Imran Khan Arrest: ಪಾಕಿಸ್ತಾನದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ!
ಇಸ್ಲಾಮಾಬಾದ್: ಇಮ್ರಾನ್ ಖಾನ್ ಅರೆಸ್ಟ್ ಆಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಮತ್ತೆ ಬೃಹತ್ ಪ್ರತಿಭಟನೆಗಳ ಸರಣಿ ಆರಂಭವಾಗಿದೆ. ಇಮ್ರಾನ್ ಖಾನ್ ಬೆಂಬಲಿಗರು ತಮ್ಮ ನಾಯಕನ ಪರ ಬೀದಿಗೆ ಇಳಿದು ಹೋರಾಟ ಆರಂಭಿಸಿದ್ದಾರೆ. ಹೀಗಾಗಿ ಪಾಕಿಸ್ತಾನ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿದ್ದು, ಪಿಟಿಐ ಕಾರ್ಯಕರ್ತರ ಮೇಲೆ ಪಾಕ್ ಸರ್ಕಾರ ಹಾಗೂ ಸೇನೆ ಹದ್ದಿನ ಕಣ್ಣಿಟ್ಟಿದೆ.
ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈ ಪೈಕಿ ಪಾಕ್ ರಾಜಧಾನಿ ಇಸ್ಲಾಮಾಬಾದ್ ಮತ್ತೆ ಹಿಂಸಾಚಾರದ ಕೇಂದ್ರಬಿಂದುವಾಗುವ ಎಲ್ಲ ಲಕ್ಷಣ ಗೋಚರಿಸಿದೆ. ಕರಾಚಿ, ರಾವಲ್ಪಿಂಡಿ ಸೇರಿದಂತೆ ಪಾಕ್‌ನ ಪ್ರಮುಖ ನಗರಗಳಲ್ಲಿ ಇಮ್ರಾನ್ ಬೆಂಬಲಿಗರು ಇದೀಗ ಹೋರಾಟ ಆರಂಭಿಸಿದ್ದಾರೆ. ಮೇ ತಿಂಗಳಲ್ಲಿ ಇಮ್ರಾನ್ ಖಾನ್ ಅರೆಸ್ಟ್ ಆಗಿದ್ದಾಗ ಕೂಡ ಇದೇ ರೀತಿ ಹಿಂಸೆ ಭುಗಿಲೆದ್ದಿತ್ತು. ಹತ್ತಕ್ಕೂ ಹೆಚ್ಚು ಪಾಕಿಸ್ತಾನಿ ನಾಗರಿಕರು ಹಿಂಸೆಗೆ ಬಲಿಯಾಗಿದ್ದರು. ಇದೀಗ ಮತ್ತೆ ಪರಿಸ್ಥಿತಿ ಕೈಮೀರಿ ಹೋಗುವ ಲಕ್ಷಣ ಗೋಚರಿಸಿದೆ.

ಪಾಕಿಸ್ತಾನ ಮಾಜಿ ಪ್ರಧಾನಿ ಬಂಧನ ಏಕೆ?
ಇಮ್ರಾನ್ ಖಾನ್ ವಿರುದ್ಧದ ತೋಶಾಖಾನಾ ಭ್ರಷ್ಟಾಚಾರ ಕೇಸ್ ಸಾಬೀತಾಗಿದ್ದು, ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾಖ್ ಖಾನ್ 3 ವರ್ಷ ಜೈಲು ಶಿಕ್ಷೆ ಅನುಭವಿಸುವುದು ಗ್ಯಾರಂಟಿ ಆಗಿದೆ. ಹೀಗಾಗಿ ಇಮ್ರಾನ್ ಖಾನ್‌ಗೆ ಜೈಲೂಟ ರೆಡಿ ಮಾಡಿದ್ದಾರೆ ಅಧಿಕಾರಿಗಳು. ಇದರ ಬೆನ್ನಲ್ಲೇ ಐದು ವರ್ಷ ರಾಜಕೀಯದಲ್ಲಿ ತೊಡಗಿಸಿಕೊಳ್ಳದಂತೆ ಅನರ್ಹಗೊಳಿಸಿದೆ ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆ. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ವಿದೇಶಗಳ ಗಣ್ಯರಿಂದ ವಾಚ್ ಸೇರಿ ಹಲವು ದುಬಾರಿ ವಸ್ತುಗಳನ್ನ ಪಡೆದು ಸರ್ಕಾರಿ ಅಧಿಕಾರಿಗಳಿಗೆ ಮಾರಿದ್ದರೆಂಬ ಆರೋಪ ಇದಾಗಿದೆ. ಹೀಗೆ ಇಮ್ರಾನ್ ಖಾನ್ ಬಂಧನ ಪಾಕ್‌ನಲ್ಲಿ ಬೆಂಕಿ ಹತ್ತಿದೆ.
₹14 ಕೋಟಿಯ ಭ್ರಷ್ಟಾಚಾರ?
ಇನ್ನು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪಾಕಿಸ್ತಾನ ಚುನಾವಣೆ ಆಯೋಗ ಕಳೆದ ವರ್ಷ ಕೇಸ್ ದಾಖಲಿಸಿತ್ತು. ಗಿಫ್ಟ್ ಮಾರಾಟದಿಂದ ₹14 ಕೋಟಿಗೂ ಹೆಚ್ಚು ಹಣವನ್ನ ಇಮ್ರಾನ್ ಗಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇಸ್ಲಾಮಾಬಾದ್ ಜಿಲ್ಲಾ & ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಹುಮಾಯುನ್ ದಿಲವಾರ್ ತೀರ್ಪು ನೀಡಿ, ಇಮ್ರಾನ್‌ಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಒಂದು ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದ್ದು, ದಂಡದ ಪಾವತಿ ಮಾಡದಿದ್ದರೆ ಹೆಚ್ಚುವರಿಯಾಗಿ 6 ತಿಂಗಳು ಜೈಲು ಕಂಬಿ ಎಣಿಸಬೇಕು ಎಂದು ಇಮ್ರಾನ್ ಖಾನ್ ಅವರಿಗೆ ಆದೇಶ ನೀಡಲಾಗಿದೆ. ಹೀಗಾದರೆ 3 ವರ್ಷಗಳ ಜೊತೆ ಹೆಚ್ಚುವರಿಯಾಗಿ ಒಟ್ಟು 6 ತಿಂಗಳು ಶಿಕ್ಷೆ ಅನುಭವಿಸಬೇಕು. ನಿನ್ನೆ ತೀರ್ಪು ಹೊರಬಿದ್ದ ಬಳಿಕ ಪಾಕಿಸ್ತಾನ ಬೂದಿ ಮುಚ್ಚಿದ ಕೆಂಡವಾಗಿದೆ.
ಇಮ್ರಾನ್ ವಿರುದ್ಧ ನೂರಾರು ಕೇಸ್
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದರು. ಈ ಪ್ರಕರಣವೂ ಸೇರಿದಂತೆ ಇಮ್ರಾನ್ ಖಾನ್ ವಿರುದ್ಧ ನೂರಕ್ಕೂ ಹೆಚ್ಚು ಕೇಸ್‌ಗಳು ಇವೆ. ಇಮ್ರಾನ್ ಖಾನ್ ಎಲ್ಲಾ ಪ್ರಕರಣಗಳಲ್ಲಿ ಸಿಲುಕಿ ನರಳುವಾಗಲೇ ಜೈಲು ಶಿಕ್ಷೆ ಬೇರೆ ಪ್ರಕಟವಾಗಿದೆ. ಇದು ಇಮ್ರಾನ್ ಖಾನ್ ಬೆಂಬಲಿಗರನ್ನ ಕೆರಳಿಸಿದ್ದು ಪ್ರತಿಭಟನೆ ಭುಗಿಲೆದ್ದಿದೆ.

ಒಟ್ನಲ್ಲಿ ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಪರಿಣಾಮ ಪಾಕ್ ಜನರಿಗೆ ನೆಮ್ಮದಿಯೇ ಇಲ್ಲ ಎನ್ನಬಹುದು. ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಕೇವಲ ಮೂರು ತಿಂಗಳ ಹಿಂದಷ್ಟೇ ಭೀಕರ ಹಿಂಸೆ ಕಂಡಿದ್ದ ಪಾಕಿಸ್ತಾನ ಮತ್ತೊಮ್ಮೆ ಅಂತಹದ್ದೇ ಪರಿಸ್ಥಿತಿಯ ಭೀತಿ ಮತ್ತು ಆತಂಕಕ್ಕೆ ಸಿಲುಕಿದೆ. ಈಗಾಗಲೇ ಪಾಕ್ ಸರ್ಕಾರ ಸೂಕ್ಷ್ಮ ಸ್ಥಳಗಳಲ್ಲಿ ಸೇನೆ ಮತ್ತು ಪೊಲೀಸರ ನಿಯೋಜನೆ ಮಾಡಿದೆ.












Click it and Unblock the Notifications