ಬೈರುತ್ ಸ್ಫೋಟ: 113 ಮಂದಿ ಸಾವು, ಅದೆಷ್ಟೋ ಮಂದಿ ಪತ್ತೆಯಿಲ್ಲ!
ಬೈರುತ್, ಆಗಸ್ಟ್.05: ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಗಂಟೆಯಿಂದ ಗಂಟೆಗೆ ಹೆಚ್ಚಾಗುತ್ತಿದೆ. ಈವರೆಗೂ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
Recommended Video
ಬೈರುತ್ ನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ 113 ಮಂದಿ ಸಾವನ್ನಪ್ಪಿದ್ದು, ಅದೆಷ್ಟೋ ಜನರು ನಾಪತ್ತೆಯಾಗಿದ್ದಾರೆ ಎಂದು ಆರೋಗ್ಯ ಸಚಿವ ಹಮದ್ ಹಸನ್ ಮಾಹಿತಿ ನೀಡಿದ್ದಾರೆ. 4000ಕ್ಕೂ ಅಧಿಕ ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಭೀಕರ ಸ್ಫೋಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟ ಸಂಭವಿಸಿದ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಕಟ್ಟಡಗಳಿಗೆ ಹಾನಿಯಾಗಿದ್ದು, ಸ್ಥಳದಲ್ಲಿ ಅವಶೇಷಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಬೈರುತ್ ಸ್ಫೋಟ ಹಿಂದಿನ ಕಾರಣವೇನು:
ಪ್ರಾಥಮಿಕ ವರದಿ ಪ್ರಕಾರ ಬೈರುತ್ ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಕಾರಣ ಅಂತಾ ಲೆಬನಾನ್ ಸರ್ಕಾರ ತಿಳಿಸಿದೆ. ಬೈರುತ್ ಬಂದರಿನಲ್ಲಿದ್ದ ಗೋದಾಮಿನಲ್ಲಿ ಸಂಗ್ರಹವಾಗಿದ್ದ 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟವಾದ ಹಿನ್ನೆಲ ಘಟನೆ ನಡೆದಿದೆ. 6 ವರ್ಷಗಳಿಂದ ಇಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಲೆಬನಾನ್ ಅಧ್ಯಕ್ಷ 2 ವಾರಗಳ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿ, ಘಟನೆಯ ಕುರಿತು ಪಾರದರ್ಶಕ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಆದರೆ ಸ್ಫೋಟದ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ. 2005ರಲ್ಲಿ ಹತ್ಯೆಯಾಗಿದ್ದ ಲೆಬನಾನ್ ಮಾಜಿ ಪ್ರಧಾನಿ ರಫಿಕ್ ಹರಿರಿ ಪ್ರಕರಣದ ಕುರಿತಾದ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಬೇಕಿದೆ. ಈ ಹೊತ್ತಲ್ಲೇ ಭಯಾನಕ ಸ್ಫೋಟ ಸಂಭವಿಸಿದೆ.












Click it and Unblock the Notifications