ಗಾಂಧಿ ತಾತಾ ಚರಕ 1.8 ಕೋಟಿ ರೂಗೆ ಬಿಕರಿಯಾಯ್ತು

ಏನಪ್ಪಾ ಅಂದರೆ ಕ್ವಿಟ್ ಇಂಡಿಯಾ ಚಳವಳಿ ವೇಳೆ (1920ರ ದಶಕದಲ್ಲಿ) ಪುಣೆಯ ಯರವಾಡ ಜೈಲಿನಲ್ಲಿ ಮಹಾತ್ಮ ಗಾಂಧಿ ಅವರು ಬಳಸಿದ್ದ ಕೈ ಚರಕವು ಲಂಡನ್ನಿನ ಮುಲ್ಲೋಕ್ಸ್ ಹರಾಜು ಕೇಂದ್ರದಲ್ಲಿ (Mullock's Auctioneers) ಮಂಗಳವಾರ ನಿರೀಕ್ಷೆಗಿಂತ ದುಪ್ಪಟ್ಟು ಹಣಕ್ಕೆ ಮಾರಾಟವಾಗಿದೆ. ಅಂದಹಾಗೆ, ಆ ದಿನಗಳಲ್ಲಿ ಗಾಂಧಿ ತಾತಾನಿಗೆ ಕೈ ಚರಕವು (foldable charkha) ಅತ್ಯಂತ ಆಪ್ಯಾಯಮಾನ ಸಾಧನವಾಗಿತ್ತು.
ವ್ಯಕ್ತಿಯೊಬ್ಬರು ಇದನ್ನು ಬರೋಬ್ಬರಿ 1.8 ಕೋಟಿಗೆ ಖರೀದಿಸಿದ್ದಾರೆ. ಕೈ ಚರಕ, ಪ್ರಮುಖ ದಾಖಲೆಗಳು, ಪುಸ್ತಕಗಳು, ಫೋಟೋಗಳು ಸೇರಿದಂತೆ ಗಾಂಧೀಜಿಯ ಸುಮಾರು 60 ವಸ್ತುಗಳನ್ನು ಹರಾಜಿಗೆ ಇಡಲಾಗಿತ್ತು. ಗಾಂಧೀಜಿಯ ಕೊನೇ ಉಯಿಲು 20 ಲಕ್ಷ ರೂ. ಗೆ ಹರಾಜಾಯಿತು. ಪುಣೆ ಜೈಲಿನಲ್ಲಿದ್ದಾಗ ಗಾಂಧೀಜಿ ಚರಕದಲ್ಲಿ ನೂಲು ತೆಗೆಯುತ್ತಿದ್ದರು. ನಂತರ ಅವರು ಅದನ್ನು ಅಮೆರಿಕದ ಫ್ರೀ ಮೆಥಾಡಿಸ್ಟ್ ಮಿಷನರಿ ರೆವರೆಂಡ್ ಫ್ಲಾಯ್ಡ್ ಎ ಪಫ್ಫರ್ (Floyd A Puffer) ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಗಾಂಧೀಜಿಯ ಕನ್ನಡಕ ಮತ್ತಿತರ ವಸ್ತುಗಳು ಇತ್ತೀಚೆಗೆ 1.7 ಕೋಟಿ ರೂ. ಗೆ ಮಾರಾಟವಾಗಿತ್ತು. ಬ್ರಿಟಷರ ಆಳ್ವಿಕೆಯಲ್ಲಿ ಭಾರತದಲ್ಲಿ ಬೆಳೆದ ಹತ್ತಿಯನ್ನು ಇಂಗ್ಲೆಂಡಿಗೆ ಸಾಗಣೆ ಮಾಡಿ, ಅಲ್ಲಿನ ಗಿರಣಿಗಳಲ್ಲಿ ರೆಡಿ ಮೇಡ್ ಬಟ್ಟೆಗಳು ತಯಾರಾಗುತ್ತಿದ್ದವು. ಆದರೆ ಅದು ಭಾರತಕ್ಕೆ ವಾಪಸಾಗುವ ವೇಳೆಗೆ ಭಾರತೀಯರು ಭಾರಿ ಬೆಲೆ ತೆತ್ತು ಖರೀದಿಸಬೇಕಿತ್ತು.
ಇದು ಗಾಂಧೀ ಅವರನ್ನು ಚಿಂತನೆಗೆ ಹಚ್ಚಿತು. ಮತ್ತು ಇದರಿಂದ ಗಾಂಧಿಜೀ ಸ್ವಾತಂತ್ರ್ಯದ ಬೆಲೆಯನ್ನೂ ಅರಿತುಕೊಂಡರು. ಈ ದೈನೇಸಿ ಸ್ಥಿತಿಯಿಂದ ಹೊರಬರಲು ಬ್ರಿಟೀಷರನ್ನು ಧಿಕ್ಕರಿಸಿ, ಭಾರತೀಯರು ತಮ್ಮದೇ ಬಟ್ಟೆಗಳನ್ನು ತಯಾರಿಸಿಕೊಳ್ಳುವಂತಾಗಲು ಚರಕದ ಮೂಲಕ ಹತ್ತಿಉ ನೇಯಬೇಕು ಎಂದು ಕರೆಕೊಟ್ಟರು. ಅದನ್ನು ಸ್ವತಃ ತಾವೇ ಮಾಡಿ ತೋರಿಸಲು ಈ foldable charkhaಕ್ಕೆ ಮೊರೆ ಹೋಗಿದ್ದರು.












Click it and Unblock the Notifications