Pakistan Election: ಪಾಕ್ ಚುನಾವಣೆಗೆ ಮುಹೂರ್ತ, ಯಾವಾಗ ಎಲೆಕ್ಷನ್?
ಪಾಕಿಸ್ತಾನದ ಸಂಸತ್ ಚುನಾವಣೆ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಸದಾ ಭಾರತ ವಿರೋಧಿಯಾಗಿ ವರ್ತಿಸಿ ಭಯೋತ್ಪಾದಕರ ತವರು ನೆಲವಾಗಿರುವ ಪಾಕಿಸ್ತಾನದಲ್ಲಿ ಇದೀಗ ಚುನಾವಣೆ ಟೆನ್ಷನ್ ಶುರುವಾಗಿದೆ. ಹಂಗೋ ಹಿಂಗೋ ಚುನಾವಣೆ ಮಾಡಿ ಮುಗಿಸೋದಕ್ಕೆ ಪಾಕಿಸ್ತಾನ ಚುನಾವಣಾ ಆಯೋಗ ಸಜ್ಜಾಗಿದೆ. ಹಾಗಾದರೆ ಮತದಾನ ಯಾವಾಗ? ಪಾಕ್ ಚುನಾವಣೆ ರಿಸಲ್ಟ್ ಯಾವಾಗ ಸಿಗುತ್ತೆ?
ಪಾಕಿಸ್ತಾನದಲ್ಲಿ ನವೆಂಬರ್ 6ಕ್ಕೆ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಪಾಕ್ ರಾಷ್ಟ್ರಪತಿ ಆರಿಫ್ ಅಲ್ವಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದರು. ಪಾಕ್ ಸಂಸತ್ ವಿಸರ್ಜಿಸಿ 90 ದಿನ ಮುಗಿಯುವ ಒಳಗೆ ಮತದಾನ ನಡೆಸಲು ಅಲ್ವಿ ಸೂಚಿಸಿದ್ದರು. ಆದರೆ ಈಗ ಫೈನಲ್ ಡೇಟ್ ಫಿಕ್ಸ್ ಆಗಿದ್ದು, 2024ರ ಜನವರಿ ತಿಂಗಳಲ್ಲಿ ಪಾಕಿಸ್ತಾನ ಸಂಸತ್ ಚುನಾವಣೆ ಪಕ್ಕಾ ಎನ್ನಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜನವರಿ ಕೊನೆಯ ವಾರದಲ್ಲಿ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗ ಹೇಳಿದ್ದೇನು?
ಅಷ್ಟಕ್ಕೂ ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ಕ್ಷೇತ್ರ ಪುನರ್‌ವಿಂಗಡಣೆ ಕಾರ್ಯದ ಪ್ರಗತಿ ಪರಿಶೀಲನೆ ನಡೆದಿದ್ದು, ಸೆಪ್ಟೆಂಬರ್ 27ರಂದು ಕ್ಷೇತ್ರಗಳ ಕರಡು ಪಟ್ಟಿ ಪ್ರಕಟಿಸಲಾಗುತ್ತದೆ. ಆ ಬಳಿಕ, ಆಕ್ಷೇಪಣೆ & ಸಲಹೆ ಪರಿಗಣಿಸಿದ ನಂತರ ನವೆಂಬರ್ 30ರಂದು ಅಂತಿಮ ಪಟ್ಟಿಯನ್ನ ಪ್ರಕಟಿಸಲಾಗುತ್ತದೆ ಅಂತಾ ಪಾಕಿಸ್ತಾನ ಚುನಾವಣಾ ಆಯೋಗ ತಿಳಿಸಿದೆ. ಹೀಗೆ ಗೊಂದಲದ ಗೂಡಾಗಿದ್ದ ಪಾಕಿಸ್ತಾನ ಸಂಸತ್ ಚುನಾವಣೆಗೆ ಅಂತಿಮ ರೂಪ ಸಿಕ್ಕಿದೆ. ಅದ್ರಲ್ಲೂ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿರುವ ವೇಳೆ ಮಹತ್ವದ ಸುದ್ದಿ ಹೊರಬಿದ್ದಿದೆ.

ಪಾಕಿಸ್ತಾನ ಲೋಕಸಭೆ ಒಟ್ಟು ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲೂ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ ಆಗಸ್ಟ್ 9ಕ್ಕೆ ಪಾಕಿಸ್ತಾನದ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಹೀಗಾಗಿ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲಾಗಿತ್ತು. ಈಗ ಚುನಾವಣೆಗೆ ಡೇಟ್ ಫೈನಲ್ ಆಗಿದ್ದು, 2024ರ ಜನವರಿ ಕೊನೆಯ ವಾರದಲ್ಲಿ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ನವಾಜ್ ಷರೀಫ್ ಪಾಕ್‌ಗೆ ವಾಪಸ್
ಪನಾಮಾ ಪೇಪರ್ಸ್ ಪ್ರಕರಣದಲ್ಲಿ ದೇಶ ಬಿಟ್ಟು ಹೋಗಿದ್ದ ಪಾಕಿಸ್ತಾನ ಮಾಜಿ ಪಿಎಂ ನವಾಜ್ ಷರೀಫ್ ವಾಪಸ್ ಪಾಕಿಸ್ತಾನಕ್ಕೆ ಬರ್ತಿದ್ದಾರೆ. ಲಂಡನ್‌ನಲ್ಲಿ ಇರುವ ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್ ಅಕ್ಟೋಬರ್ 21ರಂದು ಸ್ವದೇಶಕ್ಕೆ ಮರಳಲಿದ್ದಾರೆ. ಹೀಗೆ ನವಾಜ್ ಷರೀಫ್‌ಗೆ ಗ್ರ್ಯಾಂಡ್ ವೆಲ್‌ಕಂ ಹೇಳಿ, ಬರಮಾಡಿಕೊಳ್ಳಲು ವೇದಿಕೆ ಕೂಡ ಸಿದ್ಧವಾಗಿದೆ. ಈ ಮೂಲಕ ಇಮ್ರಾನ್ ಖಾನ್ ಶತ್ರು ನವಾಜ್ ಪಾಕಿಸ್ತಾನಕ್ಕೆ ಚುನಾವಣೆಯ ಸಮಯದಲ್ಲೇ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಪಾಕಿಸ್ತಾನ ಚುನಾವಣೆ ನಡೆಯುವ ಒಳಗಾಗಿ ಇಮ್ರಾನ್ ಖಾನ್ ಜೈಲಿಂದ ಹೊರಗೆ ಬರ್ತಾರಾ? ಅಂತಾ ಕಾದು ನೋಡಬೇಕಿದೆ.












Click it and Unblock the Notifications