Putin Visits India: ಭಾರತ - ರಷ್ಯಾ ನಾಯಕರ ಭೇಟಿ, ಅಮೇರಿಕಾ ಲೆಕ್ಕಾಚಾರಗಳು ತಲೆಕೆಳಗಾಗುವ ನಿರೀಕ್ಷೆ!
Putin Visits India: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿಸೆಂಬರ್ 4-5 ರ ಭಾರತದ ಪ್ರವಾಸ ಹಾಗೂ ಶೃಂಗಸಭೆಯು ಹಲವು ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತ ಮತ್ತು ರಷ್ಯಾದ ಮಾತುಕತೆಯನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ಭಾರತ ಮತ್ತು ರಷ್ಯಾ ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧವು ಹಲವು ದಶಕಗಳಿಂದ ಇದೆ. ಭಾರತವು ಸಂಕಷ್ಟಕ್ಕೆ ಸಿಲುಕಿದ ಸಂದರ್ಭಗಳಲ್ಲಿ ರಷ್ಯಾ ಭಾರತದ ಕೈಹಿಡಿದಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದ ಸಂದರ್ಭ ಹಾಗೂ ಅಮೇರಿಕಾದ ಬೆದರಿಕೆ ಹಾಕಿದ ಸಂದರ್ಭಗಳಲ್ಲಿ ರಷ್ಯಾ ಭಾರೀ ಬೆಂಬಲ ನೀಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ರಷ್ಯಾದ ನಡುವಿನ ಸಂಬಂಧದಲ್ಲಿ ಏರುಪೇರಾಗಿತ್ತು. ಇದೀಗ ಮತ್ತೆ ಒಳ್ಳೆಯ ಸ್ನೇಹ ಸಂಬಂಧ ಮೂಡುತ್ತಿದೆ. ಅಮೇರಿಕಾದ ಟ್ಯಾಕ್ಸ್ ಬೆದರಿಕೆ, ಚೀನಾದ ಉಪಟಳ ಹಾಗೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕಿರಿಕಿರಿಗಳ ನಡುವೆ ಭಾರತಕ್ಕೆ ಈ ಮಾತುಕತೆಯು ಅತ್ಯಂತ ಮಹತ್ವದಾಗಿದೆ. ಇನ್ನೊಂದು ಕಡೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಅಮೇರಿಕಾ ಸೇರಿ ಕೆಲವೊಂದು ಪ್ರಮುಖ ರಾಷ್ಟ್ರಗಳನ್ನು ಎದುರು ಹಾಕಿಕೊಂಡಿರುವ ರಷ್ಯಾಗೂ ಈ ಮಾತುಕತೆ ಅತ್ಯಂತ ನಿರ್ಣಾಯಕವೇ ಆಗಿದೆ.

ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳ ಸಂಭ್ರಮಾಚರಣೆಯಲ್ಲಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾದ ನಾಯಕರು ಭೇಟಿ ಮಾಡಿ ಚರ್ಚೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.
ಉಕ್ರೇನ್ - ರಷ್ಯಾ ನಡುವಿನ ಯುದ್ಧವು ಎರಡೂ ದೇಶಗಳಿಗೆ ಆರ್ಥಿಕವಾಗಿ ಭಾರೀ ಪೆಟ್ಟು ನೀಡಿದೆ. ಭಾರತದ ಪ್ರಧಾನಿ ಮತ್ತು ರಷ್ಯಾದ ಅಧ್ಯಕ್ಷರು ಸುದೀರ್ಘ ಅವಧಿಯ ನಂತರ ಭಾರತದಲ್ಲಿ ಸಭೆ ನಡೆಸುತ್ತಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ನಾಲ್ಕು ವರ್ಷಗಳ ನಂತರ ಭಾರತಕ್ಕೆ ಬರುತ್ತಿದ್ದಾರೆ. ಉಕ್ರೇನ್ ವಿರುದ್ಧ ಯುದ್ಧ ಪ್ರಾರಂಭವಾದ ಮೇಲೆ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವುದಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರಾದರೂ ಇದು ಅಂತ್ಯ ಕಾಣುತ್ತಿಲ್ಲ. ಈ ಹಂತದಲ್ಲಿ ಭಾರತಕ್ಕೆ ಸುವರ್ಣ ಅವಕಾಶವೂ ಇದೆ.

ಭಾರತ ಮನಸ್ಸು ಮಾಡಿದರೆ ಈ ಯುದ್ಧವನ್ನು ನಿಲ್ಲಿಸುವುದಕ್ಕೆ ಸಾಧ್ಯವಿದೆ ಎಂದು ಉಕ್ರೇನ್ ಸಹ ಈ ಹಿಂದೆ ಹೇಳಿತ್ತು. ಭಾರತ ಮತ್ತು ರಷ್ಯಾ ಸಂಬಂಧ ಸುಧಾರಿಸಬಾರದು ಅಥವಾ ಎರಡೂ ದೇಶಗಳು ಗಟ್ಟಿಯಾಗಬಾರದು ಎಂದು ಅಮೇರಿಕಾ ಪ್ರಯತ್ನಿಸುತ್ತಲ್ಲೇ ಇದೆ. ಇದೇ ಕಾರಣಕ್ಕೆ ಭಾರತದ ಮೇಲೆ ದುಬಾರಿ ಸುಂಕ ಪ್ರಯೋಗವನ್ನೂ ಅಮೇರಿಕಾ ಮಾಡಿದೆ. ರಷ್ಯಾದಿಂದ ಭಾರತವು ತೈಲ ಖರೀದಿ ಮಾಡುವುದನ್ನು ನಿಲ್ಲಿಸಬೇಕು ಎಂದು ಭಾರತದ ಮೇಲೆ ಅಮೇರಿಕಾವು ನಿರಂತರವಾಗಿ ಒತ್ತಡ ಹಾಕುತ್ತಿದೆ.
ಮಹತ್ವದ ವಿಚಾರಗಳು ಚರ್ಚೆ ಸಾಧ್ಯತೆ: ಇನ್ನು ಭಾರತ ಮತ್ತು ರಷ್ಯಾದ ನಡುವೆ ಮಹತ್ವದ ಚರ್ಚೆ ಹಾಗೂ ಒಪ್ಪಂದಗಳು ಆಗಲಿವೆ ಎಂದು ನಿರೀಕ್ಷೆ ಮಾಡಲಾಗಿದೆ. ಅದರಲ್ಲಿ ಮುಖ್ಯವಾಗಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ, ರಷ್ಯಾದಿಂದ ಕಚ್ಚಾ ತೈಲ ಖರೀದಿ ವಿಚಾರ, ಅಮೇರಿಕಾದ ಭಾರೀ ಸುಂಕ ನೀತಿ, ರಕ್ಷಣಾ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಔಷಧಗಳು, ಯಂತ್ರೋಪಕರಣಗಳು ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ವ್ಯಾಪಾರವನ್ನು ವಿಸ್ತರಿಸಲು ಹೆಚ್ಚಿನ ಕ್ಷೇತ್ರಗಳಲ್ಲಿ ಹೂಡಿಕೆ ವಿಚಾರವನ್ನು ರಷ್ಯಾ ಪ್ರಸ್ತಾಪಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications