Manipur Unrest: ಕೇಂದ್ರ ಸರ್ಕಾರಕ್ಕೆ ಪದಕಗಳನ್ನು ಒಪ್ಪಿಸಲು ಮುಂದಾದ ಮಣಿಪುರದ ಕ್ರೀಡಾಪಟುಗಳು- ಇಕ್ಕಟ್ಟಿನಲ್ಲಿ ಬಿಜೆಪಿ
ಇಂಫಾಲ, ಮೇ 31: ಕಳೆದ ಕೆಲ ದಿನಗಳಿಂದ ಮಣಿಪುರವು ಹೊತ್ತಿ ಉರಿಯುತ್ತಿದೆ. ಜನಾಂಗೀಯ ಗಲಭೆಯಲ್ಲಿ ನಲುಗುತ್ತಿರುವ ರಾಜ್ಯದಲ್ಲಿ ಹಿಂಸಾಚಾರ ಪ್ರಕರಣಗಳು ಮುಂದುವರಿಯುತ್ತಿವೆ. ಇಲ್ಲಿ ಶೀಘ್ರದಲ್ಲೇ ಶಾಂತಿಯನ್ನು ಮರುಸ್ಥಾಪಿಸದಿದ್ದರೆ ತಮ್ಮ ಪದಕಗಳು ಮತ್ತು ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಕ್ರೀಡಾಪಟುಗಳು ಪ್ರತಿಜ್ಞೆ ಮಾಡಿದ್ದಾರೆ.
ಮಂಗಳವಾರ ಇಂಫಾಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಿದ ಜ್ಞಾಪನಾ ಪತ್ರದಲ್ಲಿ ಅಥ್ಲೀಟ್‌ಗಳು ಹಿಂಸಾಚಾರದ ಹಿಂದಿರುವ ಉಗ್ರಗಾಮಿ ಗುಂಪುಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಒಲಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು, ವೇಟ್‌ಲಿಫ್ಟರ್ ಕುಂಜರಾಣಿ ದೇವಿ, ಭಾರತೀಯ ಮಹಿಳಾ ಫುಟ್‌ಬಾಲ್ ತಂಡದ ಮಾಜಿ ನಾಯಕಿ ಓನಮ್ ಬೆಮ್ ಬೆಮ್ ದೇವಿ, ಬಾಕ್ಸರ್ ಎಲ್. ಸರಿತಾ ದೇವಿ, ಒಲಿಂಪಿಯನ್ ಜುಡೋಕಾ ಲಿಕ್ಮಾಬಾಮ್ ಶುಶೀಲಾ ದೇವಿ ಸೇರಿದಂತೆ ಹಲವು ಪ್ರಮುಖ ಕ್ರೀಡಾಪಟುಗಳು ಈ ನಿರ್ಧಾರಕ್ಕೆ ಬರಲು ಮುಂದಾಗಿದ್ದಾರೆ.
ಉಗ್ರರ ವಿರುದ್ಧ ಕ್ರಮ
ಕುಕಿ ಉಗ್ರಗಾಮಿ ಗುಂಪುಗಳೊಂದಿಗಿನ ಕಾರ್ಯಾಚರಣೆಯ ಅಮಾನತು ಒಪ್ಪಂದವನ್ನು ಹಿಂಪಡೆಯಲು ಒತ್ತಾಯಿಸಿದ ಕ್ರೀಡಾಪಟುಗಳು, ಕೇಂದ್ರ ಭದ್ರತಾ ಪಡೆಗಳ ದೊಡ್ಡ ಗುಂಪುಗಳನ್ನು ನಿಯೋಜಿಸಿದ್ದರೂ ಸಹ ಈ ಸಂಘಟನೆಗಳು ಜನರನ್ನು ಕೊಲ್ಲುವ ಮತ್ತು ಮನೆಗಳನ್ನು ಸುಡುವ ಮೂಲಕ ಮಣಿಪುರದ ಸಮಗ್ರತೆಗೆ ಸವಾಲು ಹಾಕುತ್ತಿವೆ ಎಂದು ಹೇಳಿದ್ದಾರೆ.

ಒಪ್ಪಂದದ ಕಾರಣದಿಂದ ಕುಕಿ ಭಯೋತ್ಪಾದಕರು ಮುಗ್ಧ ನಾಗರಿಕರ ಮೇಲೆ ದಾಳಿ ಮಾಡುವುದನ್ನು ತಡೆಯಲು ಅರೆಸೈನಿಕ ಪಡೆಗಳು ಹಿಂಜರಿಯುತ್ತಿರಬಹುದು ಎಂದು ಅವರು ತಿಳಿಸಿದ್ದಾರೆ. ಮಣಿಪುರವನ್ನು ಇಬ್ಬಾಗಗೊಳಿಸುವ ಬೇಡಿಕೆಯನ್ನು ತಿರಸ್ಕರಿಸಬೇಕು. ಅಕ್ರಮ ವಲಸಿಗರನ್ನು ಆಯಾ ದೇಶಗಳಿಗೆ ಗಡೀಪಾರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮಣಿಪುರದಲ್ಲಿ ಶೀಘ್ರದಲ್ಲೇ ಶಾಂತಿಯನ್ನು ಮರುಸ್ಥಾಪಿಸಲು ಕೇಂದ್ರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಲ್ಲಿ ವಿಫಲವಾದರೆ ನಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಒಪ್ಪಿಸುತ್ತೇವೆ ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.

ಅಗತ್ಯ ವಸ್ತುಗಳೂ ಲಭ್ಯವಿಲ್ಲ
ಮತ್ತೊಂದು ಹೇಳಿಕೆಯಲ್ಲಿ, ಕಬುಯಿ ಮಾತೆಯರ ಸಂಘವು ಮಣಿಪುರದಲ್ಲಿನ ಅಶಾಂತಿಗೆ ಎರಡು ಸಮುದಾಯಗಳ ನಡುವಿನ ತಪ್ಪು ತಿಳುವಳಿಕೆ ಕಾರಣ ಎಂದು ಹೇಳಿದೆ.
'ತಪ್ಪು ತಿಳುವಳಿಕೆಯಿಂದಾಗಿ ಪರಿಸ್ಥಿತಿಯು ಕೈಮೀರಿ ಹೋಗಿದೆ. ನಾವು ನಾಗಾ, ಮೈತೇಯಿ, ಪಂಗಲ್, ಕಬುಯಿ ಅಥವಾ ಕುಕಿ ಅಥವಾ ಇತರ ಸಮುದಾಯದವರೆಂಬ ಭೇದವಿಲ್ಲದೆ ಮಣಿಪುರದಲ್ಲಿ ಅನಾದಿ ಕಾಲದಿಂದಲೂ ಶಾಂತಿಯುತವಾಗಿ ಮತ್ತು ಪ್ರೀತಿಯಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ' ಎಂದು ನಾಗಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಂಜಿತಾ ಗೊಲ್ಮೆಯ್ ಹೇಳಿದ್ದಾರೆ.
ಆದಷ್ಟು ಬೇಗ ರಾಜ್ಯದಲ್ಲಿ ಸಹಜ ಸ್ಥಿತಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ ಅವರು, 'ರಾಷ್ಟ್ರೀಯ ಹೆದ್ದಾರಿಗಳ ದಿಗ್ಬಂಧನದಿಂದಾಗಿ ಅಗತ್ಯ ವಸ್ತುಗಳು ಲಭ್ಯವಿಲ್ಲ ಅಥವಾ ತುಂಬಾ ದುಬಾರಿಯಾಗಿದೆ' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications