ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಮರಣದಂಡನೆ ಶಿಕ್ಷೆ ರದ್ದು
ಇಸ್ಲಾಮಾಬಾದ್, ಜನವರಿ 14: ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸೇನಾ ಆಡಳಿತಗಾರ ಪರ್ವೇಜ್ ಮುಷರಫ್ ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಅಲ್ಲಿನ ನ್ಯಾಯಾಲಯವೊಂದು ರದ್ದುಗೊಳಿಸಿದೆ. ಈ ಮರಣದಂಡನೆ ಆದೇಶವು ಅಸಾಂವಿಧಾನಿಕ ಎಂದು ಅದು ಹೇಳಿದೆ.
2016ರಿಂದ ದುಬೈನಿಂದ ಸ್ವಯಂ ಗಡಿಪಾರಿಗೆ ಒಳಗಾಗಿರುವ 76 ವರ್ಷದ ಮುಷರಫ್, ಈಗ ಸ್ವತಂತ್ರ ವ್ಯಕ್ತಿಯಾಗಿದ್ದು, ಅವರು ಮುಕ್ತವಾಗಿ ಪಾಕಿಸ್ತಾನಕ್ಕೆ ಮರಳಬಹುದು ಎಂದು ಲಾಹೋರ್ ಹೈಕೋರ್ಟ್ ಸೋಮವಾರ ಹೇಳಿದೆ.
2007ರಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಮೂಲಕ ಸಂವಿಧಾನ ಉಲ್ಲಂಘನೆ ಮಾಡಿದ್ದಕ್ಕೆ ಮುಷರಫ್ ಅವರಿಗೆ ಮೂವರು ಸದಸ್ಯರ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.

ಈ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಅಪರಾಧವನ್ನು ಒಬ್ಬನೇ ವ್ಯಕ್ತಿ ಎಸಗಿರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮೂಲ ಮರಣದಂಡನೆಯನ್ನು ವಿಧಿಸಿದ ವಿಶೇಷ ನ್ಯಾಯಾಲಯದ ರಚನೆಯೇ ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಅದು ಹೇಳಿದೆ. ಇದರಿಂದ ಮುಷರಫ್ ಅವರ ಮೇಲಿನ ಆರೋಪ ನಿರಾಧಾರ ಎಂದು ತಿಳಿಸಿದೆ.
ಮುಷರಫ್ ವಿರುದ್ಧ ಪಿಎಂಎಲ್ ಪಕ್ಷ 2013ರಲ್ಲಿ ದೇಶದ್ರೋಹದ ದೂರು ನೀಡಿತ್ತು. 2007ರಲ್ಲಿ ಅಧ್ಯಕ್ಷರಾಗಿದ್ದ ಮುಷರಫ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂವಿಧಾನದ ನಿಯಮಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಸಹ ಬಂಧಿಸಲಾಗಿತ್ತು. ಈ ಪ್ರಕರಣದ ಕುರಿತು ವಿಶೇಷ ನ್ಯಾಯಾಲಯದಲ್ಲಿ ಆರು ವರ್ಷ ವಿಚಾರಣೆ ನಡೆದು, ಕಳೆದ ವರ್ಷ ಡಿ. 17ರಂದು ಮುಷರಫ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಮುಷರಫ್ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications