ಮೂರನೇ ಮಗುವಿನ ನಿರೀಕ್ಷೆಯಲ್ಲಿ ವಿಲಿಯಂ ಮತ್ತು ಕೇಟ್
ಬೆಂಗಳೂರು, ಸೆಪ್ಟೆಂಬರ್ 04 : ಮೈಸೂರಿನ ರಾಜಮನೆತನದಲ್ಲಿರುವಂತೆಯೇ ಇಂಗ್ಲೆಂಡಿನ ರಾಜಮನೆತನದಿಂದಲೂ ಗುಡ್ ನ್ಯೂಸ್ ಸದ್ಯದಲ್ಲಿಯೇ ಬರಲಿದೆ. ಅದೇನೆಂದರೆ, ಕೇಂಬ್ರಿಜ್‌ನ ಡ್ಯೂಕ್ ಪ್ರಿನ್ಸ್ ವಿಲಿಯಂ ಕೈಗೆ ಕೇಟ್ ಮಿಡ್ಲ್‌ಟನ್ ಅವರು ಮೂರನೇ ಮಗುವನ್ನು ಇಡಲಿದ್ದಾರೆ.
ಕೇಂಬ್ರಿಜ್‌ನ ಡ್ಯೂಕ್ ಮತ್ತು ಡಚೆಸ್ ಮೂರನೇ ಮಗುವಿನ ನಿರೀಕ್ಷೆಯಲ್ಲಿರುವುದು ರಾಜಮನೆತನಕ್ಕೆ ಭಾರೀ ಸಂತೋಷ ತಂದಿದೆ ಎಂದು ಕೆನ್ಸಿಂಗ್ಟನ್ ಪ್ಯಾಲೇಸ್ ಪತ್ರಿಕಾ ಪ್ರಕಟಣೆಯಲ್ಲಿ ಸೋಮವಾರ ತಿಳಿಸಿದೆ. ಈ ಸುದ್ದಿ ಕೇಳಿ ರಾಣಿ ಎಲಿಜಬೆತ್ ಮತ್ತು ಎರಡೂ ಕುಟುಂಬದ ಸದಸ್ಯರು ನಲಿದಾಡುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಇಬ್ಬಿರಿಗೀಗಾಗಲೆ ನಾಲ್ಕು ವರ್ಷದ ಪ್ರಿನ್ಸ್ ಜಾರ್ಜ್ ಮತ್ತು ಎರಡು ವರ್ಷದ ಪ್ರಿನ್ಸೆಸ್ ಚಾರ್ಲೊಟ್ಟಿ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ರಾಜಮನೆತನಕ್ಕೆ ರಾಜಕುಮಾರನೋ, ರಾಜಕುಮಾರಿಯೋ ಬರುವ ಹೊತ್ತಿನಲ್ಲಿ ಕೇಂಬ್ರಿಜ್ ಡಚೆಸ್ ಆಗಿರುವ ಕೇಟ್ ಅವರು ಕೆಲವು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕೇಟ್ ಅವರು Hyperemesis Gravidarum ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಲಕ್ಷಣಗಳು, ತಲೆಸುತ್ತುವುದು ಮತ್ತು ವಿಪರೀತ ವಾಂತಿಯಾಗುವುದು. ತಿಂದಿದ್ದೆಲ್ಲ ಜೀರ್ಣವಾಗದೆ ವಾಂತಿಯಾಗುವುದು, ದೇಹದ ತೂಕ ಕುಸಿಯುವುದು ಮತ್ತು ಸಕ್ಕರೆಯ ಅಂಶ ಏರುಪೇರಾಗುವುದು ಎಂದು ಸುತ್ತೋಲೆ ತಿಳಿಸಿದೆ.
ಇವೆಲ್ಲವೂ ಮಹಿಳೆ ಗರ್ಭವತಿಯಾದಾಗ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳೇ. ಆದರೆ, ವಿಪರೀತ ಸ್ಥಿತಿಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಹಾರ್ಮೋನ್ ಸ್ರವಿಕೆ ಏರುಪೇರಾಗಿರುವುದರಿಂದ ಹೀಗಾಗಿರಬಹುದು ಎಂದು ವೈದ್ಯರು ಸೂಚಿಸಿದ್ದಾರೆ.
ಇದೇ ಸಮಸ್ಯೆಯನ್ನು ಕೇಟ್ ಮಿಡ್ಲ್‌ಟನ್ ಅವರು ಮೊದಲೆರಡು ಮಕ್ಕಳು ಹುಟ್ಟುವ ಮೊದಲೂ ಅನುಭವಿಸಿದ್ದರು. ಈ ಕಾರಣದಿಂದಾಗಿ ಅವರು ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಮಾಡಿ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.












Click it and Unblock the Notifications