ಡ್ಯಾಂ ಸ್ಫೋಟಗೊಂಡು ಜೀವ ಕಳೆದುಕೊಂಡಿದ್ದು 11 ಸಾವಿರ ಜನ
ಪೂರ್ವ ಲಿಬಿಯಾದ ಪರಿಸ್ಥಿತಿ ನೋಡಿ ಇಡೀ ಜಗತ್ತೇ ಕಣ್ಣೀರು ಹಾಕುತ್ತಿದೆ. ಚಂಡಮಾರುತ ಅಪ್ಪಳಿಸಿದ ಪರಿಣಾಮ 2 ಡ್ಯಾಂ ಸ್ಫೋಟಗೊಂಡು ಸಾವಿರಾರು ಜನ ಮೃತಪಟ್ಟಿದ್ದಾರೆ. ಹೀಗೆ ಲಿಬಿಯಾ ರಕ್ಷಣಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ 11,300 ಮಂದಿ ಮೃತಪಟ್ಟಿದ್ದು, ಈ ಸಂಖ್ಯೆ 20ರಿಂದ 30 ಸಾವಿರಕ್ಕೆ ಏರಿಕೆ ಕಾಣುವ ಭೀತಿ ಆವರಿಸಿದೆ.
'ಡೇನಿಯಲ್' ಚಂಡಮಾರುತದ ಪರಿಣಾಮ ಭೀಕರ ಮಳೆ ಸುರಿದು, ನಂತರ ಲಿಬಿಯಾದ ಎರಡು ಡ್ಯಾಂಗಳು ಸ್ಫೋಟಗೊಂಡಿದ್ದವು. ಹೀಗೆ ದಿಢೀರ್ ಭಾರಿ ಪ್ರಮಾಣದ ನೀರು ನುಗ್ಗಿ ಬಂದಿತ್ತು. ರಾತ್ರೋರಾತ್ರಿ ಸಾವಿರಾರು ಜನ ಮೃತಪಟ್ಟರೆ, ಲೆಕ್ಕಕ್ಕೆ ಸಿಗದಷ್ಟು ಜನ ಇದೀಗ ನಾಪತ್ತೆಯಾಗಿದ್ದಾರೆ. ಇದೇ ಕಾರಣಕ್ಕೆ ಸಾವಿನ ಸಂಖ್ಯೆ ಅಂದಾಜು 20ರಿಂದ 30 ಸಾವಿರಕ್ಕೆ ತಲುಪುವ ಆತಂಕ ಮನೆಮಾಡಿದೆ. ಇನ್ನು ಗೂಗಲ್ ಮ್ಯಾಪ್‌ನಲ್ಲಿ ಲಿಬಿಯಾ ನಕ್ಷೆಯನ್ನು ಗಮನಿಸಿದರೆ, ಸಂಪೂರ್ಣ ಪರಿಸ್ಥಿತಿಯೇ ಬದಲಾಗಿ ಹೋಗಿದೆ.

ಶುರುವಾಯ್ತು ಸಾಂಕ್ರಾಮಿಕ ರೋಗದ ಭೀತಿ
ಡೆರ್ನಾ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಲಿಬಿಯಾ ಆಡಳಿತದಿಂದ ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದ ಜನರನ್ನು ಹುಡುಕುವ ಸಾಹಸ ಒಂದು ಕಡೆಯಾದರೆ, ಎಲ್ಲೆಂದರಲ್ಲಿ ಪ್ರಾಣಿಗಳು ಮತ್ತು ಮನುಷ್ಯರ ಶವ ಬಿದ್ದಿರುವ ಕಾರಣ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದು, ಭಾರಿ ಪ್ರಮಾಣದಲ್ಲಿ ನುಗ್ಗಿ ಬಂದ ಮಣ್ಣು ಮಿಶ್ರಿತ ಪ್ರವಾಹದಲ್ಲಿ ಹಲವರ ಶವಗಳು ಹೂತು ಹೋಗಿವೆ. ಇನ್ನೂ ಕೆಲವರ ದೇಹ ಸಮುದ್ರಕ್ಕೆ ಕೊಚ್ಚಿಕೊಂಡು ಹೋಗಿವೆ. ಹೀಗಾಗಿ ಅವರ ದೇಹ ಹುಡುಕಿ ತರುವುದೇ ಕಷ್ಟದ ಕೆಲಸವಾಗಿದ್ದು, ತಜ್ಞರ ಸಹಾಯ ಪಡೆಯಲಾಗಿದೆ.
ಊಟ ಇಲ್ಲ.. ಸೂರು ಸಿಕ್ಕಿಲ್ಲ...
ಪ್ರವಾಹದ ಪರಿಣಾಮ ರಕ್ಷಣಾ ಸಿಬ್ಬಂದಿ ಡೆರ್ನಾ ನಗರಕ್ಕೆ ತಲುಪಲು ಆಗುತ್ತಿಲ್ಲ. ಹೀಗೆ ಜನರ ರಕ್ಷಣೆ ಮಾಡುವುದು ಕೂಡ ಕಷ್ಟವಾಗುತ್ತಿದೆ. ಹೀಗಾಗಿ ಕಟ್ಟಡಗಳ ಅವಶೇಷ ಮತ್ತು ಮಣ್ಣಿನ ಕೆಳಗೆ ಸಿಲುಕಿದವರು ಬದುಕಿರುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ. ಅತ್ತ ಮೃತಪಟ್ಟ ಕುಟುಂಬಗಳು ಊರು ತೊರೆದು ಹೋಗಿದ್ದು ಅವರಿಗೆ ಊಟ ವಸತಿ ಸೌಲಭ್ಯ ಕೊಡುವುದೇ ದೊಡ್ಡ ಸವಾಲಾಗಿದೆ. ಸಾವಿರಾರು ಕಾರುಗಳು ತೇಲಿ ಬಂದಿದ್ದು, ಎಲ್ಲೆಂದರಲ್ಲಿ ಮನುಷ್ಯರ ಶವ ಸಿಗುತ್ತಿದೆ. ರಸ್ತೆಗಳು ನಾಪತ್ತೆಯಾಗಿದ್ದು, ಹೇಗೋ ಪರದಾಡಿ ಜನರನ್ನು ನಿರಾಶ್ರಿತರ ಶಿಬಿರಗಳಿಗೆ ಸಾಗಿಸಲಾಗಿದೆ.

ನೆರೆ ದೇಶಗಳಾದ ಈಜಿಪ್ಟ್, ಟರ್ಕಿ, ಅಲ್ಜೀರಿಯಾ, ಟ್ಯುನಿಶಿಯಾ, ಯುಎಇ ರಕ್ಷಣಾ ಪಡೆಗಳು ಲಿಬಿಯಾಗೆ ತಲುಪಿವೆ. ಅಮೆರಿಕ ಕೂಡ ವಿಪತ್ತು ನಿರ್ವಹಣಾ ಪಡೆ ರವಾನಿಸಿದ್ದು, ಪರಿಹಾರ ಸಾಮಗ್ರಿ ಒದಗಿಸುವ ಭರವಸೆ ನೀಡಿದೆ. ಆದ್ರೆ ತೈಲ ಸಂಪತ್ತು ಹೊಂದಿದ್ದರು ಕೂಡ ಲಿಬಿಯಾ ಬಡರಾಷ್ಟ್ರವಾಗಿ ನರಳುತ್ತಿದೆ. ಭೀಕರ ಸೈಕ್ಲೋನ್ ಅಬ್ಬರಕ್ಕೆ ತತ್ತರಿಸಿದ್ದು, ಡೆರ್ನಾ ಹಾಗೂ ಇತರ ಪಟ್ಟಣದಿಂದ 40,000 ಜನರ ಸ್ಥಳಾಂತರವಾಗಿದೆ. ಮುಂದೆ ಹೇಗಪ್ಪಾ ಬದುಕು ಎಂಬ ಚಿಂತೆಯಲ್ಲಿ ಜನರು ಮುಳುಗುವಂತಾಗಿದೆ.












Click it and Unblock the Notifications