ರಷ್ಯಾದ ಅಸ್ತಿತ್ವಕ್ಕೆ ಬೆದರಿಕೆ ಹಾಕಿದರೆ ಬೀಳುತ್ತೆ ನ್ಯೂಕ್ಲಿಯರ್ ಬಾಂಬ್!
ವಾಶಿಂಗ್ಟನ್, ಮಾರ್ಚ್ 23: ಉಕ್ರೇನ್ ಯುದ್ಧದ ಮಧ್ಯೆ ರಷ್ಯಾದ ಅಸ್ತಿತ್ವಕ್ಕೆ ಬೆದರಿಕೆ ಎದುರಾದ ಸಂದರ್ಭದಲ್ಲಿ ಮಾತ್ರ ಪರಿಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವುದಾಗಿ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
"ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆಯೇ ನಮ್ಮ ಪರಿಕಲ್ಪನೆ ಆಗಿದೆ. ಜಾಗತಿಕ ಮಟ್ಟದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಯಾವಾಗ ಬಳಕೆ ಮಾಡಲಾಗುತ್ತದೆ ಎಂಬ ಕಾರಣಗಳನ್ನು ನೀವು ಓದಿಕೊಳ್ಳಿರಿ. ಒಂದು ವೇಳೆ ದೇಶದ ಅಸ್ತಿತ್ವಕ್ಕೆ ಬೆದರಿಕೆ ಎದುರಾದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಳಕೆ ಮಾಡಲಾಗುತ್ತದೆ," ಎಂದು ಎಚ್ಚರಿಸಿದ್ದಾರೆ.
ಉಕ್ರೇನ್ ಮೇಲೆ ಕಳೆದ ಫೆಬ್ರವರಿ 24ರಂದು ಮೊದಲ ಬಾರಿಗೆ ರಷ್ಯಾ ಸೇನಾ ಕಾರ್ಯಾಚರಣೆ ಶುರು ಮಾಡಿತು. ಅಲ್ಲಿಂದ ಇಲ್ಲಿಯವರೆಗೆ ಎರಡು ರಾಷ್ಟ್ರಗಳ ನಡುವೆ ಯುದ್ಧ ಪ್ರಾರಂಭವಾಗಿ 28 ದಿನಗಳೇ ಕಳೆದು ಹೋಗಿವೆ. ಅದಾಗ್ಯೂ, ಯುದ್ಧದಲ್ಲಿ ವ್ಲಾಡಿಮಿರ್ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಆಯ್ಕೆಯನ್ನು ಮಾಡದಂತೆ ಮನವೊಲಿಕೆ ಸಾಧ್ಯವಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

ದಾಳಿಗೆ ಸಿದ್ಧವಾಗಿರಿ ಎಂದು ಕರೆ ನೀಡಿರುವ ಪುಟಿನ್:
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಇಂದಿಗೂ ತಾರ್ಕಿಕ ಅಂತ್ಯ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಅಂದುಕೊಂಡಂತೆ ಕೀವ್ ಅನ್ನು ವಶಕ್ಕೆ ಪಡೆಯುವಲ್ಲಿ ಹಿನ್ನಡೆ ಅನುಭವಿಸಿರುವ ವ್ಲಾಡಿಮಿರ್ ಪುಟಿನ್, ಇದೀಗ ಪರಮಾಣು ದಾಳಿಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪರಮಾಣು ದಾಳಿ ನಡೆಸುವುದಕ್ಕೆ ಎಲ್ಲವೂ ಅಣಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪೆಸ್ಕೋವ್ ಹೇಳಿಕೆಗೆ ಪೆಂಟಗಾನ್ ವಕ್ತಾರರ ಪ್ರತಿಕ್ರಿಯೆ:
ಪರಮಾಣು ಶಸ್ತ್ರಾಸ್ತ್ರ ಪ್ರಯೋಗಕ್ಕೆ ಸಂಬಂಧಿಸಿದಂತೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ನೀಡಿರುವ ಹೇಳಿಕೆಗೆ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ಕೆರಳಿ ಕೆಂಡವಾಗಿದ್ದಾರೆ. ನೀವು ನ್ಯೂಕ್ಲಿಯರ್ ಬಾಂಬ್ ಬಳಸುವುದರ ಕುರಿತು ತೋರುತ್ತಿರುವ ನಿಲುವು ಸೂಕ್ತವಾಗಿಲ್ಲ. ಅದು ಜಾಗತಿಕ ಮಟ್ಟದಲ್ಲಿ ತೀರಾ ಅಪಾಯಕಾರಿ ಬೆಳವಣಿಗೆ ಎನಿಸಿಕೊಳ್ಳುತ್ತದೆ. ಅಂಥ ಶಸ್ತ್ರಾಸ್ತ್ರಗಳನ್ನು ಬಳಸುವ ವಿಚಾರದಲ್ಲಿ ಎಲ್ಲ ತಂತ್ರಗಳನ್ನು ಪುನಪರಿಶೀಲನೆ ನಡೆಸಬೇಕಾಗುತ್ತದೆ ಎಂದಿದ್ದಾರೆ.
ಜಗತ್ತಿನಲ್ಲಿ ರಷ್ಯಾ ಅತಿಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ರಾಷ್ಟ್ರದಲ್ಲಿ ನ್ಯೂಕ್ಲಿಯರ್ ಸಿಡಿಮದ್ದುಗಳ ಪ್ರಮಾಣ ಹೆಚ್ಚಾಗಿರುವುದೇ ಆತಂಕವನ್ನು ಸೃಷ್ಟಿಸುವಂತೆ ಮಾಡಿದೆ.
ನ್ಯಾಟೋ ರಾಷ್ಟ್ರಗಳಿಗೆ ಎಚ್ಚರಿಸಿರುವ ರಷ್ಯಾ:
ಉಕ್ರೇನ್ ಪರವಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ನ್ಯಾಟೋ ರಾಷ್ಟ್ರಗಳು ಬೆಂಬಲವಾಗಿ ನಿಂತುಕೊಂಡರೂ ಹಿಂದೆ ಸರಿಯುವ ಮಾತಿಲ್ಲ. ಉಕ್ರೇನ್ ಬೆಂಬಲಿಸುವ ನೀವೂ ಸಹ ತಕ್ಕ ದಂಡ ನೀಡಬೇಕಾಗುತ್ತದೆ ಎನ್ನುವ ಮೂಲಕ ಪರಮಾಣು ಬಾಂಬ್ ದಾಳಿ ನಡೆಸುವ ಬಗ್ಗೆ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದರು.
28ನೇ ದಿನಕ್ಕೆ ಕಾಲಿಟ್ಟ ಉಕ್ರೇನ್-ರಷ್ಯಾ ಯುದ್ಧ:
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವು 28ನೇ ದಿನಕ್ಕೆ ಕಾಲಿಟ್ಟಿದೆ. ಎರಡು ರಾಷ್ಟ್ರಗಳ ನಡುವೆ ನಡೆದ ಶಾಂತಿ ಮಾತುಕತೆಗಳು ವಿಫಲವಾಗುತ್ತಿವೆ. ರಷ್ಯಾ ವಿಧಿಸುತ್ತಿರುವ ಷರತ್ತು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ.
ರಷ್ಯಾದ ಪೈಲಟ್‌ಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, "ಅವರು ನಡೆಸುವ ಆದೇಶಗಳ ಬಗ್ಗೆ ಯೋಚಿಸದ ಎಲ್ಲಾ ರಷ್ಯಾದ ಪೈಲಟ್‌ಗಳಿಗೆ ನಾನು ಮತ್ತೊಮ್ಮೆ ಪುನರಾವರ್ತಿಸಿ ಹೇಳಲು ಬಯಸುತ್ತೇನೆ. ನಾಗರಿಕರನ್ನು ಕೊಲ್ಲುವುದು ಅಪರಾಧ, ಅದಕ್ಕೆ ನೀವು ಬೆಲೆ ತೆರಬೇಕಾಗುತ್ತದೆ" ಎಂದು ಝೆಲೆನ್ಸ್ಕಿ ಹೇಳಿದರು.












Click it and Unblock the Notifications