ಯುದ್ಧ ಬಿಟ್ಟು ಮಾತುಕತೆಗೆ ಮರಳಲು ಉಕ್ರೇನ್ ಅಧ್ಯಕ್ಷರಿಗೆ ಮೋದಿ ಸಲಹೆ
ಕೀವ್, ಫೆಬ್ರವರಿ 26: ಉಕ್ರೇನ್‌ನಲ್ಲಿ ರಷ್ಯಾ ಯುದ್ಧದಿಂದಾಗಿ ಆಗಿರುವ ಪ್ರಾಣಹಾನಿ ಆಸ್ತಿಪಾಸ್ತಿ ನಷ್ಟದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಮಂತ್ರಿ ಸಚಿವಾಲಯ ಮಾಹಿತಿ ನೀಡಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು ಈ ವೇಳೆ ಅಧ್ಯಕ್ಷ ಝೆಲೆನ್ಸ್ಕಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ವಿವರವಾಗಿ ತಿಳಿಸಿದರು.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಹೊರತಾಗಿ ಶಾಂತಿ ಮಾತುಕತೆ ನಡೆಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ನೀಡಿದರು. ಸಂಧಾನ ಮಾತುಕತೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಸಹಕಾರ ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಕಾಳಜಿ:
ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಕಾಳಜಿ ತೋರಿದ್ದಾರೆ. ಭಾರತೀಯ ನಾಗರಿಕರನ್ನು ತ್ವರಿತ ಹಾಗೂ ಸುರಕ್ಷಿತವಾಗಿ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಸಹಕಾರ ನೀಡಲು ಕೋರಿದ್ದಾರೆ.
ಭಾರತದ ಬಗ್ಗೆ ರಷ್ಯಾ ರಾಯಭಾರಿ ಪ್ರಶಂಸೆ:
"ಕಳೆದ ಫೆಬ್ರವರಿ 25ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತವು ಸ್ವಾತಂತ್ರ ಮತ್ತು ಸಮತೋಲಿತ ನಿಲುವು ಪ್ರದರ್ಶಿಸಿರುವ ಬಗ್ಗೆ ಭಾರತದಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯು ಪ್ರಶಂಸೆ ವ್ಯಕ್ತಪಡಿಸಿದೆ. ಉಕ್ರೇನ್ ಸುತ್ತಮುತ್ತಲಿನ ಪರಿಸ್ಥಿತಿಯ ಕುರಿತು ಭಾರತದೊಂದಿಗೆ ನಿಕಟ ಸಂವಾದವನ್ನು ನಿರ್ವಹಿಸಲು ರಷ್ಯಾ ಬದ್ಧವಾಗಿದೆ ಟ್ವೀಟ್ ಮಾಡಿದೆ.
ರಷ್ಯಾ-ಉಕ್ರೇನ್ ದಾಳಿ ಮತ್ತು ಪ್ರತಿದಾಳಿ:
ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಪಡೆಗಳು ಉಕ್ರೇನ್‌ನಲ್ಲಿ 211 ಮಿಲಿಟರಿ ಮೂಲಸೌಕರ್ಯ ಸೌಲಭ್ಯಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಇದರ ಮಧ್ಯೆ, ಉಕ್ರೇನ್ ಕನಿಷ್ಠ 80 ಟ್ಯಾಂಕ್‌ಗಳು, 516 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 7 ಹೆಲಿಕಾಪ್ಟರ್‌ಗಳು, 10 ವಿಮಾನಗಳು ಮತ್ತು 20 ಕ್ರೂಸ್ ಕ್ಷಿಪಣಿಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಉಕ್ರೇನ್ ಖಾರ್ಕಿವ್ ನಗರದಲ್ಲಿ ರಷ್ಯಾದ 1000 ಯೋಧರನ್ನು ಹೊಡೆದುರುಳಿಸಲಾಗಿದ್ದು, 200 ಯೋಧರನ್ನು ಬಂಧಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ.
ಉಕ್ರೇನ್ ಶಸ್ತ್ರತ್ಯಾಗ ಮಾಡುವುದಿಲ್ಲ ಎಂದ ಝೆಲೆನ್ಸ್ಕಿ:
ಉಕ್ರೇನ್ ವಿರುದ್ಧ ರಷ್ಯಾ ದಾಳಿಯ ನಡುವೆ ಯಾವುದೇ ಕಾರಣಕ್ಕೂ ಉಕ್ರೇನ್ ಶಸ್ತ್ರಾಸ್ತ್ರ ತ್ಯಾಗ ಮಾಡುವುದಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಶನಿವಾರ ದೇಶದ ಪ್ರಜೆಗಳು ಮತ್ತು ಸೈನಿಕರಿಗೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದಾರೆ. ಸಾಕಷ್ಟು ಮಾಧ್ಯಮಗಳಲ್ಲಿ ರಷ್ಯಾದ ಎದುರಿಗೆ ನಾನು ಮತ್ತು ಉಕ್ರೇನ್ ಯೋಧರು ಶರಣಾಗಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವತಃ ಅಧ್ಯಕ್ಷ ಝೆಲೆನ್ಸ್ಕಿ ಸ್ಪಷ್ಟನೆ ನೀಡಿದ್ದಾರೆ. "ನಾನು ಇಲ್ಲಿದ್ದೇನೆ. ನಾವು ಯಾವುದೇ ಶಸ್ತ್ರಾಸ್ತ್ರ ತ್ಯಾಗವನ್ನು ಮಾಡಿಲ್ಲ. ನಮ್ಮ ದೇಶವನ್ನು ನಾವೇ ಏಕೆಂದರೆ ನಮ್ಮ ಆಯುಧಗಳೇ ನಮ್ಮ ಶಕ್ತಿ ಮತ್ತು ಸತ್ಯವಾಗಿರುತ್ತವೆ," ಎಂದು ಝೆಲೆನ್ಸ್ಕಿ ಘೋಷಿಸಿದ್ದಾರೆ. ತಾವು ಓಡಿ ಹೋಗಿರುವ ಅಥವಾ ಶರಣಾಗಿರುವ ಕುರಿತು ಹರಿದಾಡುತ್ತಿರುವ ಸುದ್ದಿಗಳನ್ನು ಅವರು ನಿರಾಕರಿಸಿದ್ದಾರೆ.












Click it and Unblock the Notifications