ಶಾಸಕರು, ಸಂಸದರಿಗೂ ಉಗ್ರರ ಪಟ್ಟ..! ಅಯ್ಯಯ್ಯೋ ಇದೆಂಥ ಶಿಕ್ಷೆ?
ಸೇನಾ ದಂಗೆಯಲ್ಲಿ ಬೆಂದು ಧಗಧಗ ಹೊತ್ತಿ ಉರಿದಿರುವ ಮ್ಯಾನ್ಮಾರ್ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇಷ್ಟೆಲ್ಲದರ ನಡುವೆ ಮ್ಯಾನ್ಮಾರ್ ಸೇನಾ ಆಡಳಿತ, ಉಚ್ಛಾಟಿತ ಶಾಸಕರು ಹಾಗೂ ರಾಜಕೀಯ ನಾಯಕರಿಗೆ ಶಾಕ್ ಕೊಟ್ಟಿದೆ. ಸೇನೆ ವಿರುದ್ಧ ತಿರುಗಿಬಿದ್ದಿದ್ದ ಜನಪ್ರತಿನಿಧಿಗಳನ್ನು ಭಯೋತ್ಪಾದಕರು, ಬಂಡುಕೋರರೆಂದು ಮ್ಯಾನ್ಮಾರ್ ಸೇನಾಡಳಿತ ಆದೇಶ ನೀಡಿದೆ.
ಇದು ಈಗಾಗಲೇ ಕಂಬಿ ಎಣಿಸುತ್ತಿರುವ ನೂರಾರು ರಾಜಕೀಯ ನಾಯಕರಿಗೆ ಆಘಾತ ತಂದಿದೆ. ಇದಕ್ಕೂ ಮೊದಲು ಉಚ್ಛಾಟಿತ ನಾಯಕರನ್ನು ದೇಶದ್ರೋಹಿಗಳೆಂದು ಸೇನೆ ಆರೋಪ ಮಾಡಿತ್ತು. ಆದರೆ ಇದೀಗ ದಿಢೀರ್ ಅವರನ್ನೆಲ್ಲಾ 'ಭಯೋತ್ಪಾದಕರು' ಎಂದಿದೆ.
ಇದಿಷ್ಟೇ ಅಲ್ಲದೆ 'ಭಯೋತ್ಪಾದಕರು' ಎಂಬ ಘೋಷಣೆಯನ್ನು ಸರ್ಕಾರಿ ಟಿವಿಯಲ್ಲಿ ಪ್ರಸಾರ ಮಾಡಿ, ಮಿಲಿಟರಿಯ ವಿರುದ್ಧದ ಪ್ರಜೆಗಳ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಇವರನ್ನೆಲ್ಲಾ ಭಯೋತ್ಪಾದಕರು ಎಂದು ಕರೆಯುತ್ತೇವೆ ಎಂದಿದೆ ಮ್ಯಾನ್ಮಾರ್ ಸೇನೆ. ಈಗಾಗಲೇ 700ಕ್ಕೂ ಹೆಚ್ಚು ಹೋರಾಟಗಾರರು ಹತ್ಯೆಯಾಗಿದ್ದು, ಸಾವಿರಾರು ಪ್ರಜೆಗಳನ್ನು ಮ್ಯಾನ್ಮಾರ್ ಸೇನೆ ನಿರ್ದಯವಾಗಿ ಜೈಲಿಗೆ ತಳ್ಳಿದೆ. ಹಾಗೇ ಹಿಂಸೆ, ಪ್ರತಿಭಟನೆ ಪರಿಣಾಮ ಲೆಕ್ಕವಿಲ್ಲದಷ್ಟು ಜನ ಗಾಯಗೊಂಡಿದ್ದಾರೆ. ಆದರೆ ಇದ್ಯಾವುದಕ್ಕೂ ಮ್ಯಾನ್ಮಾರ್ ಸೇನಾಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.

ಗಲ್ಲಿಗೂ ನುಗ್ಗಿದೆ ಮ್ಯಾನ್ಮಾರ್ ಸೇನೆ..!
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್‌ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್‌ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನ ತೋರಿಸಿ ಜನರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.

ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್‌ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್‌ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.

ಪ್ರಜಾಪ್ರಭುತ್ವ ವಾದಿ ರಾಷ್ಟ್ರಗಳ ಕಳವಳ
ಮ್ಯಾನ್ಮಾರ್‌ನಲ್ಲಿ ಸೇನಾ ಹಿಂಸೆ ಎದುರಾದ ಬೆನ್ನಲ್ಲೇ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಹಠಾತ್ ಬೆಳವಣಿಗೆ ಬಗ್ಗೆ ಭಾರತ, ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಮತ್ತೊಂದ್ಕಡೆ ಸಂಪರ್ಕ ಸಾಧನಗಳನ್ನ ಬಂದ್ ಮಾಡಲಾಗಿದ್ದು, ವಾಕ್ ಸ್ವಾತಂತ್ರ್ಯಕ್ಕೆ ಮಿಲಿಟರಿ ಬ್ರೇಕ್ ಹಾಕಿದೆ. ಈ ಮೂಲಕ ಮ್ಯಾನ್ಮಾರ್‌ನ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದೆ ಸೇನೆ. ಜನರು ಅತ್ತಿತ್ತ ಓಡಾಡಲು ಕೂಡ ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಹಲವು ಹೋರಾಟಗಾರರು ಮ್ಯಾನ್ಮಾರ್ ಪ್ರಜೆಗಳಿಗೆ ಬೆಂಬಲ

3ನೇ ಮಹಾಯುದ್ಧಕ್ಕೆ ರಣಕಹಳೆ..?
ಜಗತ್ತಿನಲ್ಲಿ ಕಮ್ಯುನಿಸ್ಟ್ ರಾಷ್ಟ್ರಗಳಿಗೂ, ಅಮೆರಿಕದ ನಾಯಕರಿಗೂ ಜಿದ್ದು ಇದ್ದೇ ಇದೆ. ಅದರಲ್ಲೂ ಮಿಲಿಟರಿ ಆಡಳಿತ ಶುರುವಾಯಿತು ಅಂದರೆ ಸಾಕು, ಅಮೆರಿಕ ಏನಾದರೂ ಒಂದು ಕ್ಯಾತೆ ತೆಗೆದು ಅಲ್ಲಿಗೆ ನುಗ್ಗಿಬಿಡುತ್ತೆ ಎಂಬ ಆರೋಪ ಇದೆ. ಹೀಗೆ ಮ್ಯಾನ್ಮಾರ್ ಮೇಲೂ ಅಮೆರಿಕ ಸೇನೆ ದಾಳಿ ನಡೆಸುವ ಮಾತುಗಳನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಅಕಸ್ಮಾತ್ ಹೀಗೆ ದಾಳಿ ನಡೆದಿದ್ದೇ ಆದರೆ ಪರಿಸ್ಥಿತಿ ಭಯಾನಕವಾಗಲಿದೆ. ಮ್ಯಾನ್ಮಾರ್ ಪಕ್ಕದಲ್ಲೇ ಕೂತಿರುವ ಅಮೆರಿಕ ಪಾಲಿನ ಶತ್ರು ಚೀನಾ ತಿರುಗಿ ಬೀಳಬಹುದು. ಆಗ ಈ ಕೋಳಿ ಜಗಳ 3ನೇ ಮಹಾಯುದ್ಧಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಏಕೆಂದರೆ ಈ ಮೊದಲು ನಡೆದಿರುವ ಮಹಾಯುದ್ಧಗಳು ಕೂಡ ಕೋಳಿ ಜಗಳದ ರೀತಿಯೇ ಆರಂಭವಾಗಿದ್ದವು ಎನ್ನುವುದನ್ನು ನೆನಪಿಡಬೇಕು.












Click it and Unblock the Notifications