ಬಾಂಬ್ ಪತ್ತೆ ದಳದಿಂದ ‘ಇಲಿ’ ನಿವೃತ್ತಿ! ಸಾವಿರಾರು ಜೀವ ಉಳಿಸಿದ್ದ ‘ಮೂಷಿಕ’ ರಿಟೈರ್..!
ಇಲಿಗಳು ಹೆಚ್ಚೆಚ್ಚು ಎಂದರೆ ಏನು ಮಾಡಬಹುದು ಹೇಳಿ? ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಕದ್ದು ಬಂದು, ಬಾಯಿಗೆ ಸಿಕ್ಕಿದ್ದನ್ನೆಲ್ಲಾ ಚಪ್ಪರಿಸಿ ಎಸ್ಕೇಪ್ ಆಗಬಹುದು. ಅದನ್ನು ಬಿಟ್ಟರೆ ಸಾಂಕ್ರಾಮಿಕ ರೋಗಗಳನ್ನ ಹರಡಿ ಸಾವಿರಾರು ಜನರ ಜೀವ ತೆಗೆಯಬಹುದು. ಆದರೆ ಇಲ್ಲೊಂದು ಇಲಿ ಇದೆ, ಈ ಇಲಿ ಎಲ್ಲಾ ಇಲಿಗಳಂತಲ್ಲ. ತನ್ನ ಅಸಾಧಾರಣ ಬುದ್ಧಿ ಶಕ್ತಿಯಿಂದ ಸಾವಿರಾರು ಜೀವ ಉಳಿಸಿದೆ, ಹಾಗೇ ಸಾವಿರಾರು ಜನ ಅಂಗವೈಕಲ್ಯಕ್ಕೆ ತುತ್ತಾಗುವುದನ್ನೂ ತಪ್ಪಿಸಿದ್ದಾನೆ ಈ ಮೂಷಿಕ.
ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಯಾಕೆ ಅಂದ್ರೆ ಹೀರೋ ಒಬ್ಬನನ್ನ ಸುಮ್ಮನೆ ಇಂಟ್ರಡ್ಯೂಸ್ ಮಾಡಿದ್ರೆ ಚೆನ್ನಾಗಿರತ್ತಾ ಹೇಳಿ? ಇಲ್ಲ ತಾನೇ? ಇದೇ ಕಾರಣಕ್ಕೆ ಒಂದಷ್ಟು ಬಿಲ್ಡಪ್ ಕೊಡಬೇಕಾಯ್ತು ಈ ಇಲಿಯ ಬಗ್ಗೆ. ಅಂದಹಾಗೆ ನಾವು ಹೇಳ್ತಾ ಇರೋದು ಕಾಂಬೋಡಿಯದಲ್ಲಿ ನೂರಾರು ಲ್ಯಾಂಡ್ ಮೈನ್ ಹುಡುಕಿ, ನಾಶ ಮಾಡಲು ಸಹಕರಿಸಿದ ಇಲಿ ಬಗ್ಗೆ.
ಗರೂ ನಾಡಲ್ಲಿ ಇಲಿಗಳ ಅಬ್ಬರ..! ಭಾರತದ ಬಳಿ ವಿಷಕ್ಕಾಗಿ ಆಸ್ಟ್ರೇಲಿಯಾ ಬೇಡಿಕೆ..!
'ಮಗಾವಾ' ಎಂಬ ಮುದ್ದಾದ ಹೆಸರನ್ನು ಪಡೆದಿರುವ ಈ ಮೂಷಿಕ 5 ವರ್ಷಗಳ ತನ್ನ ಸೇವಾ ಅವಧಿಯಲ್ಲಿ ಬರೋಬ್ಬರಿ 71 ಲ್ಯಾಂಡ್ ಮೈನ್ಸ್ ಅಂದ್ರೆ ನೆಲದ ಅಡಿಯಲ್ಲಿ ಹೂತಿಡುವ ಬಾಂಬ್‌ಗಳು ಹಾಗೂ 38 ಸ್ಫೋಟಕಗಳನ್ನು ಪತ್ತೆ ಮಾಡಿದೆ. ಹೀಗೆ ಸ್ಫೋಟಕ ಪತ್ತೆ ಮಾಡಿ ಅವುಗಳನ್ನ ನಾಶಪಡಿಸಲು ಸಹಾಯ ಮಾಡಿರುವ ಹೀರೋ ಇಲಿ ಇದೀಗ ನಿವೃತ್ತಿ ಪಡೆಯುತ್ತಿದೆ.
ಬಾರ್ನ್ ಇನ್ ತಾಂಜೇನಿಯಾ..!
ಲ್ಯಾಂಡ್ ಮೈನ್ಸ್ ಹುಡುಕಿ, ಸಾವಿರಾರು ಜನರ ಜೀವ ಕಾಪಾಡಿರುವ ಇಲಿ ಜನ್ಮತಾಳಿದ್ದು ತಾಂಜೇನಿಯಾದಲ್ಲಿ. ನಂತರ ಇಲಿಗೆ ಸಂಸ್ಥೆಯೊಂದು ತರಬೇತಿ ನೀಡಿ, ಬಾಂಬ್ ಪತ್ತೆ ದಳಕ್ಕೆ ಸೇರಿಸಿತ್ತು. 2014ರಲ್ಲಿ ಹುಟ್ಟಿದ್ದ ಇಲಿ 2016ರಲ್ಲಿ ಕಾಂಬೋಡಿಯ ಕಡೆಗೆ ಪ್ರಯಾಣ ಆರಂಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಮೂಷಿಕನ ಸಾಧನೆ ನೂರಾರು. ಅಲ್ಲದೆ ಹಲವು ಅವಾರ್ಡ್‌ಗಳನ್ನ ಕೂಡ ಇಲಿ ಪಡೆದಿದೆ. ನೂರಾರು ಜನ ಮಾಡುವ ಕೆಲಸವನ್ನು ಇದೊಂದೇ ಇಲಿ ಮಾಡಿ ತೋರಿಸುತ್ತಿದೆ. ಹೀಗಾಗಿಯೇ ಹೀರೋ ಪಟ್ಟ ಗಿಟ್ಟಿಸಿಕೊಂಡಿದೆ ಈ ಇಲಿ.
ಕಾಂಬೋಡಿಯ ಬಾಂಬ್ ಕಥೆ..!
ಕಾಂಬೋಡಿಯದಲ್ಲಿ ಲ್ಯಾಂಡ್ ಮೈನ್ಸ್ ಹೇಗೆ ಬಂದವು ಎಂಬುದೇ ಒಂದು ದೊಡ್ಡ ಕಥೆ. 1980ರ ಆಸುಪಾಸು ಕಾಂಬೋಡಿಯ ಆಂತರಿಕ ಯುದ್ಧದಲ್ಲಿ ಮುಳುಗಿತ್ತು. ಆಗ ವಿವಿಧ ದೇಶದಿಂದ ಕಾಂಬೋಡಿಯ ಒಳಗೆ ಎಂಟ್ರಿ ಕೊಟ್ಟಿದ್ದ ಸಾವಿರಾರು ಲ್ಯಾಂಡ್ ಮೈನ್‌ಗಳನ್ನ ಹೂತು ಹಾಕಲಾಗಿದೆ. ಹೀಗೆ ಪ್ರತಿವರ್ಷ ನೂರಾರು ಮಂದಿ ಈ ಡೆಡ್ಲಿ ಲ್ಯಾಂಡ್ ಮೈನ್ಸ್ ಕಾರಣಕ್ಕೆ ಕಾಂಬೋಡಿಯದಲ್ಲಿ ಜೀವ ಕಳೆದುಕೊಂಡಿದ್ದಾರೆ. ಇದು ಬಿಡಿ, ಈಗಾಗಲೇ 40 ಸಾವಿರಕ್ಕೂ ಹೆಚ್ಚು ಮಂದಿ ಈ ಲ್ಯಾಂಡ್ ಮೈನ್ಸ್ ಸ್ಫೋಟದ ಕಾರಣಕ್ಕೆ ಕೈ, ಕಾಲು ಕಳೆದುಕೊಂಡಿದ್ದಾರೆ.

46 ಫುಟ್‌ಬಾಲ್ ಸ್ಟೇಡಿಯಂ..!
'ಮಗಾವಾ' ಹೆಸರಿನ ಇಲಿ ಈವರೆಗೂ ಲ್ಯಾಂಡ್ ಮೈನ್ಸ್ ಹೊರತೆಗೆಯಲು ಹುಡುಕಿರುವುದು ಸುಮಾರು 46 ಫುಟ್‌ಬಾಲ್ ಸ್ಟೇಡಿಯಂ ವಿಸ್ತಿರ್ಣದಷ್ಟು ಪ್ರದೇಶವನ್ನ. 5 ವರ್ಷದ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿರುವ ಇಲಿರಾಯ ಈಗಲೂ ಸಖತ್ ಆಕ್ಟಿವ್. ಆದರೆ ದಿನದಿಂದ ದಿನಕ್ಕೆ ಇಲಿಯ ಸಾಮರ್ಥ್ಯ ಕ್ಷೀಣಿಸುತ್ತಿದೆ. ಅಲ್ಲದೆ ಇಲಿ ಒಂದಷ್ಟು ಬಳಲಿರುವಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಇಲಿಗೆ ನಿವೃತ್ತಿ ನೀಡಲು ನಿರ್ಧರಿಸಿದ್ದೇವೆ ಎಂದು ಮೂಷಿಕನ ತರಬೇತುದಾರರು ಹೇಳಿದ್ದಾರೆ. ಇಲಿಯ ನಿವೃತ್ತಿ ಜೀವನಕ್ಕೆ ಐಷಾರಾಮಿ ವ್ಯವಸ್ಥೆ ಮಾಡಲಾಗಿದೆ.