ಉಕ್ರೇನ್ ನೆಲದಲ್ಲಿ ರಕ್ತದೋಕುಳಿ, ಒಂದೇ ದಾಳಿಗೆ 19 ಬಲಿ
ಉಮಾನ್: ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ರಣಭೀಕರ ಕದನ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಲಕ್ಷಾಂತರ ಜನ ಮೃತಪಟ್ಟು, ಲೆಕ್ಕವಿಲ್ಲದಷ್ಟು ಜನ ಗಾಯಗೊಂಡಿದ್ದಾರೆ. ಇಷ್ಟಾದರೂ ಪರಿಸ್ಥಿತಿ ಇನ್ನೂ ಹಿಡಿತಕ್ಕೆ ಸಿಕ್ಕಿಲ್ಲ. ರಷ್ಯಾ ಇಂದು ನಡೆಸಿದ ದಾಳಿಯಲ್ಲಿ ಮೂವರು ಮಕ್ಕಳು ಸೇರಿ 19 ಉಕ್ರೇನ್ ಪ್ರಜೆಗಳು ಮೃತಪಟ್ಟಿದ್ದಾರೆ.
ನ್ಯಾಟೋ ಪಡೆಗಳ ಜೊತೆ ಸೇರಿ ರಷ್ಯಾಗೆ ಅಪಾಯ ಮಾಡುತ್ತಿದ್ದಾರೆ ಎಂಬ ಆರೋಪದಡಿ ರಷ್ಯಾ 1 ವರ್ಷದ ಹಿಂದೆ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿತ್ತು. ಆದರೆ ಅದೇ ಯುದ್ಧ ಈಗ ಭೀಕರ ಪರಿಣಾಮ ಬೀರುತ್ತಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 3 ಲಕ್ಷ 54 ಸಾವಿರಕ್ಕೂ ಹೆಚ್ಚು ಸೈನಿಕರು ಹಾಗೂ ಜನರು ಯುದ್ಧದಲ್ಲಿ ಗಾಯಗೊಂಡಿದ್ದಾರೆ ಅಥವಾ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಾಗಾದರೆ ಈ ಅಂಕಿ ಅಂಶಗಳನ್ನೇ ಲೆಕ್ಕಹಾಕಿ ಹೇಳುವುದಾದರೆ ಉಕ್ರೇನ್-ರಷ್ಯಾ ಯುದ್ಧದ ಭೀಕರತೆ ತಿಳಿಯುತ್ತದೆ.

ಕ್ಷಿಪಣಿಗಳ ಮಳೆ ಸುರಿಸಿದ ರಷ್ಯಾ
ಇದೀಗ ಮತ್ತೊಂದು ರೌಂಡ್ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಲು ರಷ್ಯಾ ಮುಂದಾಗಿದೆ. ಅದರಲ್ಲೂ ಈಗ ರಷ್ಯಾ ಟಾರ್ಗೆಟ್ ಉಕ್ರೇನ್ ರಾಜಧಾನಿ. ಹೀಗೆ ರಷ್ಯಾ ಉಡಾಯಿಸಿರುವ ಕ್ಷಿಪಣಿಗಳ ಪೈಕಿ ಎರಡು ಕ್ಷಿಪಣಿಗಳು ಕೀವ್‌ನ ದಕ್ಷಿಣ ಉಮಾನ್ ನಗರದ ಮೇಲೆ ಬಿದ್ದಿದೆ. ಅಲ್ಲಿರುವ 9 ಮಹಡಿಯ ಅಪಾರ್ಟ್‌ಮೆಂಟ್‌ಗೆ ತಗುಲಿ ಸುಮಾರು 19ಕ್ಕೂ ಹೆಚ್ಚು ಪ್ರಜೆಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಪೈಕಿ 3 ಮಕ್ಕಳು ಕೂಡ ಸೇರಿದ್ದಾರೆ ಎನ್ನುವುದೇ ದುರಂತ.
ನಡುಗುತ್ತಿದ್ದಾರೆ ಉಕ್ರೇನ್ ಜನರು
ಒಂದೆಡೆ 3ನೇ ಮಹಾಯುದ್ಧದ ಮಾತುಗಳು ಮೊಳಕೆಯೊಡೆದು ಜಗತ್ತಿನ ಮೂಲೆ ಮೂಲೆಯಲ್ಲೂ ಆತಂಕ ಆವರಿಸಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಎಲ್ಲಿ 3ನೇ ಮಹಾಯುದ್ಧವಾಗಿ ಬದಲಾಗುತ್ತದೋ ಎಂಬ ಭಯ ಆಧುನಿಕ ಜಗತ್ತನ್ನು ಕಾಡುತ್ತಿದೆ. ಆದರೆ ಈ ಹೊತ್ತಲ್ಲೇ ರಷ್ಯಾ ಯುದ್ಧ ನಿಲ್ಲಿಸದೆ ನಿರಂತರವಾಗಿ ಉಕ್ರೇನ್ ಮೇಲೆ ದಾಳಿಯನ್ನ ಮಾಡುತ್ತಲೇ ಬಂದಿದೆ. ಈಗಿನ ಪರಿಸ್ಥಿತಿ ನೋಡಿದರೆ ರಷ್ಯಾ ಇನ್ನೂ ಹಲವು ಸುತ್ತಿನ ದಾಳಿ ನಡೆಸುವುದು ಪಕ್ಕಾ ಆಗಿದೆ. ರಷ್ಯಾ ದಾಳಿಯಿಂದ ಉಕ್ರೇನ್ ಪ್ರಜೆಗಳು ಬೆಚ್ಚಿಬಿದ್ದಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಬಂಧನವಾಗುತ್ತಾ?
ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಪುಟಿನ್ ಅವರ ವಿರುದ್ಧ ಕೆಲ ತಿಂಗಳ ಹಿಂದಷ್ಟೇ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಯುದ್ಧ ಅಪರಾಧದ ಆರೋಪದಡಿ ಆದೇಶ ಜಾರಿಗಯಾಗಿತ್ತು. ಇಷ್ಟೆಲ್ಲದರ ಮಧ್ಯೆ ಇನ್ನೊಮ್ಮೆ ಉಕ್ರೇನ್ ವಿರುದ್ಧ ರಷ್ಯಾ ಸೇನೆ ಮುಗಿಬಿದ್ದಿದೆ. ಇದು ಪರಿಸ್ಥಿತಿಯನ್ನ ಬೂದಿ ಮುಚ್ಚಿದ ಕೆಂಡವಾಗಿ ಪರಿವರ್ತಿಸಿ, ಮುಂದೆ ಇನ್ನೇನು ನಡೆಯಬಹುದು ಎಂಬ ಆತಂಕ ಸೃಷ್ಟಿಮಾಡಿದೆ. ಹಾಗೇ ಇನ್ನೊಂದು ಕಡೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬಂಧನವಾಗುತ್ತಾ ಎಂಬ ಅನುಮಾನ ಕೂಡ ಮೊಳಕೆಯೊಡೆದಿದೆ.
ಒಟ್ಟಾರೆ ಹೇಳುವುದಾದರೆ ರಷ್ಯಾ ಅಧ್ಯಕ್ಷ ಪುಟಿನ್ ಅಳೆದು ತೂಗಿ ಉಕ್ರೇನ್ ವಿರುದ್ಧ ಮತ್ತೊಂದು ಸುತ್ತಿನ ದಾಳಿಗೆ ಮುಂದಾದಂತೆ ಕಾಣುತ್ತಿದೆ. ಸರಿಯಾಗಿ 1 ವರ್ಷದ ಹಿಂದೆ ಸೇನೆಯನ್ನು ಶತ್ರು ನೆಲಕ್ಕೆ ನುಗ್ಗಿಸಿದ್ದ ಇದೇ ಪುಟಿನ್, ಇದೀಗ ತಮ್ಮ ಶತ್ರುಗಳಿಗೆ ಉತ್ತರವಾಗಿ ಮರು ದಾಳಿ ಆರಂಭಿಸಿದಂತೆ ಕಾಣುತ್ತಿದೆ. ಈವರೆಗೂ ಅಮೆರಿಕ ಈ ದಾಳಿ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಆದರೆ ಮಂದಿನ ದಿನಗಳಲ್ಲಿ ಇದು ಮತ್ತೊಂದು ತಿಕ್ಕಾಟಕ್ಕೂ ಕಾರಣ ಆಗಬಹುದು. ಜಾಗತಿಕ ಮಟ್ಟದಲ್ಲಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಸಾಕಷ್ಟು ಒತ್ತಡ ಕೇಳಿಬರುತ್ತಿದೆ. ಆದರೆ ರಷ್ಯಾ ಮಾತ್ರ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನೊಂದು ಕಡೆ ಉಕ್ರೇನ್ ಕೂಡ ಸಂಧಾನಕ್ಕೆ ಮುಂದಾಗುತ್ತಿಲ್ಲ.












Click it and Unblock the Notifications