Pakistan Bomb Blast: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ, 20 ಜನರ ಸಾವು, 30 ಜನರಿಗೆ ಗಾಯ
ಇಸ್ಲಾಮಾಬಾದ್ ನವೆಂಬರ್ 9: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಟೋಟಗೊಂಡು 20 ಜನರು ಸಾವನ್ನಪ್ಪಿದ್ದು 30 ಜನರಿಗೆ ಗಾಯವಾಗಿದೆ. ಈ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ರೈಲು ಪ್ಲಾಟ್‌ಫಾರ್ಮ್ ತಲುಪುವ ಮುನ್ನವೇ ರೈಲ್ವೆ ನಿಲ್ದಾಣದ ಬುಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ.
ಬೆಳಿಗ್ಗೆ 9 ಗಂಟೆಗೆ ಪೇಶಾವರಕ್ಕೆ ಹೊರಡಲಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲು ನಿಲ್ದಾಣ ತಲುಪುವ ಮುನ್ನ ಬಾಂಬ್ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಸ್ಫೋಟ ಸಂಭವಿಸಿದಾಗ ರೈಲು ಇನ್ನೂ ಪ್ಲಾಟ್‌ಫಾರ್ಮ್‌ಗೆ ಬಂದಿರಲಿಲ್ಲ. ಆದರೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ದೇಹಗಳು ಬಾಂಬ್ ಸ್ಪೋಟದ ತೀವ್ರತೆಗೆ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಪೋಟತೆ ತೀವ್ರವಾಗಿದ್ದರಿಂದ ಸ್ಥಳದಲ್ಲೇ ಹಲವರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಲ್ದಾಣದಲ್ಲಿ ಸದಾ ಜನಸಂದಣಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಹಾನಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿ ಮಾಡಿವೆ. ಈ ಘಟನೆಯಿಂದಾಗಿ ಇಡೀ ಪಾಕಿಸ್ತಾನವೇ ಬೆಚ್ಚಿಬಿದ್ದಿದೆ. ರೈಲು ನಿಲ್ದಾಣದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆದಿದೆ.
ಘಟನೆ ಖಂಡಿಸಿದ ಪಾಕಿಸ್ತಾನದ ಹಂಗಾಮಿ ಅಧ್ಯಕ್ಷ
ಈ ಬಾಂಬ್ ಸ್ಫೋಟದ ಘಟನೆಯನ್ನು ಪಾಕಿಸ್ತಾನದ ಹಂಗಾಮಿ ಅಧ್ಯಕ್ಷ ಸೈಯದ್ ಯೂಸುಫ್ ರಜಾ ಗಿಲಾನಿ ಖಂಡಿಸಿದ್ದಾರೆ. ಭಯೋತ್ಪಾದಕರು ಮಾನವೀಯತೆಯ ಶತ್ರುಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಅಮಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಹೀಗಾಗಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಸೈಯದ್ ಯೂಸುಫ್ ರಜಾ ಗಿಲಾನಿ ಅವರು ನೀಡಿದ್ದಾರೆ.












Click it and Unblock the Notifications