ಭಾರತಕ್ಕೆ ಆಗಮಿಸುವ 6 ದೇಶದ ಪ್ರಯಾಣಿಕರಿಗೆ 2023 ಜ. 1ರಿಂದ ಆರ್‌ಟಿಪಿಆರ್ ಪರೀಕ್ಷೆ ಕಡ್ಡಾಯ
ನವದೆಹಲಿ, ಡಿಸೆಂಬರ್ 29: ಕೋವಿಡ್ 19 ವಿಶ್ವದಾದ್ಯಂತ ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್, ಥೈಲ್ಯಾಂಡ್ ಮತ್ತು ಸಿಂಗಾಪುರದಿಂದ ಆಗಮಿಸುವ ಪ್ರಯಾಣಿಕರಿಗೆ ಭಾರತದಲ್ಲಿ 2023ರ ಜನವರಿ 1ರಿಂದ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಕೋರೋನಾ ಹೆಚ್ಚಾಗಿದ್ದು, ಆದೇಶಗಳಿಂದ ಭಾರತಕ್ಕೆ ಪ್ರಯಾಣಿಸುವವರಿಗೆ ಈ ಆದೇಶ ಅನ್ವಯವಾಗಲಿದೆ. ಜೊತೆಗೆ ತಮ್ಮ ದೇಶದಲ್ಲಿ ಪ್ರಯಾಣಿಸುವ ಮುನ್ನ ಮೊದಲು 'ಏರ್ ಸುವಿಧಾ' ಪೋರ್ಟಲ್ ನೆಗಟಿವ್ ವರದಿಯನ್ನು ಕಡ್ಡಾಯವಾಗಿ ಹಾಕಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ವಿದೇಶಗಳಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ 72 ಗಂಟೆಗಳ ಒಳಗೆ ಕೋವಿಡ್ ಪರೀಕ್ಷೆ ಒಳಪಡಬೇಕು ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಚೀನಾ ಮತ್ತು ಪೂರ್ವ ಏಷ್ಯಾದ ದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್7 ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇನ್ನು ಹೆಚ್ಚುವರಿಯಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸುತ್ತಿರುವ ಕಾರಣ ಯಾದೃಚ್ಛಿಕ ಕೊರೊನಾ ತಪಾಸಣೆ ಶೇ. 2 ರಷ್ಟು ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಗುರುವಾರ ಭಾರತದಲ್ಲಿ 268 ಹೊಸ ಕೊರೊನಾ ವೈರಸ್ ಸೋಂಕುಗಳು ದಾಖಲಾಗಿವೆ. ಇದುವರೆಗೆ ಭಾರತದಲ್ಲಿ ಒಟ್ಟು 3,552 ಸಕ್ರಿಯ ಪ್ರಕರಣಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.11 ರಷ್ಟು ದಾಖಲಾಗಿದ್ದು, ವಾರದ ಪಾಸಿಟಿವಿಟಿ ಶೇ.0.17 ಆಗಿದೆ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈಗಾಗಲೇ ಕಳೆದ ಎರಡು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ್ದ ಸುಮಾರು 39 ವಿದೇಶಿ ಪ್ರಯಾಣಿಕರಿಗೆ ಕೊರೊನಾ ಸೋಂಕು ಕಂಡು ಬಂದಿದೆ. ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಹ ಕೋವಿಡ್ ಕಟ್ಟೆಚ್ಚರ ವಹಿಸಲಾಗಿದೆ.












Click it and Unblock the Notifications