Pakistan Crisis : ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಮತ; ಪಿಎಂ ರೇಸ್‌ನಲ್ಲಿ ಶಹಬಾಜ್ ಷರೀಫ್
ಇಸ್ಲಾಮಾಬಾದ್, ಏ. 9: ಪಾಕಿಸ್ತಾನದ ಲೋಕಸಭೆಯಲ್ಲಿ ಬಹುಮತ ಕಳೆದುಕೊಂಡಿರುವ ಇಮ್ರಾನ್ ಖಾನ್ ವಿರುದ್ಧ ಇಂದು ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಯಲಿದೆ. ಇಮ್ರಾನ್ ಖಾನ್ ಸರಕಾರ ಬಹುಮತ ಸಾಬೀತು ಮಾಡುವುದು ಬಹುತೇಕ ಅಸಾಧ್ಯ ಎಂದು ಭಾವಿಸಲಾಗಿದೆ. ಅದನ್ನ ಇಮ್ರಾನ್ ಖಾನ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಜಯವಾಗಿ ಹೊಸ ಸರಕಾರ ಬಂದಲ್ಲಿ ಅದನ್ನು ತಾನು ಒಪ್ಪಿಕೊಳ್ಳುವುದಿಲ್ಲ. ಕಾನೂನಾತ್ಮಕವಾಗಿ ಹೋರಾಡುವುದಾಗಿಯೂ ಅವರು ಹೇಳಿದ್ದಾರೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಪಾಕ್ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಮತ್ತು ಮತದಾನ ನಡೆಯಲಿದೆ.
ನಾನು ಈ 'ಆಮದು' ಸರಕಾರವನ್ನು ಒಪ್ಪುವುದಿಲ್ಲ. ಒಂದು ವೇಳೆ ಹೊಸ ಸರಕಾರ ಅಸ್ತಿತ್ವಕ್ಕೆ ಬಂದರೆ ಜನರು ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಇಮ್ರಾನ್ ಖಾನ್ ನಿನ್ನೆ ಶುಕ್ರವಾರ ಕರೆ ಕೊಟ್ಟಿದ್ದರು. ಪಾಕಿಸ್ತಾನದ ಪ್ರಧಾನಿಗೆ ಕುರ್ಚಿ ಉಳಿಸಿಕೊಳ್ಳುವ ವಿಶ್ವಾಸ ಬಹುತೇಕ ಗತಿಸಿಹೋಗಿದೆ.
ಏಪ್ರಿಲ್ 3ರಂದೇ ಪಾಕಿಸ್ತಾನದ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಆದರೆ, ಡೆಪ್ಯುಟಿ ಸ್ಪೀಕರ್ ಖಾಸಿಂ ಸುರಿ ಅವರು ಈ ಅವಿಶ್ವಾಸಮತವನ್ನು ಅಸಾಂವಿಧಾನಿಕ ಎಂದು ತೀರ್ಮಾನಿಸಿ ತಿರಸ್ಕರಿಸಿದರು. ಅದಾದ ಬಳಿಕ ಇಮ್ರಾನ್ ಖಾನ್ ಅವರು ಅಲ್ಲಿನ ಲೋಕಸಭೆಯನ್ನೇ ವಿಸರ್ಜಿಸಿ ಚುನಾವಣೆಗೆ ಹೋಗುವ ಪ್ರಯತ್ನ ಮಾಡಿದರು.

ವಿಪಕ್ಷಗಳು ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋದವು. ಐದು ಸದಸ್ಯರ ನ್ಯಾಯಪೀಠವು ಮಹತ್ವದ ತೀರ್ಪು ನೀಡಿ, ಅವಿಶ್ವಾಸಮತ ತಿರಸ್ಕರಿಸಿದ್ದು ಮತ್ತು ಲೋಕಸಭೆ ವಿಸರ್ಜನೆ ಮಾಡಿದ್ದು ಅಸಿಂಧು ಎಂದು ತೀರ್ಮಾನಿಸಿತು. ಈಗ ನ್ಯಾಯಾಲಯದ ನಿರ್ದೇಶನದ ಮೇರೆಗೆ ಇಮ್ರಾನ್ ಖಾನ್ ಅವರು ಅವಿಶ್ವಾಸ ಮತ ಎದುರಿಸಬೇಕಾಗಿದೆ.
ವಿದೇಶ ಶಕ್ತಿಗಳ ಪಿತೂರಿ ಎಂದ ಇಮ್ರಾನ್:
ಇಮ್ರಾನ್ ಖಾನ್ ಅವರು ತಮ್ಮ ಸರಕಾರವನ್ನು ಪತನಗೊಳಿಸಲು ವಿದೇಶೀ ಶಕ್ತಿಗಳ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ ಅವರು ಅಮೆರಿಕದ ಹೆಸರನ್ನೂ ಹೇಳಿರುವುದು ಕುತೂಹಲ ಮೂಡಿಸಿದೆ. ತಮ್ಮ ಸರಕಾರವನ್ನು ಬೆದರಿಸಿ ತನಗೆ ಪತ್ರ ಬಂದಿದೆ ಎಂಬ ಸಂಗತಿಯನ್ನ ತಿಳಿಸಿರುವ ಅವರು ಆ ಪತ್ರದ ವಿವರವನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಹುನ್ನಾರ ಆರೋಪ ಸಂಬಂಧ ತನಿಖೆ ನಡೆಸಲು ಪಾಕಿಸ್ತಾನ ಸರಕಾರ ಒಂದು ತನಿಖಾ ಆಯೋಗ ರಚಿಸಿರುವುದು ಹೌದು.
ಅವಿಶ್ವಾಸ ನಿರ್ಣಯದ ಮೇಲೆ ನಡೆಯುವ ಎರಡು ದಿನಗಳ ಅಧಿವೇಶನದಲ್ಲಿ ಪಾಕಿಸ್ತಾನದ ಜನರಿಗೆ ಸತ್ಯದ ಅರಿವು ಮಾಡಿಸುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.

ಶಹಬಾಜ್ ಷರೀಫ್ ಮುಂದಿನ ಪಿಎಂ?
ಇಮ್ರಾನ್ ಖಾನ್ ಅವರು ಇಂದು ಬಹುಮತ ಸಾಬೀತುಪಡಿಸಲು ವಿಫಲರಾದಲ್ಲಿ ಪಾಕಿಸ್ತಾನದ ವಿಪಕ್ಷ ಪಿಎಂಎಲ್(ಎನ್) ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಬಹುಮತಕ್ಕೆ ಬೇಕಾದ ಸಂಖ್ಯೆಯನ್ನ ಆ ಪಕ್ಷ ಈಗಾಗಲೇ ಪರೋಕ್ಷವಾಗಿ ತೋರಿಸಿದೆ. ಪಕ್ಷದ ಮುಖ್ಯಸ್ಥ 70 ವರ್ಷದ ಶಹಬಾಜ್ ಷರೀಫ್ ಅವರು ಪ್ರಧಾನಿ ಆಗುವ ಎಲ್ಲಾ ಸಾಧ್ಯತೆ ಇದೆ.
ಶಹಬಾಜ್ ಷರೀಫ್ ಅನುಭವಿ ರಾಜಕಾರಣಿ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ. ಪಂಜಾಬ್ ಪ್ರಾಂತ್ಯದಲ್ಲಿ ಮೂರು ಬಾರಿ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಮೇಲಾಗಿ ಅವರು ಪಾಕಿಸ್ತಾನದ ಸೇನಾ ಪಡೆ ಜೊತೆ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ.

ಭಾರತಕ್ಕೆ ಹೋಗಿ ಎಂದು ಖಾನ್‌ಗೆ ತಾಕೀತು:
ಇಮ್ರಾನ್ ಖಾನ್ ಇತ್ತೀಚೆಗೆ ಭಾರತವನ್ನು ಹೊಗಳಿ ಕೆಲ ಬಾರಿ ಹೇಳಿಕೆಗಳನ್ನು ಕೊಟ್ಟಿದ್ದರು. ರಷ್ಯಾ ವಿಚಾರದಲ್ಲಿ ಅಮೆರಿಕದ ನಿಲುವಿಗೆ ಬದ್ಧವಾಗದೇ ಭಾರತ ವಿಭಿನ್ನ ನಿಲುವು ತೆಗೆದುಕೊಂಡಿದ್ದನ್ನು ಇಮ್ರಾನ್ ಖಾನ್ ಹೊಗಳಿದ್ದರು. ಭಾರತ ಆತ್ಮಗೌರವ ಇರುವ ದೇಶ. ಇಂಥ ದೇಶಕ್ಕೆ ಜಗತ್ತಿನ ಯಾವ ಸೂಪರ್ ಪವರ್ ಕೂಡ ಏನು ಮಾಡಲು ಆಗುವುದಿಲ್ಲ ಎಂದಿದ್ದರು.
ಇಮ್ರಾನ್ ಖಾನ್ ಅವರ ಹೇಳಿಕೆ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ. ಇಮ್ರಾನ್ ಖಾನ್ ಅವರಿಗೆ ಭಾರತದ ಮೇಲೆ ಪ್ರೀತಿ ಇದ್ದರೆ ಪಾಕಿಸ್ತಾನವನ್ನು ತೊರೆದು ಆ ದೇಶಕ್ಕೆ ಹೋಗಲಿ ಎಂದು ನವಾಜ್ ಷರೀಫ್ ಅವರ ಪುತ್ರಿ ಮಾರ್ಯಂ ಅವರು ಟಾಂಟ್ ಕೊಟ್ಟಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications