ಉಗ್ರರ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ರಷ್ಯಾ: ಭಯೋತ್ಪಾದಕರ ದಾಳಿಗೆ 60 ಜನರು ಬಲಿ
ಭಯೋತ್ಪಾದಕರ ಅಟ್ಟಹಾಸಕ್ಕೆ ಇಡೀ ರಷ್ಯಾ ರಾಷ್ಟ್ರವೇ ಬೆಚ್ಚಿಬಿದ್ದಿದ್ದು, ಸಂಗೀತ ಕಾರ್ಯಕ್ರಮದ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಸುಮಾರು 60 ಜನರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಉಗ್ರರು ಶುಕ್ರವಾರ ಮಾಸ್ಕೋದಲ್ಲಿ ನಡೆಯುತ್ತಿದ್ದ ಅತಿ ದೊಡ್ಡ ಸಂಗೀತ ಕಛೇರಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದು, ಇಡೀ ಹಾಲ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಉಗ್ರರ ದಾಳಿಯಲ್ಲಿ ದಾಳಿಯಲ್ಲಿ ಕನಿಷ್ಠ 60 ಜನ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಾಸ್ಕೋದ ಪಶ್ಚಿಮ ಅಂಚಿನಲ್ಲಿರುವ, 6,200 ಜನರಿಗೆ ಅವಕಾಶ ಕಲ್ಪಿಸುವ ದೊಡ್ಡ ಸಂಗೀತ ಹಾಲ್ ಆದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಹಾಲ್‌ಗೆ ನುಗ್ಗಿದ ನಾಲ್ವರು ಬಂದೂಕುದಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದಾರೆ. ನೋಡ ನೋಡ್ತಿದ್ದಂತೆ ಹಾಲ್‌ಗೆ ಬೆಂಕಿ ಇಟ್ಟು ಅಟ್ಟಹಾಸ ಮೆರೆದಿದ್ದಾರೆ.
ರಷ್ಯಾದ ರಾಕ್ ಬ್ಯಾಂಡ್ 'ಪಿಕ್ನಿಕ್' ಶೋಗಾಗಿ ಜನರು ಸೇರುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ. ಕಾರ್ಯಕ್ರಮದಲ್ಲಿ ಮೊದಲು ಸ್ಫೋಟಕಗಳನ್ನು ಎಸೆದ ಉಗ್ರರು, ಜನ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದಂತೆ ಸಂಪೂರ್ಣ ಹಾಲ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲವು ರಷ್ಯಾದ ಮಾಧ್ಯಮಗಳ ವರದಿಗಳಲ್ಲಿ ತಿಳಿಸಲಾಗಿದೆ.

ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಈ ಭೀಕರ ದಾಳಿಯನ್ನು ದೊಡ್ಡ ದುರಂತ ಎಂದಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ 50 ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಐದು ಮಕ್ಕಳು ಸೇರಿದಂತೆ 115 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಭದ್ರತಾ ಪಡೆಗಳನ್ನು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಬೆಂಕಿ ನಂದಿಸಲು 320 ಅಗ್ನಿಶಾಮಕ ವಾಹನಗಳು, 3 ಹೆಲಿಕಾಫ್ಟರ್ಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಉಗ್ರರ ದಾಳಿಯಲ್ಲಿ ಕನ್ಸರ್ಟ್ ಹಾಲ್ನ ಮೇಲ್ಛಾವಣಿ ಸಂಪೂರ್ಣ ಬೆಂಕಿಹಾಹುತಿಯಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications