ಪರಮಾಣು ಬಾಂಬ್: ಅಮೆರಿಕ ಸೈಲೆಂಟ್ ಆಗಿದ್ರೆ ಸರಿ ಅಂತು ರಷ್ಯಾ!
ಮಾಸ್ಕೊ: ಅಮೆರಿಕದ ಹಣೆಬರಹವೇ ಅಷ್ಟು ಸಂಬಂಧವೇ ಇಲ್ಲದ ವಿಚಾರದಲ್ಲಿ ಕೈಹಾಕಿ ಕೈಸುಟ್ಟುಕೊಂಡು ಹೋಗೋದು ಅಮೆರಿಕನ್ನರ ವಾಡಿಕೆ ಅನ್ನೋ ಆರೋಪವಿದೆ. ಈ ಆರೋಪಕ್ಕೆ ತಕ್ಕಂತೆ ಅಮೆರಿಕ ನಾಯಕರು ಕೂಡ ನಡೆದುಕೊಳ್ಳುತ್ತಿದ್ದಾರೆ. ಈಗಲೂ ಅಷ್ಟೇ ರಷ್ಯಾ ವಿರುದ್ಧ ಪರಮಾಣು ದಾಳಿಯ ಆರೋಪ ಹೊರಿಸಿದ್ದ ವಿಶ್ವದ ದೊಡ್ಡಣ್ಣನಿಗೆ ರಷ್ಯಾ ವಾರ್ನಿಂಗ್ ಕೊಟ್ಟಿದೆ.
ಅಂದಹಾಗೆ ರಷ್ಯಾ & ಉಕ್ರೇನ್ ಯುದ್ಧ ಆರಂಭವಾಗಿ ಬರೋಬ್ಬರಿ 457 ದಿನವೇ ಕಳೆದಿದೆ. ಆದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ, ಭಯಾನಕ ಯುದ್ಧ ನಿಲ್ಲುತ್ತಿಲ್ಲ. ಹೀಗಾಗಿ ಎರಡೂ ರಾಷ್ಟ್ರಗಳ ನಡುವೆ ತಿಕ್ಕಾಟ ಕೂಡ ಜೋರಾಗಿದೆ. ಈ ಸಂದರ್ಭದಲ್ಲೇ ರಷ್ಯಾ ಸೇನೆ ಬೆಲಾರಸ್ ಗಡಿಯಲ್ಲಿ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸೋಕೆ ಸಜ್ಜಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದರು. ಅಮೆರಿಕ ಅಧ್ಯಕ್ಷರ ಈ ಮಾತಿಗೆ ರಷ್ಯಾದ ಕಡೆಯಿಂದ ಖಡಕ್ ಎಚ್ಚರಿಕೆ ಬಂದಿದ್ದು, ಸೈಲೆಂಟ್ ಆಗಿದ್ರೆ ಸರಿ ಎಂದಿದೆ ರಷ್ಯಾ (Russia Ukraine War).

ಬೈಡನ್ ವಿರುದ್ಧ ರಷ್ಯಾ ಕೆಂಡ!
ಅಷ್ಟಕ್ಕೂ ಬೆಲಾರಸ್‌ನಲ್ಲಿ ರಷ್ಯಾ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸಲಿರುವ ವರದಿಗಳನ್ನು ನೋಡಿ ಆತಂಕವಾಗಿದೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದ್ದರು. ಅಮೆರಿಕ ಅಧ್ಯಕ್ಷರ ಈ ಹೇಳಿಕೆಗೆ ಅಮೆರಿಕದಲ್ಲಿರುವ ರಷ್ಯಾದ ರಾಯಭಾರ ಕಚೇರಿ ಸರಿಯಾಗೇ ತಿರುಗೇಟು ನೀಡಿದೆ. ನಮ್ಮ ಮೇಲೆ ಅಮೆರಿಕ ಅತ್ಯಾಧುನಿಕ ಶಸ್ತ್ರಗಳನ್ನು ಬಳಸಿ ಯುದ್ಧ ಮಾಡಬಹುದು. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸುವುದು ರಷ್ಯಾ & ಬೆಲಾರಸ್‌ನ ಹಕ್ಕು ಎನ್ನುವ ಮೂಲಕ ಅಮೆರಿಕ ತೆಪ್ಪಗೆ ಅವರ ಕೆಲಸ ನೋಡಿಕೊಳ್ಳಲಿ ಎಂದಿದೆ ರಷ್ಯಾ.
ತಂಟೆಗೆ ಬಂದ್ರೆ ತಟ್ಟಿಬಿಡ್ತೀವಿ!
ಈ ಕ್ರಮವನ್ನು ಅಂತರರಾಷ್ಟ್ರೀಯ ಕಾನೂನಿನ ಹೊಣೆಗಾರಿಕೆಗೆ ಬದ್ಧವಾಗಿ ತೆಗೆದುಕೊಂಡಿದ್ದೇವೆ. ನಮ್ಮ ಮೇಲೆ ಇಂತಹ ಆರೋಪ ಮಾಡುವ ಮೊದಲು, ಹತ್ತಾರು ವರ್ಷಗಳಿಂದ ಅಮೆರಿಕ ಯುರೋಪ್‌ನಲ್ಲಿ ಹೊಂದಿರುವ ಭಾರಿ ಪ್ರಮಾಣದ ಪರಮಾಣು ಶಸ್ತ್ರಗಾರದ ಬಗ್ಗೆ ಮಾತನಾಡಲಿ. ನ್ಯಾಟೋ ಜೊತೆ ಸೇರಿ ಪರಮಾಣು ಶಸ್ತ್ರಗಳ ಹಂಚಿಕೆ ವ್ಯವಸ್ಥೆ ಮಾಡಿಕೊಂಡಿದೆ. ಹೀಗಾಗಿ ತನ್ನ ಕೆಲಸ ತಾನು ಮೊದಲು ನೋಡಿಕೊಳ್ಳಲಿ, ನಂತರ ನಮಗೆ ಅಮೆರಿಕ ಬುದ್ಧಿ ಹೇಳಲಿ ಎನ್ನುವ ರೀತಿ ರಷ್ಯಾ ತಿರುಗೇಟು ನೀಡಿದೆ. ಹಾಗೇ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎನ್ನುವ ಮುನ್ಸೂಚನೆ ನೀಡಿದೆ ರಷ್ಯಾ.

ರಷ್ಯಾ ಸೋಲಿಸಲು ಅಮೆರಿಕದ ಕುತಂತ್ರ?
ಉಕ್ರೇನ್‌ಗೆ ಈಗ ಅಮೆರಿಕ ಮಾತ್ರವಲ್ಲ ನ್ಯಾಟೋ ಅಂದ್ರೆ ಯುರೋಪ್‌ನ ಬಹುತೇಕ ರಾಷ್ಟ್ರಗಳು ನೆರವು ನೀಡುತ್ತಿವೆ. ಉಕ್ರೇನ್ ಯುದ್ಧದಲ್ಲಿ ಗೆದ್ರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಗೆಲುವು ಸಿಗುತ್ತೆ. ಪ್ರಮುಖವಾಗಿ ಯುರೋಪ್‌ನಲ್ಲಿ ಹೊಸ ಯುಗ ಸೃಷ್ಟಿಸಿ ಅಮೆರಿಕದ ಹಿಡಿತ ಬಿಗಿ ಮಾಡುವ ಸಂಭವ ಹೆಚ್ಚಾಗಿರುವ ಕಾರಣ ಉಕ್ರೇನ್ ಗೆಲುವಿಗೆ ಅಮೆರಿಕದ ಜೊತೆ ಬ್ರಿಟನ್ ಹಾಗೂ ಯುರೋಪ್ ಒಕ್ಕೂಟ ಕೂಡ ಬಲವಾಗಿ ನಿಂತಿದೆ. ಅದರಲ್ಲೂ ನ್ಯಾಟೋ ಪಡೆ ಉಕ್ರೇನ್ ಗಡಿಯಲ್ಲಿ ರಹಸ್ಯವಾಗಿ ವಿನಾಶಕಾರಿ ಅಸ್ತ್ರಗಳನ್ನ ನೀಡಿ ಹೋಗುತ್ತಿರುವ ಆರೋಪ ಕೂಡ ಇದೆ.
ಆರ್ಥಿಕ ಮಹಾ ಕುಸಿತಕ್ಕೆ ಯುದ್ಧದ ಮುನ್ನುಡಿ
ಕೊರೊನಾ ಕಂಟಕದ ಬಳಿಕ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ, ಇದರ ನಡುವೆ ಯುದ್ಧ ಬೇರೆ ಶುರುವಾಗಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಯುರೋಪ್ ಖಂಡ ಆರ್ಥಿಕ ಕುಸಿತ ಎದುರಿಸುತ್ತಿದೆ. ಇನ್ನು ಅಮೆರಿಕದ ಪಾಡು ಕೇಳಬೇಕಿಲ್ಲ. ಈ ಕಷ್ಟದಲ್ಲೇ ಬ್ಯಾಂಕ್‌ಗಳು ಕೂಡ ಅಮೆರಿಕದಲ್ಲಿ ಬಾಗಿಲು ಹಾಕಿಕೊಂಡು ಹೋಗುತ್ತಿವೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ರಷ್ಯಾ ಸೋಲಿಸಿ, ಆದಷ್ಟು ಬೇಗ ಯುದ್ಧ ಮುಗಿಸುವ ಐಡಿಯಾ ಅಮೆರಿಕದ್ದು. ಆದ್ರೆ ಏನ್ ಮಾಡೋದು ರಷ್ಯಾ ಸೋಲುತ್ತಿಲ್ಲ.

ಇದನ್ನೆಲ್ಲಾ ನೋಡುತ್ತಿದ್ದರೆ ರಷ್ಯಾ & ಉಕ್ರೇನ್ ಯುದ್ಧ ಇನ್ನೂ ಹತ್ತಾರು ವರ್ಷ ಮುಂದುವರಿದು, ವಿನಾಶದ ಮುನ್ಸೂಚನೆ ನೀಡ್ತಿದೆ. ಹಾಗೇ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸುತ್ತ ರಷ್ಯಾ ದಶಾವತಾರ ತೋರಿಸುತ್ತಿದೆ. ಇದೆಲ್ಲಾ ಏನೇ ಇರಲಿ ಈ ಯುದ್ಧ ಜಗತ್ತಿನ ಭವಿಷ್ಯದ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು? ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ.












Click it and Unblock the Notifications