ಮ್ಯಾನ್ಮರ್, ಥೈಲ್ಯಾಂಡ್ ಭೂಕಂಪನದಲ್ಲಿ 1644ಕ್ಕೂ ಹೆಚ್ಚು ಜನ ಸಾವು- ಭಾರತದಿಂದ ಸಹಾಯ ಹಸ್ತ
ದೇಶದೆಲ್ಲೆಡೆ ಯುಗಾದಿ ಸಂಭ್ರಮ ಕಂಡುಬರುತ್ತಿದ್ದರೆ ಇತ್ತ ಮ್ಯಾನ್ಮರ್ ಹಾಗೂ ಥೈಲ್ಯಾಂಡ್‌ನಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮ್ಯಾನ್ಮಾರ್ ಮಿಲಿಟರಿ ಕೌನ್ಸಿಲ್ ಮಾಹಿತಿ ಪ್ರಕಾರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1644ಕ್ಕೆ ಏರಿಕೆಯಾಗಿದೆ.
ಅಲ್ಲದೆ ಭೂಕಂಪದಿಂದ ಗಾಯಗೊಂಡವರ ಸಂಖ್ಯೆ 3408ಕ್ಕೆ ಏರಿಕೆಯಾಗಿದ್ದು, 139 ಜನರು ಇನ್ನೂ ಕಾಣೆಯಾಗಿದ್ದಾರೆ. ಅಲ್ಲದೆ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ಅವರು ಸತ್ತವರು ಮತ್ತು ಗಾಯಗೊಂಡವರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದಾರೆ.

ಹೌದು ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ನೋಡ ನೋಡುತ್ತಿದ್ದಂತೆ ಬೃಹತ್ ಕಟ್ಟಡಗಳು ನೆಲಕ್ಕಚ್ಚಿವೆ. ಇಲ್ಲಿ ಒಂದು ಮನೆ ಅಥವಾ ಕಟ್ಟಡ ಇರುವ ಅನುಮಾನ ಮೂಡುವಂತೆ ಆಕಾಶದೆತ್ತರದ ಕಟ್ಟಡಗಳು ಉರುಳಿ ಬಿದ್ದಿವೆ. ಭೂಕಂಪದ ತೀವ್ರತೆಗೆ (7.7) ನೂರಾರು ಜನ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಅಲ್ಲದೆ ಭೂಕಂಪದ ಕೇಂದ್ರಬಿಂದುವಿಗೆ ಅತ್ಯಂತ ಸಮೀಪದಲ್ಲಿರುವ ಮಂಡಲೆಯಲ್ಲಿಯೇ 694ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ರಾಜಧಾನಿ ನೇಪಿಡಾದಲ್ಲಿ 94 ಜನರು ಅಸು ನೀಗಿದ್ದಾರೆ.
ಭೂಕಂಪಕ್ಕೆ ಬ್ಯಾಂಕಾಕ್ ತತ್ತರ
ಈ ಭೂಕಂಪದ ಕಂಪನವು ನೆರೆಯ ದೇಶವಾದ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನವರೆಗೂ ಅನುಭವಕ್ಕೆ ಬಂದಿತು. ಇಲ್ಲಿನ ಭೂಕಂಪನದ ತೀವ್ರತೆ 7.7 ರಷ್ಟಿತ್ತು. ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 6 ಜನರು ಸಾವನ್ನಪ್ಪಿದ್ದು, 100 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ನೂರಾರು ಮೈಲುಗಳಷ್ಟು ದೂರದಲ್ಲಿ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಕಟ್ಟಡ ಭೂಕಂಪದಿಂದಾಗಿ ಕುಸಿದು ಬಿದ್ದಿದೆ. ಇನ್ನೂ ಅನೇಕ ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ. ಅಲ್ಲಿನ ಅನೇಕರನ್ನು ಸ್ಥಳಾಂತರಿಸಲಾಗಿದೆ.

ಮ್ಯಾನ್ಮಾರ್‌ನಲ್ಲಿ ಎರಡನೇ ಕಂಪನ
ಅಲ್ಲದೆ ಮೊದಲ ಭೂಕಂಪ ಸಂಭವಿಸಿದ ಕೇವಲ 12 ನಿಮಿಷಗಳ ನಂತರ ಮ್ಯಾನ್ಮಾರ್‌ನಲ್ಲಿ ಎರಡನೇ ಕಂಪನ ಸಂಭವಿಸಿದೆ. ಎರಡನೇ ಭೂಕಂಪದ ತೀವ್ರತೆ 6.4 ಆಗಿತ್ತು. ಈ ಭೂಕಂಪದ ಕೇಂದ್ರಬಿಂದು ಸಾಗಿಂಗ್‌ನಿಂದ ದಕ್ಷಿಣಕ್ಕೆ 18 ಕಿಲೋಮೀಟರ್ ದೂರದಲ್ಲಿತ್ತು.
ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೇಯಲ್ಲಿ ರಕ್ಷಣಾ ಕಾರ್ಯಕರ್ತರೊಬ್ಬರು ಬಿಬಿಸಿಗೆ ನೀಡಿದ ಮಾಹಿತಿಯ ಪ್ರಕಾರ, ಭೂಕಂಪವು ಭಾರಿ ವಿನಾಶವನ್ನುಂಟುಮಾಡಿದೆ ಮತ್ತು ನೂರಾರು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಮ್ಯಾನ್ಮಾರ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಮೋದಿ ಸಂತಾಪ
ಭೂಕಂಪನದ ನಂತರ ಮ್ಯಾನ್ಮಾರ್‌ನ ಹೆಚ್ಚಿನ ಭಾಗದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮ್ಯಾನ್ಮಾರ್‌ನ ಹಿರಿಯ ಜನರಲ್ ಮತ್ತು ಮಿಲಿಟರಿ ಆಡಳಿತಗಾರ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತನಾಡಿದರು.
ಈ ಮಾಹಿತಿಯನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, "ಮ್ಯಾನ್ಮಾರ್‌ನ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತನಾಡಿದೆ. ವಿನಾಶಕಾರಿ ಭೂಕಂಪದಲ್ಲಿ ಸಂಭವಿಸಿದ ಜೀವಹಾನಿಗೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸಿದ್ದೇನೆ. ಆಪ್ತ ಸ್ನೇಹಿತ ಮತ್ತು ನೆರೆಯವನಾಗಿ ಭಾರತವು ಈ ಕಷ್ಟದ ಸಮಯದಲ್ಲಿ ಮ್ಯಾನ್ಮಾರ್ ಜನರೊಂದಿಗೆ ನಿಂತಿದೆ" ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮ್ಯಾನ್ಮಾರ್‌ಗೆ ಸಹಾಯ ಮಾಡಲು ಭಾರತ ಆರಂಭಿಸಿರುವ ಆಪರೇಷನ್ ಬ್ರಹ್ಮ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸೇರಿಸುತ್ತಾ ಪ್ರಧಾನಿ ಮೋದಿ, "ವಿಪತ್ತು ಪರಿಹಾರ ಸಾಮಗ್ರಿಗಳು, ಮಾನವೀಯ ನೆರವು, ಶೋಧ ಮತ್ತು ರಕ್ಷಣಾ ತಂಡಗಳನ್ನು ಯಾವುದೇ ವಿಳಂಬವಿಲ್ಲದೆ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ" ಎಂದು ಬರೆದಿದ್ದಾರೆ.
ಭಾರತದಿಂದ ಸಹಾಯ ಹಸ್ತ
ಮ್ಯಾನ್ಮಾರ್‌ನಲ್ಲಿ ಭೂಕಂಪದ ನಂತರ, ಭಾರತವು 'ಆಪರೇಷನ್ ಬ್ರಹ್ಮ' ಅಡಿಯಲ್ಲಿ ಅಲ್ಲಿಗೆ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸುತ್ತಿದೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪ್ರಕಾರ, 118 ಸದಸ್ಯರ ಭಾರತೀಯ ಸೇನಾ ಕ್ಷೇತ್ರ ಆಸ್ಪತ್ರೆ ಘಟಕವು ಶನಿವಾರ ಆಗ್ರಾದಿಂದ ಮಂಡಲೆಗೆ ತೆರಳಿದೆ. ಈ ತಂಡವು ಮ್ಯಾನ್ಮಾರ್ ಜನರಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಭಾರತೀಯ ನೌಕಾಪಡೆಯ ಹಡಗುಗಳಾದ ಐಎನ್‌ಎಸ್ ಸತ್ಪುರ ಮತ್ತು ಐಎನ್‌ಎಸ್ ಸಾವಿತ್ರಿ ಮೂಲಕ 40 ಟನ್ ಮಾನವೀಯ ನೆರವು ಕಳುಹಿಸಲಾಗಿದೆ. ಶನಿವಾರ ಭಾರತದಿಂದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ನ 80 ಸದಸ್ಯರ ತಂಡವು ಮ್ಯಾನ್ಮಾರ್‌ನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಮ್ಯಾನ್ಮಾರ್‌ಗೆ ತೆರಳಿದೆ. ಇದಲ್ಲದೆ ಭಾರತೀಯ ವಾಯುಪಡೆಯ ಸಿ -130 ವಿಮಾನದ ಮೂಲಕ ಕಂಬಳಿಗಳು, ಟಾರ್ಪಲ್‌ಗಳು, ನೈರ್ಮಲ್ಯ ಕಿಟ್‌ಗಳು, ಮಲಗುವ ಹಾಸಿಗೆ, ಸೌರ ದೀಪಗಳು, ಆಹಾರ ಪ್ಯಾಕೆಟ್‌ಗಳು ಮತ್ತು ಅಡುಗೆಮನೆ ಸೆಟ್‌ಗಳನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗಿದೆ ಎಂದಿದ್ದಾರೆ.












Click it and Unblock the Notifications