ನೇಪಾಳದಲ್ಲಿ ಯೇತಿ ಏರ್‌ಲೈನ್ಸ್ ಪತನಗೊಂಡು 72 ಸಾವುಗಳಾಗಲು ಇಂಜಿನ್ ಸಮಸ್ಯೆ ಕಾರಣ: ವರದಿ
ಐವರು ಭಾರತೀಯರು ಸೇರಿದಂತೆ 72 ಮಂದಿಯನ್ನು ಬಲಿ ಪಡೆದ ನೇಪಾಳದಲ್ಲಿ ಯೇತಿ ಏರ್‌ಲೈನ್ಸ್ ಪತನಕ್ಕೆ ಕಾರಣವೇನು ಗೊತ್ತೆ...ಮುಂದೆ ಓದಿ.
ಕಠ್ಮಂಡು, ಫೆಬ್ರವರಿ 6: ಕಳೆದ ತಿಂಗಳು ನೇಪಾಳದಲ್ಲಿ ಯೇತಿ ಏರ್‌ಲೈನ್ಸ್ ವಿಮಾನ ಪತನಗೊಂಡು 72 ಮಂದಿ ಮೃತಪಟ್ಟಿದ್ದರು. ಈಗ ಪ್ರಕರಣದ ವರದಿ ಬಹಿರಂಗವಾಗಿದ್ದು, ಇಷ್ಟೊಂದು ಮಂದಿ ಮೃತಪಡಲು ವಿಮಾನದ ಇಂಜಿನ್ ಸಮಸ್ಯೆ ಕಾರಣ ಎನ್ನಲಾಗಿದೆ.
ವಿಮಾನದ ಅಂತಿಮ ಹಂತದಲ್ಲಿ ಅದರ ಎಂಜಿನ್‌ಗಳಲ್ಲಿ ಯಾವುದೇ ಥ್ರಸ್ಟ್ ಮೋಷನ್ ಇರಲಿಲ್ಲ ಎಂದು ಅಪಘಾತದ ತನಿಖೆಗಾಗಿ ಸರ್ಕಾರ ನೇಮಿಸಿದ ಸಮಿತಿ ಸೋಮವಾರ ತಿಳಿಸಿದೆ.
30 ವರ್ಷಗಳಲ್ಲಿಯೇ ನೇಪಾಳ ಕಂಡ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದಾದ ಯೇತಿ ಏರ್‌ಲೈನ್ಸ್ ಪತನ, ಜನವರಿ 15 ರಂದು ಪ್ರವಾಸಿ ನಗರವಾದ ಪೋಖ್ರಾದಲ್ಲಿ ಇಳಿಯುವ ಮೊದಲು ಪತನಗೊಂಡಿತು. ವಿಮಾನದಲ್ಲಿದ್ದ ಎಲ್ಲಾ 72 ಪ್ರಯಾಣಿಕರು ಬಲಿಯಾಗಿದ್ದರು.

ನೇಪಾಳದ ಯೇತಿ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಅವಳಿ ಎಂಜಿನ್ ಎಟಿಆರ್ 72 ವಿಮಾನದಲ್ಲಿ ಇಬ್ಬರು ಮಕ್ಕಳು, ನಾಲ್ವರು ಸಿಬ್ಬಂದಿ ಮತ್ತು 10 ವಿದೇಶಿ ಪ್ರಜೆಗಳು ಸೇರಿದಂತೆ 72 ಪ್ರಯಾಣಿಕರಿದ್ದರು. ಇದರಲ್ಲಿ ಐದು ಮಂದಿ ಭಾರತೀಯರಾಗಿದ್ದರು.
ಒಟ್ಟು 53 ನೇಪಾಳಿಗಳು, 5 ಮಂದಿ ಭಾರತೀಯರು, 4 ಮಂದಿ ರಷ್ಯನ್ನರು, ಒಬ್ಬ ಐರಿಶ್, ಇಬ್ಬರು ಕೊರಿಯನ್ನರು, ಒರ್ವ ಅರ್ಜೆಂಟೀನಾದ ಪ್ರಜೆ ಮತ್ತು ಒಬ್ಬ ಫ್ರೆಂಚ್ ಪ್ರಜೆ ವಿಮಾನದಲ್ಲಿದ್ದರು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿತ್ತು.
ಈ ಯೇತಿ ಏರ್‌ಲೈನ್ಸ್ ATR-72 ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಅನ್ನು ತನಿಖಾ ಸಮಿತಿಯು ಪತ್ತೆಹಚ್ಚಿದೆ. ಇದರಲ್ಲಿ ಎಂಜಿನ್‌ನಲ್ಲಿ ಸಮಸ್ಯೆ ಇತ್ತು ಎಂಬುದು ಬಹಿರಂಗವಾಗಿದೆ.

ಪೋಖ್ರಾದಲ್ಲಿ ಇಳಿಯಬೇಕಿದ್ದ ವಿಮಾನ ಕೆಲವೇ ನಿಮಿಷಗಳಲ್ಲಿ ಸ್ಫೋಟವಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು.
ಘಟನೆಯ ಬಗ್ಗೆ ತನಿಖೆ ನಡೆಸಲು ಸರ್ಕಾರ ಐವರು ಸದಸ್ಯರ ತನಿಖಾ ಆಯೋಗವನ್ನು ರಚಿಸಿತ್ತು. ಯೇತಿ ಏರ್‌ಲೈನ್ಸ್ ವಿಮಾನದ ಬ್ಲಾಕ್ ಬಾಕ್ಸ್‌ಅನ್ನು (ವಿಮಾನ ಡೇಟಾ ರೆಕಾರ್ಡರ್) ನೇಪಾಳ ಸೇನೆಯು ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು. ಇದರಿಂದಲೇ ಇಂಜಿನ್ ಸಮಸ್ಯೆ ಬಗ್ಗೆ ಮಾಹಿತಿ ದೊರೆತಿದೆ.












Click it and Unblock the Notifications