ಅಮೆರಿಕ ವಿರುದ್ಧ ರಷ್ಯಾ-ಚೀನಾ ಭರ್ಜರಿ ಬಲ ಪ್ರದರ್ಶನ!
ಮಾಸ್ಕೋ: ರಷ್ಯಾ ಹಾಗೂ ಚೀನಾ ವಿರುದ್ಧ ಒಂದು ಕಡೆ ಅಮೆರಿಕ ಬಲೆ ಎಣೆಯುತ್ತಿದ್ದರೆ, ಮತ್ತೊಂದು ಕಡೆ ಅಮೆರಿಕದ ವಿರುದ್ಧ ರಷ್ಯಾ (russia) ಹಾಗೂ ಚೀನಾ (china) ರಣತಂತ್ರ ರೂಪಿಸಿವೆ. ಈ ಮೂಲಕ ವಿಶ್ವದ ದೊಡ್ಡಣ್ಣನ ವಿರುದ್ಧ ತೊಡೆತಟ್ಟಲು ಏಷ್ಯಾದ ರಾಷ್ಟ್ರಗಳು ಸಜ್ಜಾಗಿದ್ದು, ಉಕ್ರೇನ್ ಯುದ್ಧದ ಸಂದರ್ಭದಲ್ಲೇ ಮಹತ್ವದ ಘೋಷಣೆ ಹೊರಡಿಸಿದೆ ರಷ್ಯಾ.
ಏಷ್ಯಾದ ರಾಷ್ಟ್ರಗಳನ್ನೇ ಬಳಸಿಕೊಂಡು, ಚೀನಾ ಮತ್ತು ರಷ್ಯಾ ವಿರುದ್ಧ ಯುದ್ಧಕ್ಕೆ ಸಿದ್ಧಗೊಳಿಸುವುದು ಅಮೆರಿಕದ ಕುತಂತ್ರ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ತನ್ನ ಪರಮಾಪ್ತ ರಾಷ್ಟ್ರ ಚೀನಾ ಜೊತೆ ಸೇರಿಕೊಂಡು ದೊಡ್ಡಣ್ಣನ ಬುಡಕ್ಕೆ ಬಿಸಿನೀರು ಕಾಯಿಸುವ ಕೆಲಸ ಮಾಡುತ್ತಿದೆ. ಉಕ್ರೇನ್ ಯುದ್ಧದ ಹೊತ್ತಲ್ಲೇ ಚೀನಾ ಹಾಗೂ ರಷ್ಯಾ ನಡುವಿನ ಸಂಬಂಧ ಐತಿಹಾಸಿಕ ಹಂತ ತಲುಪಿದ್ದು, ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಚೀನಾ ರಕ್ಷಣಾ ಸಚಿವ ಲೀ ಶಾಂಗ್‌ಫು (Li Shangfu) ಜೊತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಹತ್ವದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಸೇನಾ ಸಹಾಯವನ್ನು ಪ್ರಸ್ತಾಪಿಸಿರುವ ಲೀ ಶಾಂಗ್‌ಫು, ಚೀನಾ ಜೊತೆಗಿನ ರಷ್ಯಾ ಸಂಬಂಧ ನೆನೆದರು. ಜೊತೆಗೆ ಮುಂದೆ ವಿರೋಧಿಗಳನ್ನು ಎದುರಿಸುವ ರೀತಿ ಹೇಗೆ ಎಂಬ ಬಗ್ಗೆಯೂ ಎರಡೂ ರಾಷ್ಟ್ರಗಳ ನಡುವೆ ಚರ್ಚೆಯಾಯಿತು. ಉಕ್ರೇನ್ ವಿರುದ್ಧ ಯುದ್ಧ ಸಾರಿದ ಬಳಿಕ ರಷ್ಯಾ ಶಸ್ತ್ರಾಸ್ತ್ರ ಸಮಸ್ಯೆಯಿಂದ ಬಳಲುತ್ತಿದೆ. ಕಷ್ಟದ ಸಮಯದಲ್ಲಿ ರಷ್ಯಾಗೆ ಬೆನ್ನೆಲುಬಾಗಿ ನಿಂತಿರುವುದೇ ಈ ಚೀನಾ. ಉಕ್ರೇನ್ ಯುದ್ಧಕ್ಕೆ ಬೇಕಾದ ಸಾಮಗ್ರಿಗಳನ್ನ ಚೀನಾ ಕಳಿಸಿಕೊಡುತ್ತಿದ್ದು, ರಷ್ಯಾ ಈ ಸಹಾಯಕ್ಕೆ ಚೀನಾಗೆ ಋಣಿಯಾಗಿದೆ. ಆದರೂ ಉಕ್ರೇನ್ ಯುದ್ಧದ ವಿಚಾರದಲ್ಲಿ ಚೀನಾ ತಟಸ್ಥವಾಗಿದೆ.
ಚೀನಾ ಸಹಾಯ ನೆನೆದ ಪುಟಿನ್
ಚೀನಾ ರಕ್ಷಣಾ ಸಚಿವ ಲೀ ಶಾಂಗ್‌ಫು ಜೊತೆಗಿನ ಚರ್ಚೆಯ ವೇಳೆ ರಷ್ಯಾಗೆ ಚೀನಾದಿಂದ ಆಗಿರುವ ಸಹಾಯವನ್ನು ನೆನಪು ಮಾಡಿಕೊಂಡ ಪುಟಿನ್, ಧನ್ಯವಾದ ಅರ್ಪಿಸಿದರು. ಈ ಹಿಂದೆ ಕೂಡ ಚಿನಾ ಅಧ್ಯಕ್ಷ ಜಿನ್‌ಪಿಂಗ್ ರಷ್ಯಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪುಟಿನ್ ಚೀನಾದ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದರು. ಇದೆಲ್ಲವನ್ನೂ ನೋಡುತ್ತಿದ್ದರೆ, ಅಮೆರಿಕ ವಿರುದ್ಧ ಚೀನಾ ಮತ್ತು ರಷ್ಯಾ ಒಗ್ಗಟ್ಟಿನಿಂದ ಹೋರಾಟ ನಡೆಸಲು ಸಜ್ಜಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಅಮೆರಿಕ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಷ್ಯಾಗೆ ಬುದ್ಧಿ ಹೇಳಿದ್ದ ಚೀನಾ
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ವಿಚಾರದಲ್ಲಿ ಚೀನಾ ಅದೆಷ್ಟು ಕಿಲಾಡಿ ಬುದ್ಧಿ ಉಪಯೋಗಿಸುತ್ತಿದೆ ಎಂದರೆ, 'ಹಾವು ಸಾಯಬಾರದು ಕೋಲು ಮುರಿಯಬಾರದು' ಎಂಬ ಗಾದೆ ಮಾತನ್ನ ಅಚ್ಚುಕಟ್ಟಾಗಿ ಪಾಲಿಸುತ್ತಿದೆ. ಇದೇ ಕಾರಣಕ್ಕೆ ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ತಟಸ್ಥವಾದ ನಿಲುವು ತಳೆದಿದೆ. ಈ ಮೂಲಕ ಅಮೆರಿಕದ ಕೆಂಗಣ್ಣಿಗೂ ಗುರಿಯಾಗದೆ, ಯುರೋಪ್ ರಾಷ್ಟ್ರಗಳ ಜೊತೆ ವ್ಯಾಪಾರ ಸಂಬಂಧವನ್ನೂ ವೃದ್ಧಿಸಿಕೊಂಡು ಹೋಗುತ್ತಿದೆ ಚೀನಾ. ಜೊತೆಗೆ ರಷ್ಯಾಗೆ ಪರೋಕ್ಷವಾಗಿ ಸಹಾಯ ಕೂಡ ಮಾಡುತ್ತಿದೆ ಚೀನಾ ಸೇನೆ.

ಚೀನಾ ಮತ್ತು ರಷ್ಯಾ ಆತ್ಮೀಯತೆ ನೋಡಿದರೆ ತೈವಾನ್ ವಿರುದ್ಧ ಚೀನಾ ಯುದ್ಧ ಸಿದ್ಧತೆಯಲ್ಲಿ ಇರುವಂತೆ ಕಾಣುತ್ತಿದೆ. ಈ ಕಾರಣಕ್ಕೋ ಅಥವಾ ಅಮೆರಿಕ ವಿರುದ್ಧ ಬಲಪ್ರದರ್ಶನ ಮಾಡುವುದಕ್ಕೋ ಗೊತ್ತಿಲ್ಲ ಎರಡೂ ದೇಶಗಳ ನಡುವೆ ಪದೇಪದೆ ಮಹತ್ವದ ಸಭೆಗಳು ನಡೆಯುತ್ತಿವೆ. ಇತ್ತ ಅಮೆರಿಕ ಚೀನಾ ಸೇನೆಯನ್ನು ಕೆಣಕುವ ಕೆಲಸ ಮಾಡುತ್ತಿದ್ದು, ಈ ಘರ್ಷಣೆಯಲ್ಲಿ ತೈವಾನ್ ಮೊದಲ ಬಲಿಪಶು ಆದರೂ ಅಚ್ಚರಿ ಇಲ್ಲ. ಜಪಾನ್ ಮತ್ತು ದಕ್ಷಿಣ ಕೊರಿಯಾ ವಿರುದ್ಧ ಗುಡುಗಲು ಚೀನಾಗೆ ಉತ್ತರ ಕೊರಿಯಾ ಸಾಥ್ ನೀಡುತ್ತಲೇ ಬಂದಿರುವುದು ಪಕ್ಕಾ.












Click it and Unblock the Notifications