ಬಾಂಗ್ಲಾದೇಶ ವಿಚಾರದಲ್ಲಿ ಪಾಕಿಸ್ತಾನ ಎಂಟ್ರಿ: ಭಾರತದ ಶತ್ರುವಿನ ಕಿರಿಕ್ ಏನು?
ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದ್ದು ನೆಮ್ಮದಿಯೇ ಇಲ್ಲವಾಗಿದೆ. ಅಲ್ಲಿನ ಜನರು ಜೀವನ & ಜೀವ ಎರಡನ್ನೂ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಬಾಂಗ್ಲಾದೇಶದ ಉದ್ರಿಕ್ತರು & ಕೆಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದ್ದಾರೆ, ಎಂಬ ಗಂಭೀರ ಆರೋಪ ಸಂಚಲನ ಸೃಷ್ಟಿಸಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲಿ ಪಾಕಿಸ್ತಾನ ಕೂಡ, ಬಾಂಗ್ಲಾ ವಿಚಾರಕ್ಕೆ ಎಂಟ್ರಿ ಕೊಟ್ಟಿದೆ! ಹಾಗಾದ್ರೆ ಬಾಂಗ್ಲಾದೇಶ ಗಲಭೆ ವಿಚಾರವಾಗಿ ಪಾಕಿಸ್ತಾನ ಹೇಳಿದ್ದೇನು?
ಪಾಕಿಸ್ತಾನ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ, ಬೇರೆ ದೇಶಗಳ ತಟ್ಟೆಯಲ್ಲಿ ನೋಣವನ್ನ ಹುಡುಕುತ್ತದೆ. ಹೀಗಾಗಿ ಪಾಕಿಸ್ತಾನ ಇನ್ನೂ ಉದ್ಧಾರ ಆಗಿಲ್ಲ. ಯಾರೋ ಕೆಲವರ ಮಾತು ಕೇಳಿಕೊಂಡು ಪಾಕಿಸ್ತಾನ ಕಿರಿಕ್ ಮಾಡಿಕೊಂಡು, ಅಕ್ಕಪಕ್ಕದ ದೇಶಗಳ ಜೊತೆಗೆ ಸಂಬಂಧ ಹಾಳು ಮಾಡಿಕೊಂಡಿದೆ. ಪಾಕಿಸ್ತಾನದ ಇದೇ ರೀತಿಯ ವರ್ತನೆ ಪರಿಣಾಮ ಈ ಹಿಂದೆ ತನ್ನದೇ ದೇಶದ ಭಾಗವಾಗಿದ್ದ ಬಾಂಗ್ಲಾದೇಶವನ್ನ ಕೂಡ ಕಳೆದುಕೊಂಡಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮತ್ತೊಮ್ಮೆ ಬಾಂಗ್ಲಾದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದೆ ಪಾಪಿ ಪಾಕಿಸ್ತಾನ ಎಂಬ ಆರೋಪ ಕೇಳಿಬಂದಿದೆ.

ಸೋಷಿಯಲ್ ಮೀಡಿಯಾ ಮಂದಿ ಏನಂದ್ರು?
ಹೌದು, ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಪಾಕಿಸ್ತಾನದ ಸೇನೆ ಮುಖ್ಯಸ್ಥ ಜನರಲ್ ಅಸಿಮ್ ಮುನಿರ್ ಹೇಳಿಕೆ ನೀಡಿದ್ದಾರೆ. ಅಂದಹಾಗೆ ಇದೀಗ ಬಾಂಗ್ಲಾದಲ್ಲಿ ಆರಂಭ ಆಗಿರುವ ಹಿಂಸಾಚಾರದ ರೀತಿಯಲ್ಲೇ, ಪಾಕಿಸ್ತಾನದಲ್ಲಿ ಕೂಡ ಹಿಂಸೆ ನಡೆಸಲು ಕೆಲವರಿಂದ ಹುನ್ನಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ ಪಾಕಿಸ್ತಾನದ ಸೇನೆ ಮುಖ್ಯಸ್ಥ ಜನರಲ್ ಅಸಿಮ್ ಮುನಿರ್. ಅಲ್ಲದೆ ಇಂತಹ ಪ್ರಯತ್ನಗಳನ್ನ ಮಾಡದೆ ಇದ್ದರೆ ಒಳ್ಳೆಯದು ಎನ್ನುವ ರೀತಿ ಎಚ್ಚರಿಕೆ ಕೂಡ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಾಂಗ್ಲಾದೇಶ ವಿಚಾರವನ್ನ ಕೂಡ ಕೆಣಕಿದೆ ಪಾಕಿಸ್ತಾನ. ಹಾಗೇ ಬಾಂಗ್ಲಾ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವ ಬಗ್ಗೆ ಮುನ್ಸೂಚನೆ ನೀಡಿದಂತೆ ಕಾಣುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಶುರುವಾಗಿದೆ.
ಇರಲಾರದೆ ಇರುವೆ ಬಿಟ್ಟುಕೊಂಡ ಪಾಕ್?
ಪಾಕಿಸ್ತಾನದಲ್ಲಿ ಆರ್ಥಿಕತೆ ಮಣ್ಣು ಮುಕ್ಕಿದ್ದು, ಜನರು ಅಲ್ಲಿನ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೇ ಸಮಯದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಹೀಗೆ ಹೇಳಿಕೆ ನೀಡಿರುವುದು ಸಂಚಲನ ಸೃಷ್ಟಿ ಮಾಡಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಸಲು ನಡೆಸುವ ಪ್ರಯತ್ನಗಳನ್ನು ಸೇನೆ ವಿಫಲಗೊಳಿಸಲಿದೆ, ಎಂದಿದ್ದಾರೆ ಪಾಕ್ ಸೇನೆ ಮುಖ್ಯಸ್ಥ.
ಆ ಮೂಲಕ ಪಾಕಿಸ್ತಾನದ ಶಾಂತಿ ಕಾಪಾಡಲು ಸೇನೆ ಸದಾ ಸನ್ನದ್ಧ ಎಂದಿದ್ದಾರೆ ಪಾಕಿಸ್ತಾನದ ಸೇನೆ ಮುಖ್ಯಸ್ಥ ಜನರಲ್ ಅಸಿಮ್ ಮುನಿರ್. ಈ ಮೂಲಕ ಪಾಕಿಸ್ತಾನಕ್ಕೆ ಭಯ ಶುರುವಾದಂತೆ ಕಾಣುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಬಾಂಗ್ಲಾದ ಘಟನೆ ಪಾಕಿಸ್ತಾನದ ರಾಜಕಾರಣಿಗಳಿಗೆ ಒಂದು ಪಾಠವಾಗಬೇಕು ಎಂದು ಕೂಡ ಸಲಹೆಯನ್ನ ನೀಡುತ್ತಿದ್ದಾರೆ ನೆಟ್ಟಿಗರು.












Click it and Unblock the Notifications