ಚುನಾವಣೆ ಗೆದ್ದ ರಿಷಿ, ಮಾವ ಇನ್ಫಿ ಮೂರ್ತಿ ಖುಷ್!
ಲಂಡನ್, ಮೇ.8: ಬ್ರಿಟನ್ನಿನ ಸಾರ್ವತ್ರಿಕ ಚುನಾವಣೆ ಫಲಿತಾಂಶ ವಿಶ್ವದ ಗಮನ ಸೆಳೆಯುತ್ತಿದೆ. ಕನ್ಸರ್ವೇಟಿವ್ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮುನ್ಸೂಚನೆ ಕಂಡು ಬಂದಿದೆ. ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಅವರು ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ರಿಚ್ಮಂಡ್ ನ್ಯೂ ಯಾರ್ಕ್ ಷೈರ್ ಕ್ಷೇತ್ರದಿಂದ ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ರಿಷಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಯುಕೆ ಸ್ವತಂತ್ರ ಪಕ್ಷದ ಮ್ಯಾಥ್ಯೂ ಕುಕೆ ಅವರನ್ನು ಸೋಲಿಸಿದ್ದಾರೆ.
ರಿಷಿ ಅವರಿಗೆ 27,744 ಮತಗಳು(ಶೇ 51 ಮತ ಪಾಲು) ಬಂದಿದ್ದರೆ ಮ್ಯಾಥ್ಯೂ ಅವರಿಗೆ 8,194 ಮತಗಳು ಬಂದಿವೆ. ಲೇಬರ್ ಪಾರ್ಟಿಯ ಮೈಕ್ ಹಿಲ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದು 7,124 ಮತಗಳನ್ನು ಪಡೆದುಕೊಂಡಿದ್ದಾರೆ.
ಇನ್ಫಿ ಮೂರ್ತಿ ಹರ್ಷ: ಅಳಿಯ ರಿಷಿ ಅವರು ಬ್ರಿಟಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾಗಿರುವುದಕ್ಕೆ ಎನ್ ಆರ್ ನಾರಾಯಣ ಮೂರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಲಿಯಮ್ ಹೇಗ್ ಅವರ ಕ್ಷೇತ್ರದಿಂದ ರಿಷಿ ಜಯ ಗಳಿಸಿದ್ದನ್ನು ಕಂಡು 'big shoes to fill' ಎಂದು ಅಳಿಯನಿಗೆ ಕಳಿಸಿರುವ ಇಮೇಲ್ ನಲ್ಲಿ ಇನ್ಫಿ ಮೂರ್ತಿ ಹೇಳಿದ್ದಾರೆ. [ವಿಶ್ವದ ಪುರಾತನದ ಸಂಸತ್ತಿಗೆ 20 ವರ್ಷದ 'ಬೇಬಿ' ಎಂಟ್ರಿ!]

ಇಂಡೋ-ಬ್ರಿಟಿಷ್ ಉದ್ಯಮಿಯಾಗಿರುವ ರಿಷಿ ಅವರು ನಾರಾಯಣ ಮೂರ್ತಿ-ಸುಧಾ ಮೂರ್ತಿ ದಂಪತಿ ಪುತ್ರಿ ಅಕ್ಷತಾ ಅವರನ್ನು 2009ರಲ್ಲಿ ವರಿಸಿದರು. ದಂಪತಿಗೆ ಕೃಷ್ಣಾ ಹಾಗೂ ಅನೌಷ್ಕ ಎಂಬ ಇಬ್ಬರ ಪುತ್ರಿಯರಿದ್ದಾರೆ.
ಹಾಂಪ್ ಷೈರ್ ಮೂಲದ ರಿಷಿ ಅವರ ತಂದೆ ನ್ಯಾಷನಲ್ ಹೆಲ್ತ್ ಸರ್ವಿಸ್ ನ ವೈದ್ಯರಾಗಿದ್ದರೆ ತಾಯಿ ಕೆಮಿಸ್ಟ್ ಆಗಿದ್ದಾರೆ. ಆಕ್ಸ್ ಫರ್ಡ್ ಹಾಗೂ ಸ್ಟಾನ್ ಫೋರ್ಡ್ ನಲ್ಲಿ ವ್ಯಾಸಂಗ ಮಾಡಿರುವ ರಿಷಿ ಅವರು ಎನ್ನಾರೈಗಳ ಜನಪ್ರಿಯ ಗಳಿಸಿದ್ದಾರೆ.
One nation, one United Kingdom - that is how I hope to govern if I am fortunate enough to continue as Prime Minister.
— David Cameron (@David_Cameron) May 8, 2015 ಡೇವಿಡ್ ಕ್ಯಾಮರೂನ್ ಅವರ ಕನ್ಸರ್ವೇಟಿವ್ ಪಾರ್ಟಿಯಲ್ಲಿ ಒಟ್ಟಾರೆ 17ಕ್ಕೂ ಅಧಿಕ ಭಾರತೀಯ ಮೂಲದ ವ್ಯಕ್ತಿಗಳು ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಲೇಬರ್ ಪಾರ್ಟಿಯಿಂದ 14 ಮಂದಿ ಭಾರತೀಯ ಮೂಲದವರಿದ್ದಾರೆ. ಒಟ್ಟಾರೆ 7,00,000 ಮತಗಳು ಭಾರತೀಯ ಮೂಲದವರಿಂದ ಚಲಾಯಿಸಲ್ಪಟ್ಟಿದೆ.
ಇದೀಗ ಬಂದ ಸುದ್ದಿಯ ಪ್ರಕಾರ ಕನ್ಸರ್ವೇಟಿವ್ ಪಾರ್ಟಿ ಜಯಭೇರಿ ಬಾರಿಸಿದೆ. 326 ಮ್ಯಾಜಿಕ್ ನಂಬರ್ ದಾಟಿದ್ದು, ಇನ್ನೂ 8 ಕ್ಷೇತ್ರಗಳ ಫಲಿತಾಂಶ ಹೊರ ಬೀಳುವ ಮುನ್ನವೇ ಬಹುಮತದತ್ತ ಸಾಗಿದೆ.












Click it and Unblock the Notifications