Nobel Chemistry Prize Winners: ಘೋಷಣೆಗೂ ಮುಂಚೆ ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿ ವಿಜೇತರ ಹೆಸರು ಸೋರಿಕೆ- ಯಾರು ತಿಳಿಯಿರಿ
ಸ್ಟಾಕ್‌ಹೋಮ್, ಅಕ್ಟೋಬರ್ 04: ಈ ವರ್ಷದ ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿ ಪುರಸ್ಕೃತರ ಹೆಸರುಗಳು ಸೋರಿಕೆಯಾಗಿದೆ ಎಂದು ಬುಧವಾರ ಸ್ವೀಡಿಷ್ ಮಾಧ್ಯಮಗಳು ವರದಿ ಮಾಡಿವೆ. ಪ್ರಶಸ್ತಿ ಘೋಷಣೆಗೂ ಕೆಲ ಗಂಟೆಗಳ ಮುಂಚೆ ವಿಜೇತರನ್ನು ಹೆಸರು ಸೋರಿಕೆಯಾಗಿದೆ ಎಂದು ವರದಿಗಳು ಹೇಳಿದೆ. ಈ ಬೆಳವಣಿಗೆ ಜಗತ್ತಿನಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರುಗಳು ಸೋರಿಕೆಯಾಗುವುದು ಅಪರೂಪದ ಘಟನೆಯಾಗಿದೆ. ಬಹುಮಾನ ಅಥವಾ ಪ್ರಶಸ್ತಿ ನೀಡುವ ಅಕಾಡೆಮಿಗಳು ಪ್ರಕಟಣೆಗಳವರೆಗೆ ವಿಜೇತರ ಹೆಸರನ್ನು ಮುಚ್ಚಿಡಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತವೆ. ಆದರೆ, ನೊಬೆಲ್‌ನಂತಹ ಅಕಾಡೆಮಿಗಳು ಹೆಸರನ್ನು ಸೋರಿಕೆ ಮಾಡಿರುವುದು ಅಚ್ಚರಿ ತಂದಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ವರದಿಗಳ ಹಿಂದಿನ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.

ಸಾರ್ವಜನಿಕ ಪ್ರಸಾರ ಮಾಧ್ಯಮಗಳಾದ ಸ್ವೀಡಿಷ್ ಟೆಲಿವಿಷನ್ ಮತ್ತು ಸ್ವೀಡಿಷ್ ರೇಡಿಯೋಗಳು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನಿಂದ ಪತ್ರಿಕಾ ಪ್ರಕಟಣೆಯನ್ನು ಸ್ವೀಕರಿಸಿರುವುದಾಗಿ ವರದಿ ಮಾಡಿವೆ. ಇದರಲ್ಲಿ ಯುಎಸ್ ಮೂಲದ ಮೂವರು ರಸಾಯನಶಾಸ್ತ್ರಜ್ಞರನ್ನು ಹೆಸರಿಸಲಾಗಿದೆ ಎಂದು ಅವು ಹೇಳಿವೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನೊಬೆಲ್ ಅಕಾಡೆಮಿಯ ಪತ್ರಿಕಾ ವಕ್ತಾರ ಇವಾ ನೆವೆಲಿಯಸ್, 'ಏನಾಯಿತು ಎಂದು ನಮಗೆ ತಿಳಿಯುವವರೆಗೂ ನಾವು ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ನಾವು ಅದನ್ನು ಪರಿಶೀಲಿಸಬೇಕಾಗಿದೆ' ಎಂದು ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.
ಸ್ವೀಡಿಷ್ ವರದಿಗಳ ಪ್ರಕಾರ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೌಂಗಿ ಬವೆಂಡಿ, ಕೊಲಂಬಿಯಾ ವಿಶ್ವವಿದ್ಯಾಲಯದ ಲೂಯಿಸ್ ಬ್ರೂಸ್ ಮತ್ತು ನ್ಯಾನೊಕ್ರಿಸ್ಟಲ್ಸ್ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲೆಕ್ಸಿ ಎಕಿಮೊವ್ ನೊಬೆಲ್ ಪ್ರಶಸ್ತಿಯ ವಿಜೇತರಾಗಿದ್ದಾರೆ.
ವರದಿಗಳ ಪ್ರಕಾರ, ಈ ಮೂವರು ರಸಾಯನಶಾಸ್ತ್ರಜ್ಞರು 'ಕ್ವಾಂಟಮ್ ಡಾಟ್‌ಗಳ ಅನ್ವೇಷಣೆ ಮತ್ತು ಸಂಶ್ಲೇಷಣೆ'ಗಾಗಿ ಬಹುಮಾನವನ್ನು ಗೆದ್ದಿದ್ದಾರೆ.
ಪತ್ರಿಕಾ ಪ್ರಕಟಣೆ ಅಕಾಡೆಮಿಯ ವೆಬ್ ಪುಟದಲ್ಲಿ ಕಾಣುತ್ತಿಲ್ಲ ಎಂದು ಮಾಧ್ಯಮಗಳು ಹೇಳಿವೆ.
ಅಕಾಡೆಮಿಯು ಬೆಳಿಗ್ಗೆ 11:45 ಕ್ಕೆ ತನ್ನ ಘೋಷಣೆಯನ್ನು ಮಾಡಬೇಕು. ವಿಜೇತರನ್ನು ಆಯ್ಕೆ ಮಾಡಲು ಸಭೆ ಮತ್ತು ಮತ ಚಲಾವಣೆ ನಡೆಸಿದ ನಿಮಿಷಗಳ ನಂತರ ಹೆಸರುಗಳನ್ನು ಘೋಷಿಸುವುದು ರೂಢಿಯಾಗಿದೆ.
ಅಕಾಡೆಮಿಯ ನೊಬೆಲ್ ರಸಾಯನಶಾಸ್ತ್ರ ಸಮಿತಿಯ ತಜ್ಞ ಹೈನರ್ ಲಿಂಕ್, ಸೋರಿಕೆಯಂತಹ ಬೆಳವಣಿಗೆ ಕುರಿತು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.
'ಇದೀಗ ನಾನು ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾವು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಹಾಗಾಗಿ ಪತ್ರಿಕಾ ಪ್ರಕಟಣೆ ಹೊರಬಿದ್ದಿದ್ದರೆ ಅದು ಖಂಡಿತವಾಗಿಯೂ ತಪ್ಪು' ಎಂದು ಲಿಂಕೆ ಹೇಳಿದ್ದಾರೆ.












Click it and Unblock the Notifications