸಲು ನಿರ್ಧರಿಸಿದ್ದಾರೆ.
"ಎಲ್‌ಜಿಬಿಟಿ (ಸಲಿಂಗಿ ಮತ್ತು ತೃತೀಯ ಲಿಂಗಿ ಸಮುದಾಯ) ಒಂದು ಕಾಯಿಲೆ ಅಲ್ಲ ಎಂದು ಹೇಳಿರುವುದು ಮತ್ತು ಕನ್ವರ್ಷನ್ ಥೆರಪಿ ಕ್ರಮವನ್ನು ಖಂಡಿಸಿರುವುದು ಕನಸಿನಂತೆ ಇದೆ" ಎಂದು ಎಲ್‌ಜಿಬಿಟಿ ಹಕ್ಕುಗಳ ಹೋರಾಟಗಾರನೂ ಆದ ಫೋಂಗ್ ವುವೋಂಗ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)