ನಿಷ್ಠಾವಂತ ಉದ್ಯೋಗಿ ಬೆನ್ನಿಗೆ ಚೂರಿ.. ಸೇತುವೆ ಅಡಿ ಜೀವನದಿಂದ 'ನಾಸಾ'ವರೆಗೆ ಬೆಳೆದಿದ್ದ ಸಾಧಕಿ ವಜಾ

NASA Employee: ಸೇತುವೆಯೊಂದರ ಕೆಳಗೆ ಭಿಕ್ಷುಕಿಯಂತೆ ರಾತ್ರಿ ಕಳೆದಿದ್ದ ಬಾಲಕಿಯೊಬ್ಬಳು ಮುಂದೆ ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ 'ನಾಸಾ' ಸೇರಿ ಜಗತ್ತೇ ಹುಬ್ಬೇರಿಸುವಂತೆ ಸಾಧನೆ ಮಾಡಿದ್ದು ಸಣ್ಣ ವಿಷಯವೇನಲ್ಲ. ಈ ರೋಚಕ ಹಾಗೂ ಸ್ಫೂರ್ತಿದಾಯಕ ಕಥೆಯ ನಾಯಕಿ ರೋಸ್ ಫೆರೀರಾ

ನಿರಾಶ್ರಿತ ಸ್ಥಿತಿ, ಕ್ಯಾನ್ಸರ್ ಹಾಗೂ ಅಪಘಾತದಂತಹ ಸಾಲು ಸಾಲು ದುರಂತಗಳನ್ನು ಮೆಟ್ಟಿ ನಿಂತು ನಾಸಾ ವಿಜ್ಞಾನಿಯಾದ ರೋಸ್ ಫೆರೆರಾ ಅವರ ಯಶೋಗಾಥೆಯನ್ನು ಸ್ವತಃ ಆ ಸಂಸ್ಥೆಯೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಕೊಂಡಾಡಿತ್ತು. ಆದರೆ ಈಗ ಅದೇ ಸಂಸ್ಥೆ ಆಕೆಯ ಪ್ರೊಫೈಲ್ ಅನ್ನು ಜಾಲತಾಣದಿಂದ ರಾತ್ರೋರಾತ್ರಿ ಅಳಿಸಿಹಾಕಿ, ಕೆಲವೇ ದಿನಗಳಲ್ಲಿ ಕೆಲಸದಿಂದ ಹೊರದಬ್ಬುವ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದೆ ಎಂದು ಎಂದು 'ಟೈಮ್ಸ್‌ ಆಫ್‌ ಇಂಡಿಯಾ' ವರದಿ ಮಾಡಿದೆ.

Rose Ferreira From Homelessness to NASA Scientist Then Fired Amid Controversy Huge Viral

ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ

ಬಡತನ, ವಸತಿ ರಹಿತ ಸ್ಥಿತಿ ಹಾಗೂ ಗಂಭೀರ ಅನಾರೋಗ್ಯದಂತಹ ಕಠಿಣ ಸವಾಲುಗಳನ್ನು ಮೀರಿ ನಿಂತು, ಅಮೆರಿಕದ ಪ್ರಸಿದ್ಧ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ನಾಸಾ' ಸೇರಿದ್ದ ರೋಸ್ ಫೆರೆರಾ ಎಂಬ ಉದ್ಯೋಗಿಯ ಕಥೆ ಈಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಾಸಾ ಸಂಸ್ಥೆಯು ಈ ಹಿಂದೆ ಯಾರ ಸಾಧನೆಯನ್ನು ಕೊಂಡಾಡಿ ತಮ್ಮ ಅಧಿಕೃತ ಜಾಲತಾಣದಲ್ಲಿ ವಿಶೇಷ ಲೇಖನ ಪ್ರಕಟಿಸಿತ್ತೋ, ಅದೇ ಸಂಸ್ಥೆ ಈಗ ಆಕೆಯ ಪ್ರೊಫೈಲ್ ಅನ್ನು ಡಿಲೀಟ್ ಮಾಡಿ, ಕೆಲವೇ ದಿನಗಳಲ್ಲಿ ಕೆಲಸದಿಂದ ವಜಾಗೊಳಿಸಿದೆ.

ಕಠಿಣ ಸವಾಲುಗಳನ್ನ ಎದುರಿಸಿದ ರೋಸ್ ಫೆರೆರಾ

ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ರೋಸ್ ಫೆರೆರಾ, ಚಿಕ್ಕಂದಿನಿಂದಲೇ ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೊಂದಿದ್ದರು. ಸುಮಾರು 16ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆ ಬಂದ ಅವರು, ಜೀವನದ ಕಠಿಣ ಹಂತಗಳನ್ನು ಎದುರಿಸಬೇಕಾಯಿತು. ಒಂದು ಹಂತದಲ್ಲಿ ನಿರಾಶ್ರಿತರಾದ ಅವರು, ನ್ಯೂಯಾರ್ಕ್‌ನ ಮಾನ್‌ಹ್ಯಾಟನ್‌ನಲ್ಲಿರುವ ಸೇತುವೆಯೊಂದರ ಅಡಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ವಾಸಿಸಬೇಕಾಯಿತು.

ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಶಿಕ್ಷಣವನ್ನು ತೊರೆಯದ ಅವರು ಕ್ಯಾನ್ಸರ್ ಮತ್ತು ರಸ್ತೆ ಅಪಘಾತದಂತಹ ಗಂಭೀರ ಹಿನ್ನಡೆಗಳನ್ನು ಮೆಟ್ಟಿ ನಿಂತರು. ಬಳಿಕ ಖಗೋಳಶಾಸ್ತ್ರದಲ್ಲಿ ಪದವಿ ಹಾಗೂ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಸ್ಪೇಸ್ ಸಿಸ್ಟಮ್ಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2024ರಲ್ಲಿ ನಾಸಾದಲ್ಲಿ ಪೂರ್ಣಕಾಲಿಕ ವಿಶ್ಲೇಷಕಿಯಾಗಿ ಸೇರ್ಪಡೆಯಾದ ಅವರು, ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದ ಪ್ರಮುಖ ಚಿತ್ರ ಬಿಡುಗಡೆ ತಂಡದಲ್ಲೂ ಕಾರ್ಯನಿರ್ವಹಿಸಿದ್ದರು.

ಪ್ರೊಫೈಲ್ ತೆಗೆದುಹಾಕಿದ ನಾಸಾ

ನಾಸಾ ಸಂಸ್ಥೆಯು 2022ರಲ್ಲಿ ರೋಸ್ ಅವರ ಈ ಸ್ಫೂರ್ತಿದಾಯಕ ಪಯಣದ ಬಗ್ಗೆ ಗೌರವಪೂರ್ವಕವಾಗಿ ಲೇಖನ ಪ್ರಕಟಿಸಿತ್ತು. ಅನೇಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಈ ಲೇಖನದ ಬಗ್ಗೆ ವಿವರಿಸುತ್ತಿದ್ದರು. ಆದರೆ, 2025ರ ಆರಂಭದಲ್ಲಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಸಾರ್ವಜನಿಕ ನೀತಿ ಬದಲಾವಣೆಗಳ ಭಾಗವಾಗಿ, ವೈವಿಧ್ಯತೆ ಮತ್ತು ಸಮಾನತೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪರಿಶೀಲಿಸುವ ಪ್ರಕ್ರಿಯೆ ಆರಂಭವಾಯಿತು.

ಈ ವೇಳೆ ನ್ಯುಮೋನಿಯಾ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದ ರೋಸ್ ಅವರಿಗೆ ನಾಸಾ ವೆಬ್‌ಸೈಟ್‌ನಿಂದ ತಮ್ಮ ಪ್ರೊಫೈಲ್ ಕಣ್ಮರೆಯಾಗಿರುವುದು ಗೊತ್ತಾಯಿತು. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ 'ಥ್ರೆಡ್ಸ್'ನಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಆ ಪೋಸ್ಟ್ ಲಕ್ಷಾಂತರ ಜನರ ಗಮನ ಸೆಳೆಯಿತು. ತಾಂತ್ರಿಕ ಪರಿಶೀಲನೆಗಾಗಿ ಪ್ರೊಫೈಲ್ ತೆಗೆಯಲಾಗಿತ್ತು ಎಂದು ಸ್ಪಷ್ಟನೆ ನೀಡಿದ ನಾಸಾ, ನಂತರ ಅದನ್ನು ಮತ್ತೆ ವೆಬ್‌ಸೈಟ್‌ಗೆ ಸೇರಿಸಿತು.

ವಿವರಣೆ ನೀಡಲು 'ನಾಸಾ' ನಿರಾಕರಣೆ

ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಬಗ್ಗೆ ಧ್ವನಿ ಎತ್ತಿದ ಕೇವಲ 20 ದಿನಗಳ ಬಳಿಕ ಮತ್ತು ನ್ಯುಮೋನಿಯಾದಿಂದ ಚೇತರಿಸಿಕೊಂಡು ಕೆಲಸಕ್ಕೆ ಮರಳಿದ ಮೂರೇ ದಿನಗಳಲ್ಲಿ, ರೋಸ್ ಅವರನ್ನು ನಾಸಾ ಕೆಲಸದಿಂದ ವಜಾಗೊಳಿಸಿತು. ನಾಸಾ ಸಂಸ್ಥೆಯು ಸೂಕ್ತ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂಬ ಕಾರಣ ನೀಡಿದ್ದು ಬಿಟ್ಟರೆ, ನಿರ್ದಿಷ್ಟ ಉದ್ಯೋಗಿ ನಿರ್ಧಾರದ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದೆ.

ಅವರನ್ನು ವಜಾಗೊಳಿಸಿದ್ದು ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಸಂಬಂಧಿಸಿದೆಯೋ ಅಥವಾ ಸರ್ಕಾರಿ ವಲಯದಲ್ಲಾಗುತ್ತಿರುವ ಸಿಬ್ಬಂದಿ ಕಡಿತಕ್ಕೆ ಸಂಬಂಧಿಸಿದೆಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ತುಂಬಾ ಕಷ್ಟಪಟ್ಟು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜ್ಞಾನಿಯೊಬ್ಬರ ಪ್ರೊಫೈಲ್ ಡಿಲೀಟ್ ಮಾಡಿ, ತಕ್ಷಣ ಕೆಲಸದಿಂದ ತೆಗೆದುಹಾಕಿದ ನಾಸಾದ ನಡೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, 'ಸರಿಯಾದ ಕಾರಣ ನೀಡದೇ ಹೀಗೆ ಇಂತಹ ಪ್ರತಿಭೆಯನ್ನು ಕೆಲಸದಿಂದ ತೆಗೆದುಹಾಕಿರುವುದು ಎಷ್ಟರ ಮಟ್ಟಿಗೆ ಸರಿ,' ಎಂದು ಪ್ರಶ್ನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+