Prajwal Revanna video: ಈ ದೇಶದಿಂದ ಪ್ರಜ್ವಲ್ ವಿಡಿಯೋ ಬಿಡುಗಡೆ: ಎಸ್‌ಐಟಿಗೆ ಸಿಕ್ತು ಮಹತ್ವದ ಮಾಹಿತಿ
ಎಸ್‌ಐಟಿ ತನಿಖೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಮೊದಲು ಬಿಡುಗಡೆ ಮಾಡಿದ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಆರೋಪಿಗಳನ್ನು ಬಂಧಿಸಿದ ಬಳಿಕ ಎಸ್‌ಐಟಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಜ್ವಲ್ ರೇವಣ್ಣ ಅವರು ಸೋಮವಾರ ಬಿಡುಗಡೆ ಮಾಡಿದ ವಿಡಿಯೋದ ಸ್ಥಳ ಯಾವುದು ಎಂಬುದರ ಬಗ್ಗೆ ಎಸ್‌ಐಟಿಗೆ ಮಹತ್ವದ ಮಾಹಿತಿ ಸಿಕ್ಕಿದೆ.

ಪೆನ್‌ಡ್ರೈವ್ ಬಿಡುಗಡೆಯಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಅವರನ್ನು ಬಂಧಿಸುವಂತೆ ಒತ್ತಡಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಎಸ್‌ಐಟಿ ತಂಡವನ್ನು ರಚನೆ ಮಾಡಿತು. ಈ ತಂಡ ಸದ್ಯ ಅಶ್ಲೀಲ ವಿಡಿಯೋದ ಬಗ್ಗೆ ಪರಿಶೀಲನೆ ನಡೆಸಿದೆ. ಇದಕ್ಕಾಗಿ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರ್ ಆಗಲು ನೋಟೀಸ್ ಕೂಡ ಜಾರಿ ಮಾಡಿದೆ.
ಈ ಬೆಳವಣಿಗೆಗಳ ನಡುವೆ ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಸೋಮವಾರ ಬಿಡುಗಡೆ ಮಾಡಿದ್ದು ಅದರಲ್ಲಿ ತಾವು ಇದೇ ಮೇ ತಿಂಗಳು ಎಸ್‌ಐಟಿ ವಿಚಾರಣೆ ಹಾಜರಾಗುತ್ತಿರುವುದಾಗಿ ಹೇಳಿದ್ದಾರೆ. ಅದರಂತೆ ಪ್ರಜ್ವಲ್ ಅವರು ವಿಮಾನವನ್ನು ಬುಕ್ ಮಾಡಿದ್ದಾರೆನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಈ ಮಧ್ಯೆ ಎಸ್‌ಐಟಿ ಪ್ರಜ್ವಲ್ ರೇವಣ್ಣ ಅವರು ಎಲ್ಲಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಿದೆ.

ಯುರೋಪ್‌ನ ಹಂಗೇರಿಯ ಬುಡಾಪೆಸ್ಟ್‌ನಿಂದ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಡಿಯೋ ರಿಲೀಸ್ ಆದ ಮೊಬೈಲ್ ಐಪಿ ಅಡ್ರೆಸ್ ಟ್ರೇಸ್ ಮಾಡುವ ಮೂಲಕ ಎಸ್‌ಐಟಿ ಈ ಮಾಹಿತಿ ಕಲೆ ಹಾಕಿದೆ. ವಿಡಿಯೋ ಹೇಳಿಕೆ ಬಿಡುಗಡೆಗೂ ಎರಡು ದಿನ ಮೊದಲೇ ರೆಕಾರ್ಡ್ ಆಗಿತ್ತು ಎಂಬುದನ್ನೂ ಎಸ್‌ಐಟಿಯ ಟೆಕ್ನಿಕಲ್ ಟೀಮ್ ಪತ್ತೆ ಮಾಡಿದೆ.
ಮೇ 31ಕ್ಕೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಯುರೂಪ್‌ನಿಂದ ಬಿಡುಗಡೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಅಶ್ಲೀಲ ವಿಡಿಯೋ ಬಿಡುಗಡೆಯಾಗಿ ಸುಮಾರು ಒಂದು ತಿಂಗಳ ನಂತರ ಪ್ರಜ್ವಲ್ ತಮ್ಮ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಅವರು ಜರ್ಮನಿಯಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಪ್ರಜ್ವಲ್ ಅವರು ಬಿಡುಗಡೆ ಮಾಡಿದ ವಿಡಿಯೋ ಯುರೋಪ್‌ನಿಂದ ಕಳುಹಿಸಲಾಗಿದೆ ಎಂದು ಎಸ್‌ಐಟಿ ಪತ್ತೆ ಮಾಡಿದೆ.
ಪ್ರಜ್ವಲ್ ದೇಶಕ್ಕೆ ಬರುತ್ತಿದ್ದಂತೆ ಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಅಧಿಕಾರಿಗಳು ಸಜ್ಜಾಗಿದ್ದಾರೆ.
ಹಾಸನದಲ್ಲಿ ಪ್ರತಿಭಟನೆ:
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ನಾಳೆ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ನಾಳಿನ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ಮಹಿಳಾ ನಾಯಕಿಯರಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಡಾ ಮೀನಾಕ್ಷಿ ಬಾಳಿ, ಉಪಾಧ್ಯಕ್ಷ ರಾದ ಕೆನೀಲಾ, ಕೆಎಸ್ ವಿಮಲಾ, ಹಾಸನದ ಖ್ಯಾತ ವಕೀಲರು ಹಾಗು ಸಾಹಿತಿ ಬಾನು ಮುಷ್ತಾಕ್ ಜಂಟಿ ಸುದ್ದಿ ಗೋಷ್ಠಿ ನಡೆಸಿದರು.
ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಭಾನು ಮುಷ್ತಾಕ್ ಅವರು, ಹಿಂದೆ 1980 ರ ದಶಕದಲ್ಲಿ ಸರಣಿ ಕೊಲೆ ನಡೆದಿತ್ತು. ಆಗ ಹಾಸನದ ಜನ ಎಂದರೆ ಬೇರೆ ಕಡೆ ಜನರು ಟೀಕಿಸೋ ಪರಿಸ್ಥಿತಿ ಇತ್ತು. ಈಗ ಮತ್ತೊಮ್ಮೆ ಬೇಡದ ಸುದ್ದಿಗೆ ಜನರು ನಮ್ಮನ್ನ ಗುರ್ತಿಸುವಂತಾಗಿದೆ. ದೇಶದ ದೊಡ್ಡ ಲೈಂಗಿಕ ಹಗರಣಕ್ಕೆ ನಮ್ಮ ಜಿಲ್ಲೆಯ ಪ್ರಖ್ಯಾತ ಕುಟುಂಬ ಗುರಿಯಾಗಿದೆ. ಈತನಿಗೆ ಯಾರು ರಕ್ಷಣೆ ಕೊಡ್ತಾ ಇದಾರೆ. ಯಾಕೆ ಆತ ಕಾನೂನಿಗೆ ಶರಣಾಗುತ್ತಿಲ್ಲ. ಎಂಪಿಯಾದವರು ಅಧಿಕಾರ ದುರುಪಯೋಗ ಮಾಡಿಕೊಂಡಿದಾರೆ.
ಅಧಿಕಾರ ಇರೋ ಕಾರಣಕ್ಕೆ ಅನೇಕ ಜನರು ಹೋಗ್ತಾರೆ. ಬೇರೆ ಬೇರೆ ಕಾರಣಗಳಿಗೆ ಅವರ ಬಳಿ ಹೋದಾಗ ಗೌರವಯುತವಾಗಿ ನಡೆಸಿಕೊಳ್ಳಬೇಕು. ರಕ್ಷಣೆ ಮಾಡಬೇಕಾದವರೇ ದೌರ್ಜನ್ಯ ಮಾಡೋದು ಅತ್ಯಂತ ಘೋರ ಅಪರಾಧ. ಸಂವಿಧಾನದ ಗೌರವ ಎತ್ತಿ ಹಿಡಿಯಬೇಕಾದವರು ಹೀಗೆ ಮಾಡಿರೋದನ್ನ ಎಲ್ಲಿಯು ಕೇಳಿಲ್ಲ. ಅತ್ಯಾಚಾರ ಮಾಡೋದು ಅದನ್ನ ವೀಡಿಯೋ ಮಾಡೋದು, ಅದನ್ನ ಬಿಡುಗಡೆ ಮಾಡೋದು ಅತ್ಯಂತ ಘೋರ ಅಪರಾಧ. ಹಾಗಾಗಿ ಒಂದು ನಾಗರೀಕ ಸಮಾಜವಾಗಿ ಇದಕ್ಕೆ ಪ್ರತಿರೊದ ತೋರಲು ನಾಳೆ ಹೋರಾಟ ನಡೆಯುತ್ತಿದೆ ಎಂದರು.












Click it and Unblock the Notifications