Israel VS Hamas War: ಇಸ್ರೇಲ್ VS ಹಮಾಸ್ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ರಿಯಾಕ್ಷನ್ ವೈರಲ್!
ಜಗತ್ತು ಮತ್ತೊಂದು ಮಹಾ ವಿನಾಶದ ಕಡೆಗೆ ಮುಖ ಮಾಡಿರುವಂತೆ ಭಾಸವಾಗುತ್ತಿದೆ. ಈ ಸಮಯದಲ್ಲೇ ಇಸ್ರೇಲ್ VS ಹಮಾಸ್ ಉಗ್ರರ ನಡುವೆ ಕಿತ್ತಾಟ ಬಲು ಜೋರಾಗಿದೆ. ಇಡೀ ಜಗತ್ತು ಇಸ್ರೇಲ್ VS ಹಮಾಸ್ ಉಗ್ರರ ಕಾಳಗ ನೋಡಿ ಬೆಚ್ಚಿದೆ. ಈ ಕುರಿತು ಈಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿಕ್ರಿಯೆ ನೀಡಿದ್ದು ಜಗತ್ತಿನ ದೊಡ್ಡಣ್ಣ ಅಮೆರಿಕ ವಿರುದ್ಧ ಕೆಂಡವಾಗಿದ್ದಾರೆ. ಹಾಗಾದರೆ ಇಸ್ರೇಲ್ & ಹಮಾಸ್ ಫೈಟ್ ಬಗ್ಗೆ ಪುಟಿನ್ ಹೇಳಿದ್ದೇನು?
ಅಮೆರಿಕ ಇಸ್ರೇಲ್ ಪರವಾಗಿ ನಿಂತಿದ್ದರೆ, ಅಮೆರಿಕ ವಿರೋಧಿ ಬಣವಾದ ರಷ್ಯಾ ಅಧ್ಯಕ್ಷರು ತಮ್ಮ ಬೆಂಬಲವನ್ನ ಹಮಾಸ್‌ಗೆ ಘೋಷಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಇಸ್ರೇಲ್‌ನದ್ದೇ ತಪ್ಪು ಎಂದು ವಾಗ್ದಾಳಿ ನಡೆಸಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರಷ್ಯಾ ಅಧ್ಯಕ್ಷ ಪುಟಿನ್, ಕೆಂಡವಾಗಿದ್ದಾರೆ. ಅದರಲ್ಲೂ ದೊಡ್ಡಣ್ಣ ಅಮೆರಿಕ ವಿರುದ್ಧವೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈಗ ಪುಟಿನ್ ನೀಡಿರುವ ಹೇಳಿಕೆ ರಷ್ಯಾ & ಉಕ್ರೇನ್ ಯುದ್ಧದ ಮೇಲೂ ಪರಿಣಾಮ ಬೀರುವ ಮುನ್ಸೂಚನೆ ಕೊಟ್ಟಿದೆ.

ಅಮೆರಿಕಗೆ ಬುದ್ಧಿ ಇಲ್ಲ ಅಂದ್ರಾ ಪುಟಿನ್?
ಹೌದು, ಒಂದು ಕಡೆ ಇಸ್ರೇಲ್ VS ಹಮಾಸ್ ಮನಸ್ಸಿಗೆ ಬಂದಂತೆ ಒಬ್ಬರ ಮೇಲೊಬ್ಬರು ಬಾಂಬ್ ದಾಳಿ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಇಸ್ರೇಲ್ ಯುದ್ಧ ಜಾಗತಿಕವಾಗಿ ಕೂಡ ದೊಡ್ಡ ಬಿರುಗಾಳಿ ಎಬ್ಬಿಸುತ್ತಿದೆ. ಇದೇ ಪರಿಸ್ಥಿತಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಸ್ರೇಲ್ & ಪ್ಯಾಲೆಸ್ತೀನ್ ಬಿಕ್ಕಟ್ಟು ಸರಿಮಾಡಲು ಅಮೆರಿಕ ವಿಫಲವಾಗಿದೆ ಎಂದಿದ್ದಾರೆ ಪುಟಿನ್. ಹೀಗೆ ಅಮೆರಿಕ ಯುದ್ಧವನ್ನ ನಿಲ್ಲಿಸಲು ಆಗೋದಿಲ್ಲ ಎಂದಿರುವ ರಷ್ಯಾ ಅಧ್ಯಕ್ಷರು, ಅಮೆರಿಕ ಅಧ್ಯಕ್ಷರನ್ನು ಕೆಣಕಿದ್ದಾರೆ.
ಯುದ್ಧ ಮತ್ತಷ್ಟು ಭೀಕರ!
ಗಾಜಾಪಟ್ಟಿ ಮೊದಲೇ ಬಡತನ & ಹಸಿವಿನಿಂದ ಬಳಲುತ್ತಿದೆ. ಈ ಮಧ್ಯೆ ಹಮಾಸ್ ಉಗ್ರರ ಕಾಟ ಶುರುವಾಗಿದೆ. ಉಗ್ರರು & ಬಡತನ ನಡುವೆ ನರಳುತ್ತಿದ್ದ ಗಾಜಾಪಟ್ಟಿಯ ಸಾಮಾನ್ಯ ಜನರೀಗ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಮಾಸ್ ಉಗ್ರರನ್ನು ಹೊಡೆದು ಹಾಕಲು ಇಸ್ರೇಲ್ ಮುಂದಾಗಿದ್ದರೆ, ಕೈಗೆ ಸಿಗುತ್ತಿರುವುದು ಮಾತ್ರ ಸಾಮಾನ್ಯ ಜನರು. ಹೀಗಿದ್ದಾಗಲೇ ಉಗ್ರರು ಒತ್ತೆಯಾಳುಗಳನ್ನು ರಿಲೀಸ್ ಮಾಡದೇ ಇದ್ದರೆ, ಗಾಜಾಪಟ್ಟಿಗೆ ಅನ್ನ, ನೀರು & ವಿದ್ಯುತ್ ಎಂದೆಂದಿಗೂ ಸಿಗಲ್ಲ ಎಂದು ಇಸ್ರೇಲ್ ಗುಡುಗಿದೆ. ಈ ಬಗ್ಗೆ ಮಾತನಾಡಿರುವ ಇಸ್ರೇಲ್‌ನ ಇಂಧನ ಸಚಿವ ಇಸ್ರೇಲ್ ಕಾಟ್ಜ್, ಇಸ್ರೇಲ್ ಒತ್ತೆಯಾಳುಗಳು ತಮ್ಮ ತಮ್ಮ ಮನೆಗೆ ವಾಪಸ್ ಬರದಿದ್ದರೆ ನಿಮ್ಮ ನಾಶ ಪಕ್ಕಾ ಎಂದಿದ್ದಾರೆ. ಹೀಗಿದ್ದಾಗ ದಾಳಿ ಮತ್ತಷ್ಟು ಭೀಕರವಾಗಿದೆ.

ಎಷ್ಟು ಒತ್ತೆಯಾಳುಗಳು ಇದ್ದಾರೆ?
ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿದಾಗ 100ಕ್ಕೂ ಹೆಚ್ಚು ಜನರನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಇವರಲ್ಲಿ ಮಹಿಳೆಯರು & ಮಕ್ಕಳು ಸೇರಿದ್ದಾರೆ. ಇದೀಗ ಅವರ ಬಿಡುಗಡೆಗಾಗಿ ಸಂಧಾನ ನಡೆಸಿ ವಿಫಲವಾಗಿರುವ ಇಸ್ರೇಲ್, ಭೀಕರ ಯುದ್ಧಕ್ಕೆ ರಣಕಹಳೆ ಮೊಳಗಿಸಿದ್ದು. ಇಡೀ ಗಾಜಾಪಟ್ಟಿಗೆ ಅಗತ್ಯ ಇರುವ ಎಲ್ಲಾ ವಸ್ತುಗಳನ್ನ ನಿಲ್ಲಿಸಿದೆ. ಅಲ್ಲದೆ ನಿನ್ನೆಯಷ್ಟೇ ವಿದ್ಯುತ್ ಕೂಡ ಕಟ್ ಮಾಡಿ, ಕರೆಂಟ್ ಇಲ್ಲದೆ ಗಾಜಾಪಟ್ಟಿ ಜನ ಪರದಾಡುವಂತೆ ಇದೇ ಇಸ್ರೇಲ್ ಮಾಡಿದೆ. ಮತ್ತೊಂದು ಕಡೆ ರಷ್ಯಾ ಅಧ್ಯಕ್ಷರು ಈ ಸಮಸ್ಯೆಗೆ ಅಮೆರಿಕವೆ ಕಾರಣ ಎಂದು ದೂಷಿಸಿದ್ದಾರೆ.
ಒಟ್ಟಾರೆ ಹೇಳುವುದಾದ್ರೆ ಈಗಿನ ಪರಿಸ್ಥಿತಿ ಮತ್ತೊಂದು ಮಹಾಯುದ್ಧಕ್ಕೆ ದಾರಿ ಮಾಡಿರುವ ರೀತಿ ಕಾಣುತ್ತಿದೆ. ಅದ್ರಲ್ಲೂ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ ಅಂತಾ ಜಗತ್ತು ಸಲಹೆ ನೀಡುತ್ತಿದೆ. ಆದ್ರೆ ಇಲ್ಲಿ ಆಗುತ್ತಿರುವುದೇ ಬೇರೆ. ಸೇಡಿಗೆ ಸೇಡು ಮತ್ತು ರಕ್ತಕ್ಕೆ ರಕ್ತ ಎಂಬಂತೆ ಎರಡೂ ಬಣ ಬಡಿದಾಡುತ್ತಿವೆ. ಈ ಮೂಲಕ ಜಗತ್ತಲ್ಲಿ ಮತ್ತೆ ಅಶಾಂತಿ ಮನೆ ಮಾಡಿದೆ. ಕೊರೊನಾ ಬಳಿಕ ಯುದ್ಧದ ಕಾರಣ ಭವಿಷ್ಯ ಕೂಡ ಮಂಕಾಗುತ್ತಿದೆ.












Click it and Unblock the Notifications