Ukraine War: ಅವರ ವಿರುದ್ಧ ಇವರು, ಇವರ ವಿರುದ್ಧ ಅವರು- ಸುಸ್ತಾಗಿ ಹೋದ ಟ್ರಂಪ್!
ಯುದ್ಧ ಎಷ್ಟು ವಿನಾಶಕಾರಿ ಅನ್ನೋದು ಮತ್ತೊಮ್ಮೆ ಇಡೀ ಜಗತ್ತಿಗೇ ಗೊತ್ತಾಗಿದ್ದು, ಯುದ್ಧ ಶುರುವಾದರೆ ಏನೆಲ್ಲಾ ಆಗಬಹುದು? ಅನ್ನೋದು ರಷ್ಯಾ & ಉಕ್ರೇನ್ ಕಿತ್ತಾಟದಲ್ಲಿ ಜಗತ್ತಿಗೆ ಗೊತ್ತಾಗಿದೆ. ಹೀಗಿದ್ದರೂ ಇಬ್ಬರ ನಡುವೆ ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಗೆಲುವು ಮಾತ್ರ ಸಿಗುತ್ತಿಲ್ಲ. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಆಗದೆ ನರಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಮತ್ತೊಂದು ಆಘಾತಕಾರಿ ಸುದ್ದಿಯು ಹೊರಬಿದ್ದಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ಅತ್ಯುತ್ತಮ ಸ್ನೇಹ ಇದೆ. ಈ ಹಿಂದೆ ಕೂಡ ಹಲವು ವಿಚಾರದಲ್ಲಿ ಇಬ್ಬರೂ ಸೇರಿ, ನಿರ್ಧಾರ ಕೈಗೊಂಡು ಗಮನ ಸೆಳೆದಿದ್ದರು. ಆದರೂ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಸ್ವತಃ ಡೊನಾಲ್ಡ್ ಟ್ರಂಪ್ ಕೈಯಲ್ಲೇ ಆಗುತ್ತಿಲ್ಲ ಎಂದರೆ ಪರಿಸ್ಥಿತಿ ಲೆಕ್ಕಹಾಕಿ ನೋಡಬೇಕು. ಈ ಮೂಲಕ ಎರಡೂ ದೇಶಗಳು ವಿನಾಶದ ಅಂಚಿಗೆ ಹೋಗುವಷ್ಟು ಬಡಿದಾಡುವ ಭಯವೂ ಕೂಡ ಆವರಿಸಿದೆ. ಹೀಗಿದ್ದಾಗಲೇ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿಸಿದೆ.

ಶಾಂತಿ ವೇದಿಕೆಯಲ್ಲೇ ಫುಲ್ ಫೈಟಿಂಗ್!
ರಷ್ಯಾ ಮತ್ತು ಉಕ್ರೇನ್ ಕದನ ವಿರಾಮ ಉಲ್ಲಂಘನೆಗಳ ಬಗ್ಗೆ ಟರ್ಕಿಯಲ್ಲಿ ದೊಡ್ಡ ಜಗಳವೇ ನಡೆದು ಹೋಗಿದೆ. ಟರ್ಕಿಯ ಅಂಟಾಲ್ಯ ರಾಜತಾಂತ್ರಿಕ ವೇದಿಕೆಯಲ್ಲಿ ರಷ್ಯಾ & ಉಕ್ರೇನ್‌ನ ನಡುವೆ ದೊಡ್ಡ ಮಾತಿನ ಮಹಾಯುದ್ಧ ನಡೆದು ಹೋಗಿದೆ. ಅದರಲ್ಲೂ ಪರಸ್ಪರ ಇಂಧನ ಮೂಲಸೌಕರ್ಯ ನಾಶಕ್ಕೆ ಎರಡೂ ದೇಶಗಳು ನಡೆಸಿರುವ ದಾಳಿಯ ಬಗ್ಗೆ ಕೂಡ ಗಂಭೀರ ಚರ್ಚೆ ನಡೆದಿದೆ.
ಅಮೆರಿಕ ಮಧ್ಯಸ್ಥಿಕೆ ನಡುವೆ ಕೂಡ ರಷ್ಯಾ & ಉಕ್ರೇನ್ ಹೀಗೆ ಮೊಂಡು ಹಠ ಮಾಡುತ್ತಿರುವುದು ಭಾರಿ ಚರ್ಚೆಗೆ ಕೂಡ ದಾರಿ ಮಾಡಿಕೊಟ್ಟಿದೆ. ಹಾಗೇ ಉಕ್ರೇನ್ ಮೇಲೆ ಈಗ ರಷ್ಯಾ ಮತ್ತೊಂದು ಸುತ್ತಿನ ದೊಡ್ಡ ದಾಳಿಗೆ ಪ್ಲಾನ್ ಮಾಡಿದೆ ಎಂಬ ಸುದ್ದಿ ಹರಿದಾಡ್ತಿದೆ. ಇದು ಉಕ್ರೇನ್ ಎದೆ ನಡುಗುವಂತೆ ಮಾಡಿದೆ. ಹಾಗೇ ಉಕ್ರೇನ್ ಕೂಡ ರಷ್ಯಾ ರಾಜಧಾನಿ ಮಾಸ್ಕೋ ಮೇಲೆಯೇ ಕಣ್ಣಿಟ್ಟು ಕೂತಿದೆ.
ಖುದ್ದು ಅಮೆರಿಕ ಅಧ್ಯಕ್ಷರ ಎಂಟ್ರಿ?
ಉಕ್ರೇನ್ ಸಂಘರ್ಷದ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು, ಸೇಂಟ್ ಪೀಟರ್ಸ್‌ಬರ್ಗ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ಕೂಡ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ವಿಟ್ಕಾಫ್ ಅವರನ್ನು ಸ್ವಾಗತಿಸುತ್ತಿರುವ ವಿಡಿಯೋ ರಷ್ಯಾ ಮಾಧ್ಯಮಗಳಲ್ಲಿ ಪ್ರಸಾರ ಆಗಿದ್ದು, ಸಾಕಷ್ಟು ಗಮನ ಸೆಳೆದಿದೆ. ಈ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುದ್ದಾಗಿ ರಷ್ಯಾಗೆ ಬರುತ್ತಾರಾ? ಎಂಬ ಕುತೂಹಲವು ಕೂಡ ಮೂಡಿದೆ.












Click it and Unblock the Notifications