ಉಕ್ರೇನ್ ಸೈಬರ್ ದಾಳಿಗೂ ನಮಗೂ ಸಂಬಂಧವಿಲ್ಲ: ರಷ್ಯಾ
ವಾಷಿಂಗ್ಟನ್, ಫೆಬ್ರವರಿ 19: ಉಕ್ರೇನ್ ಮೇಲೆ ನಡೆದ ಸೈಬರ್ ದಾಳಿಗೂ ನಮಗೂ ಸಂಬಂಧವಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಈ ಬೆನ್ನಲ್ಲೇ ಉಕ್ರೇನ್ಗೆ ಸೇರಿದ ಬ್ಯಾಂಕ್‌ಗಳ ಮೇಲೆ ಸೈಬರ್ ದಾಳಿ ನಡೆಸಲಾಗಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕದಲ್ಲಿರುವ ರಷ್ಯಾ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ.
ಶುಕ್ರವಾರವಷ್ಟೆ, ಅಮೆರಿಕದ ಸೈಬರ್ ಆ್ಯಂಡ್ ಎಮರ್ಜ್ಡ್ ಟೆಕ್ನಾಲಜಿಯ ರಾಷ್ಟ್ರೀಯ ಭದ್ರತಾ ಸಲಹೆಗಾರರಲ್ಲಿ ಒಬ್ಬರಾದ ಅನ್ನೆ ನ್ಯೂಬರ್ಗರ್ ಅವರು ರಷ್ಯಾದ ಸೈಬರ್ ತಜ್ಞರು, ಉಕ್ರೇನ್ ದೇಶದ ರಕ್ಷಣಾ ಸಚಿವಾಲಯ ಸೇರಿದಂತೆ ಉಕ್ರೇನಿಯನ್ ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬೈಡನ್ ಸರ್ಕಾರ ನಂಬಿದೆ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ ರಾಯಭಾರ ಕಚೇರಿ ಅಮೆರಿಕದ ಆಧಾರರಹಿತ ಹೇಳಿಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಅಮೆರಿಕ ಉಲ್ಲೇಖಿಸಿ ಘಟನೆಗಳಲ್ಲಿ ರಷ್ಯಾ ಭಾಗಿಯಾಗಿಲ್ಲ ಮತ್ತು ಸೈಬರ್‌ಸ್ಪೇಸ್‌ನಲ್ಲಿ ಯಾವುದೇ ದುರುದ್ದೇಶಪೂರಿತ ಕಾರ್ಯಾಚರಣೆಯನ್ನು ನಡೆಸಿಲ್ಲ ಎಂದು ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದು, ನ್ಯೂಬರ್ಗರ್ ಅವರ ಹೇಳಿಕೆಯನ್ನು ರಷ್ಯಾ ವಿರೋಧಿ ಎಂದು ಕರೆದಿದೆ.
ಇತ್ತೀಚೆಗೆ ಉಕ್ರೇನಿಯನ್ ಬ್ಯಾಂಕ್‌ಗಳ ಮೇಲೆ ನಡೆದ ಸೈಬರ್ ದಾಳಿಯಲ್ಲಿ ರಷ್ಯಾ ಭಾಗಿಯಾಗಿಲ್ಲ ಎಂದು ರಷ್ಯಾದ ರಾಯಭಾರ ಕಚೇರಿ ಹೇಳಿಕೆ ನೀಡಿದ್ದು, ಅಮೆರಿಕ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಈ ಮೂಲಕ ಅಮೆರಿಕದ ಆರೋಪಕ್ಕೆ ಹಿನ್ನಡೆಯಾಗಿದೆ.
ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ರಷ್ಯಾದ 1.49 ಲಕ್ಷ ಸೈನಿಕರು ಜಮಾವಣೆಯಾಗಿದ್ದಾರೆ. ಗಡಿಯಲ್ಲಿ 1.29 ಲಕ್ಷ ರಷ್ಯನ್ ತುಕಡಿಗಳ ವಿಭಾಗಗಳು ಇರುವುದನ್ನು ನಾವು ನೋಡುತ್ತಿದ್ದೇವೆ, ಆದರೆ ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ಸುಮಾರು 1.49 ಲಕ್ಷ ಇರಬಹುದು ಎಂದು ಹೇಳಲಾಗಿದೆ.
ರಷ್ಯಾ ಯಾವ ಸಮಯದಲ್ಲಾದರೂ ಉಕ್ರೇನ್ ಮೇಲೆ ದಾಳಿ ನಡೆಸಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ವಿದ್ಯಾಮಾನಗಳಿಗೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ, ಉಕ್ರೇನ್ ಮೇಲೆ ದಾಳಿ ನಡೆಸಲಿರುವ ರಷ್ಯಾ ತನ್ನ ನಡೆಯನ್ನು ಸಮರ್ಥಿಸಿಕೊಳ್ಳಲು ಸುಳ್ಳು ನೆಪ ಹೇಳುತ್ತಿದೆ, ಈ ಹಿಂದೆಯೂ ಇಂಥ ನಿದರ್ಶನಗಳನ್ನು ನಾವು ನೋಡಿದ್ದೇವೆ ಎಂದು ಹೇಳಿದರು.
ಭದ್ರತೆಗೆ ಸಂಬಂಧಿಸಿದ ಜರ್ಮನಿಯ ಮ್ಯೂನಿಚ್‌ನಲ್ಲಿ ಫೆ.18ರಂದು ಮೂರು ದಿನಗಳ ಕಾಲ ಸಮಾವೇಶ ನಡೆಯಲಿದೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್, ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಾಗತಿಕ ನಾಯಕರೊಂದಿಗೆ ಚರ್ಚಿಸಿ, ರಷ್ಯಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಅವರು ಪ್ರಯತ್ನಿಸುವರು ಎಂದು ಬೈಡನ್ ಹೇಳಿದ್ದಾರೆ. ಉಕ್ರೇನ್ ಗಡಿಯಲ್ಲಿ ನಿಯೋಜನೆಗೊಂಡಿದ್ದ ತನ್ನ ಒಂದು ಲಕ್ಷಕ್ಕೂ ಹೆಚ್ಚು ಯೋಧರ ಪೈಕಿ ಒಂದಷ್ಟುಮಂದಿಯನ್ನು ರಷ್ಯಾ ವಾಪಸ್ ಕರೆಸಿಕೊಂಡಿದೆ.
2014ರಲ್ಲಿ ಉಕ್ರೇನ್‌ನ ಕ್ರಿಮಿಯಾ ಪ್ರಾಂತ್ಯವನ್ನು ರಷ್ಯಾ ವಶಕ್ಕೆ ತೆಗೆದುಕೊಂಡಿತ್ತು. ಅದಾದ ನಂತರ ಎರಡೂ ದೇಶಗಳ ಸಂಬಂಧ ಹಳಸಿಹೋಗಿತ್ತು. ಈ ನಡುವೆ ಅಮೆರಿಕ- ಬ್ರಿಟನ್ ನೇತೃತ್ವದ ನ್ಯಾಟೋ ಪಡೆ ಸೇರಲು ಉಕ್ರೇನ್ ಮುಂದಾಗಿತ್ತು.
ಉಕ್ರೇನ್ ಬಳಸಿಕೊಂಡು ತನ್ನ ಗಡಿಯಲ್ಲಿ ಅಮೆರಿಕ ಸೇನಾ ನೆಲೆ ತೆರೆಯಲು ಯತ್ನಿಸುತ್ತಿದೆ ಎಂದು ನಂಬಿದ ರಷ್ಯಾ, ನ್ಯಾಟೋಗೆ ಉಕ್ರೇನ್ ಸೇರದಂತೆ ಬೆದರಿಸಲು ಆ ದೇಶದ ಗಡಿಗೆ ಯೋಧರನ್ನು ಜಮಾವಣೆ ಮಾಡಿತ್ತು. ವಿವಿಧ ದೇಶಗಳ ಮಧ್ಯಪ್ರವೇಶದೊಂದಿಗೆ ಇದು ವಿಕೋಪಕ್ಕೆ ಹೋಗಿತ್ತು.
ರಷ್ಯನ್ ಸೈನಿಕರು ಉಕ್ರೇನ್ ಗಡಿ ಬಿಟ್ಟು ಮರಳುತ್ತಿರುವ ದೃಶ್ಯಗಳನ್ನು ರಷ್ಯಾದ ಅಧಿಕೃತ ಮಾಧ್ಯಮ ಬಿತ್ತರಿಸಿದ್ದು, ಯುದ್ಧ ಟ್ಯಾಂಕ್, ಕ್ಷಿಪಣಿ ವಾಹನಗಳು ಕೂಡ ಮರಳತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಉಕ್ರೇನ್ ಗಡಿಯಲ್ಲಿ ನಿಯೋಜಿಸಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ರಷ್ಯಾ ಹಿಂಪಡೆದಿದೆ.
ರಷ್ಯನ್ ಪಡೆಗಳು ಉಕ್ರೇನ್ ಗಡಿಯಿಂದ ಮರಳುತ್ತಿರುವುದರಿಂದ, ಕಳೆದ ಎರಡು ತಿಂಗಳುಗಳಿಗೂ ಹೆಚ್ಚು ಕಾಲದ ಸಂಘರ್ಷವೊಂದು ಸುಖಾಂತ್ಯ ಕಾಣುವ ನಿರೀಕ್ಷೆ ಗರಿಗೆದರಿದೆ. ಉಕ್ರೇನ್ ಪರ ನ್ಯಾಟೋ ಸದಸ್ಯ ರಾಷ್ಟ್ರಗಳ ಗಟ್ಟಿ ಧ್ವನಿ ಹಾಗೂ ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳು ಸಂಘರ್ಷವನ್ನು ಕೊನೆಗಾಣಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ
ಹೀಗಾಗಿ ರಾಜತಾಂತ್ರಿಕ ಮಾರ್ಗದಲ್ಲಿ ನಡೆದ ಸಂಧಾನ ಪ್ರಕ್ರಿಯೆಗಳ ಫಲ ಇದಾಗಿದ್ದು, ರಷ್ಯಾ ಮತ್ತಷ್ಟು ಯೋಧನ್ನು ಹಿಂಪಡೆದುಕೊಂಡರೆ ಯುದ್ಧ ಸಾಧ್ಯತೆ ಕ್ಷೀಣಿಸಲಿದೆ.












Click it and Unblock the Notifications