ಸಿರಿಯಾ ಉಗ್ರರ ನೆಲೆಯ ಮೇಲೆ ರಷ್ಯಾ ವೈಮಾನಿಕ ದಾಳಿ
ಮಾಸ್ಕೋ, ಸೆಪ್ಟೆಂಬರ್ 5: ಸಿರಿಯಾದಲ್ಲಿನ ಬಂಡುಕೋರ ಉಗ್ರರ ಪ್ರಬಲ ನೆಲೆಯಾದ ಇಡ್ಲಿಬ್ ಪ್ರಾಂತ್ಯದ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ.
ನಾಲ್ಕು ಯುದ್ಧ ವಿಮಾನಗಳು ಇಡ್ಲಿಬ್‌ನಲ್ಲಿ ನೆಲೆಯೂರಿರುವ ಉಗ್ರರ ಸಂಘಟನೆ ಅಲ್ ನುಸ್ರಾದ ಮೇಲೆ ಬಾಂಬ್ ದಾಳಿ ನಡೆಸಿರುವುದಾಗಿ ರಷ್ಯಾ ಖಚಿತಪಡಿಸಿದೆ.
ಉಗ್ರರು ಡ್ರೋಣ್‌ಗಳನ್ನು ಇರಿಸಿದ್ದ ಸ್ಥಳದ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶಪಡಿಸಲಾಗಿದೆ. ಅಲ್ಲದೆ, ರಷ್ಯಾದ ಹೆಮಿಮ್ ವಾಯು ನೆಲೆಯ ಮೇಲೆ ಉಗ್ರರ ದಾಳಿ ನಡೆಸಲು ಬಳಸಿಕೊಂಡಿದ್ದ ಸ್ಥಳವನ್ನು ಪತ್ತೆಹಚ್ಚಲಾಗಿದೆ.

ಕಳೆದ ಮೂರು ವಾರಗಳಲ್ಲಿಯೇ ಉಗ್ರರ ನೆಲೆಯ ಮೇಲೆ ಇದು ಮೊದಲ ದಾಳಿಯಾಗಿದೆ. ಅಲ್ ಕೈದಾ ನಂಟು ಹೊಂದಿರುವ ಜಿಹಾದಿಗಳು ಇಡ್ಲಿಬ್‌ನಲ್ಲಿ ಪ್ರಾಬಲ್ಯ ಹೊಂದಿದ್ದು, ಸಿರಿಯಾದಲ್ಲಿನ ತನ್ನ ಸೇನಾ ನೆಲೆಗಳಿಗೆ ಬೆದರಿಕೆಯೊಡ್ಡುತ್ತಿವೆ ಎಂದು ರಷ್ಯಾ ತಿಳಿಸಿದೆ.
ರಷ್ಯಾದ ವಿಮಾನಗಳು ಬಂಡುಕೋರರ 16 ನೆಲೆಗಳ ಮೇಲೆ ಸುಮಾರು 30 ದಾಳಿಗಳನ್ನು ನಡೆಸಿದೆ ಎಂದು ಸಿರಿಯಾದಲ್ಲಿನ ಇಂಗ್ಲೆಂಡ್ ಮೂಲದ ಮಾನವ ಹಕ್ಕುಗಳ ಸಂಘಟನೆಯೊಂದು ತಿಳಿಸಿದೆ.












Click it and Unblock the Notifications