Ukraine War: ಉಕ್ರೇನ್ ಹಣೆಬರಹ ನಿರ್ಧರಿಸಲಿದೆ ಸೌದಿ ಸಭೆ!
ರಷ್ಯಾ & ಉಕ್ರೇನ್ ಬಡಿದಾಟಕ್ಕೆ ಕೊನೆಗೂ ಬ್ರೇಕ್ ಬೀಳುವ ಕಾಲ ಹತ್ತಿರಕ್ಕೆ ಬಂದಿದ್ದು, ಈ ಮೂಲಕ ಯುರೋಪ್ ದೇಶಗಳು ಒಂದಷ್ಟು ನಿರಾಳವಾಗಿವೆ. ರಷ್ಯಾ & ಉಕ್ರೇನ್ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯಲು ಇದೀಗ ಎರಡೂ ದೇಶಗಳು ನಿರ್ಧಾರ ಮಾಡಿದ್ದರೂ ಅದಕ್ಕೆ ಸರಿಯಾದ ಸೂಚನೆ ಸಿಕ್ಕಿಲ್ಲ. ಇದೇ ಕಾರಣಕ್ಕೆ ಕದನ ವಿರಾಮ ಘೋಷಣೆಗೆ ಮೊದಲು ರಷ್ಯಾ ಹಾಗೂ ಉಕ್ರೇನ್ ಜೊತೆಗೆ ಚರ್ಚೆ ಮಾಡಲು ಅಮೆರಿಕ ವೇದಿಕೆ ರೂಪಿಸಿದೆ. ಇದಕ್ಕಾಗಿ ಈಗ ಸೌದಿ ಅರೇಬಿಯಾದಲ್ಲಿ ಮಹತ್ವದ ಸಭೆ ಆಯೋಜನೆ ಮಾಡಲಾಗಿದೆ.
ಮಾರ್ಚ್ 23ರ ಭಾನುವಾರ ಮಹತ್ವದ ಸಭೆ ನಡೆಯಲಿದ್ದು, ಸೌದಿ ಅರೇಬಿಯಾದಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ಈ ಸಭೆಯಲ್ಲಿ ಅಂತಿಮ ಹಂತದ ಚರ್ಚೆ ನಡೆಸಲಿರುವ ರಷ್ಯಾ & ಉಕ್ರೇನ್ ಅಧಿಕಾರಿಗಳು ಅಮೆರಿಕ ನೇತೃತ್ವದಲ್ಲಿ ಕದನ ವಿರಾಮ ಘೋಷಣೆಯನ್ನು ಮಾಡುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ಹಿನ್ನೆಲೆ ಇದೀಗ ಸಭೆ ಆಯೋಜನೆ ಮಾಡಲಾಗಿದ್ದು, ಭಾನುವಾರವೇ ರಷ್ಯಾ & ಉಕ್ರೇನ್ ಅಧಿಕಾರಿಗಳು ಸೌದಿಗೆ ತೆರಳಲಿದ್ದಾರೆ. ಹಾಗಾದರೆ ಯುದ್ಧ ಸಂಪೂರ್ಣವಾಗಿ ನಿಲ್ಲುತ್ತಾ? ಮುಂದೆ ಓದಿ.

ಮೊದಲು 30 ದಿನಗಳ ಕದನ ವಿರಾಮ
ರಷ್ಯಾ & ಉಕ್ರೇನ್ ದಿಢೀರ್ ಕದನ ವಿರಾಮ ಘೋಷಣೆ ಮಾಡುತ್ತಿಲ್ಲ, ಬದಲಾಗಿ ಮೊದಲಿಗೆ 30 ದಿನಗಳ ಕದನ ವಿರಾಮ ಘೋಷಣೆ ಆಗಲಿದೆ. ಈ 30 ದಿನಗಳ ಕದನ ವಿರಾಮ ಹೇಗೆಲ್ಲಾ ಪರಿಣಾಮ ಬೀರಲಿದೆ? ಎಂಬುದನ್ನು ಪರಿಶೀಲನೆ ನಡೆಸಿದ ನಂತರ ಕದನ ವಿರಾಮ ಮತ್ತಷ್ಟು ದಿನಗಳಿಗೆ ಮುಂದೂಡಿಕೆ ಆಗಲಿದೆ. ಹೀಗಾಗಿ ಇದೀಗ ರಷ್ಯಾ & ಉಕ್ರೇನ್ ಅಧಿಕಾರಿಗಳ ಸಭೆಯ ಮೇಲೆ ಎಲ್ಲರ ಚಿತ್ತ ಮೂಡಿದ್ದು, ಭಾನುವಾರ ನಡೆಯುವ ಸಭೆ ಎಲ್ಲವನ್ನೂ ನಿರ್ಧರಿಸುತ್ತದೆ. ಹಾಗೇ ಜಾಗತಿಕ ಮಟ್ಟದಲ್ಲಿ ಈ ಸಭೆ ಕುತೂಹಲ ಕೆರಳಿಸಿದೆ.
ಭವಿಷ್ಯದ ಯುದ್ಧವನ್ನೂ ತಡೆಯಬೇಕು!
ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಇದೀಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಮೊದಲನೇ ಯಶಸ್ಸು ಕಂಡಿದೆ. ಆ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇನ್ನು ಕೆಲವೇ ದಿನಗಳಲ್ಲಿ ಯುದ್ಧ ನಿಲ್ಲಲಿದ್ದು, ಭವಿಷ್ಯದಲ್ಲಿ ಎರಡೂ ದೇಶಗಳು ಮತ್ತೆ ಯುದ್ಧದ ಸಹವಾಸಕ್ಕೆ ಹೋಗದಂತೆ ತಡೆಯುವ ಜವಾಬ್ದಾರಿ ಕೂಡ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದ ಮೇಲೆ ಇರಲಿದೆ. ಈ ಕಾರಣಕ್ಕೆ ಅಳೆದು & ತೂಗಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದು, ಭಾರಿ ಕುತೂಹಲದ ಹಂತಕ್ಕೆ ತಲುಪಿದೆ ಈ ಯುದ್ಧ.












Click it and Unblock the Notifications