Russia Invites Ukraine: ಉಕ್ರೇನ್ ಜೊತೆ ಸಂಧಾನ ಮಾಡಿಕೊಳ್ಳಲು ಮಹತ್ವದ ನಿರ್ಧಾರ ಕೈಗೊಂಡ ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾ ಮತ್ತು ಉಕ್ರೇನ್ ಯುದ್ಧ ಒಂದು ರೀತಿಯಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ರೀತಿ ಆಗಿ ಹೋಗಿದೆ. ಇಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಷ್ಟೆಲ್ಲಾ ಪ್ರಯತ್ನ ಹಾಕಿ, ಇಬ್ಬರ ನಡುವಿನ ಯುದ್ಧ ನಿಲ್ಲಿಸಲು ಸಂಧಾನ ಮಾಡುತ್ತಿದ್ದರೂ ಅದು ಪ್ರಯೋಜನಕ್ಕೆ ಬಂದೇ ಇಲ್ಲ. ಒಂದು ದಿನ ರಷ್ಯಾ ದಾಳಿ ಮಾಡಿದರೆ, ಮರುದಿನವೇ ಉಕ್ರೇನ್ ದಾಳಿ ಮಾಡುತ್ತದೆ. ಹೀಗಾಗಿ ಇಬ್ಬರ ನಡುವೆ ಪದೇ ಪದೇ ಕಿರಿಕ್ ಆಗುತ್ತಲೇ ಇದೆ. ಎಲ್ಲಾ ಕಿರಿಕಿರಿ ನಡುವೆ ಲಕ್ಷಾಂತರ ಅಮಾಯಕರು ಪ್ರಾಣ ಕಳೆದುಕೊಂಡು ತಮ್ಮ ತಮ್ಮ ಕುಟುಂಬಗಳನ್ನು ಅನಾಥರಾಗಿಸಿದ್ದಾರೆ. ಇಷ್ಟೆಲ್ಲದರ ಮಧ್ಯೆ ಈಗ ದಿಢೀರ್ ರಷ್ಯಾ ಮಹತ್ವದ ನಿರ್ಧಾರ ಒಂದನ್ನು ಕೈಗೊಂಡಿದೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಶುರುವಾಗಿ ಇನ್ನೇನು 4 ವರ್ಷ ತುಂಬುತ್ತಿದ್ದು, ಭವಿಷ್ಯದಲ್ಲಿ ಈ ಯುದ್ಧ ದೊಡ್ಡ ಅಪಾಯ ಮಾಡುವ ಆತಂಕ ಕಾಡುತ್ತಿದೆ. ಯುರೋಪ್ ದೇಶಗಳು ಇದೇ ಯುದ್ಧಕ್ಕೆ ತಮ್ಮ ಶಾಂತಿ ಮತ್ತು ನೆಮ್ಮದಿ ಬಲಿಕೊಟ್ಟು ಪರದಾಡಿವೆ. ಅಲ್ಲದೆ ಕಳೆದ 4 ವರ್ಷ ಅವಧಿಯಲ್ಲಿ ಭಾರಿ ದೊಡ್ಡ ಮಟ್ಟದ ಆರ್ಥಿಕ ನಷ್ಟ ಕೂಡ ಉಂಟಾಗಿದೆ. ಹೀಗಿದ್ದಾಗ ದಿಢೀರ್ ದೊಡ್ಡ ನಿರ್ಧಾರವನ್ನು ಕೈಗೊಂಡಿರುವ ರಷ್ಯಾ, ನೇರ ಉಕ್ರೇನ್ ಅಧ್ಯಕ್ಷನನ್ನು ತನ್ನ ರಾಜಧಾನಿ ಮಾಸ್ಕೋಗೆ ಬರುವಂತೆ ಆಹ್ವಾನ ನೀಡಿದೆ.

ರಷ್ಯಾ ರಾಜಧಾನಿಗೆ ಉಕ್ರೇನ್ ಅಧ್ಯಕ್ಷ?
ಹೇಗಾದರೂ ಮಾಡಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಬೇಕು ಎನ್ನುವ ಪ್ರಯತ್ನಗಳು ಕೈಕೊಡುತ್ತಾ ಇರುವ ಬೆನ್ನಲ್ಲೇ, ನೇರವಾಗಿ ಇದೀಗ ರಷ್ಯಾ ಅಖಾಡ ಪ್ರವೇಶ ಮಾಡಿದೆ. ಪ್ರಮುಖವಾಗಿ ಉಕ್ರೇನ್‌ನ ಅಧ್ಯಕ್ಷರಿಗೆ ನೇರವಾಗಿ ಆಹ್ವಾನ ನೀಡಿರುವ ರಷ್ಯಾ, ಮಾಸ್ಕೋಗೆ ಭೇಟಿ ನೀಡಿ ಸಂಧಾನ ಮಾತುಕತೆಗೆ ವೇದಿಕೆ ಒದಗಿಸಿ ಎಂದು ತಿಳಿಸಿದೆ. ಅಲ್ಲದೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭದ್ರತೆಯ ಬಗ್ಗೆ ಕೂಡ ಇದೇ ವೇಳೆ ದೊಡ್ಡ ಭರವಸೆಯನ್ನು ಕೂಡ ಕ್ರೆಮ್ಲಿನ್ ಕೊಟ್ಟಿದೆ. ಇದು ಈಗ ಜಾಗತಿಕ ಮಟ್ಟದಲ್ಲಿ ಹೊಸ ತಲ್ಲಣ ಎಬ್ಬಿಸುವ ಜೊತೆಗೆ, ಪಾಶ್ಚಿಮಾತ್ಯ ದೇಶಗಳು ಕೂಡ ಒಂದು ಕ್ಷಣ ಚಿಂತೆ ಮಾಡಬೇಕಾದ ರೀತಿ ನಿರ್ಧಾರ ಕೈಗೊಂಡಿದೆ ರಷ್ಯಾ ಸರ್ಕಾರ.
ಉಕ್ರೇನ್ ನಿರ್ಧಾರದ ಮೇಲೆ ಎಲ್ಲರ ಚಿತ್ತ
ರಷ್ಯಾ-ಉಕ್ರೇನ್-ಅಮೆರಿಕ ತ್ರಿಪಕ್ಷೀಯ ಶಾಂತಿ ಮಾತುಕತೆಗೆ ಕಳೆದ ವಾರ ಯುಎಇ ವೇದಿಕೆ ಒದಗಿಸಿತ್ತು. ಈ ಸಭೆಯ ನಂತರ ದೊಡ್ಡ ಮಟ್ಟದ ಬದಲಾವಣೆಗಳು ಎದುರಾಗುತ್ತಿದ್ದು, ನೇರವಾಗಿ ಉಕ್ರೇನ್ ಅರ್ಧಕ್ಷ ಝೆಲೆನ್ಸಿಗೆ ಆಹ್ವಾನ ನೀಡಿದ್ದಾರೆ ಪುಟಿನ್. ಅಲ್ಲದೆ ಕಳೆದ ವಾರವೇ ಈ ಬಗ್ಗೆ ಮುನ್ಸೂಚನೆ ಸಿಕ್ಕಿತ್ತು, ಪುಟಿನ್ ಅವರು ಹಾಗೂ ಝೆಲೆನ್ಸ್ಕಿ ನಡುವೆ ಮಾತುಕತೆ ನಡೆಯುವುದು ಗ್ಯಾರಂಟಿ ಎನ್ನಲಾಗಿತ್ತು. ಈ ಮಾತು ಈಗ ನಿಜವಾಗಿದೆ. ಕ್ರೆಮ್ಲಿನ್ ಇದೀಗ ಶಾಂತಿ ಮಾತುಕತೆ ಮಾಡಿಕೊಳ್ಳಲು ಮಾಸ್ಕೋಗೆ ಬರುವಂತೆ ಉಕ್ರೇನ್ ಅಧ್ಯಕ್ಷರಿಗೆ ಆಹ್ವಾನ ನೀಡಿದ್ದು, ಈ ಅಹ್ವಾನಕ್ಕೆ ಇನ್ನೂ ಉಕ್ರೇನ್ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications