ಗಾಲ್ಫ್ ಆಡುವ ಜಾಗದಿಂದ ಮಿಸೈಲ್ ಉಡಾಯಿಸಿದ ಪುಣ್ಯಾತ್ಮ!
ಉ.ಕೊರಿಯಾ: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೆಸರೇ ಹಾಗೆ. ಈತನ ಹೆಸರಿನ ಜೊತೆಯಲ್ಲೇ ಕ್ಷಿಪಣಿ ಸೇರಿದೆ ಅಂತಾ ಕಾಣುತ್ತೆ. ಯಾಕಂದ್ರೆ ಶತ್ರುಗಳು ಜೋರಾಗಿ ಉಸಿರು ಬಿಟ್ಟರೂ ಕ್ಷಿಪಣಿ ಹಾರಿಸಿ ಬೆವರಿಳಿಸುವ ಕೆಲಸ ಮಾಡುತ್ತಾನೆ ಕಿಮ್. ಇಂತಿಪ್ಪ ಸರ್ವಾಧಿಕಾರಿ ಗಾಲ್ಫ್ ಆಡುವ ಜಾಗದಲ್ಲಿ ನಿಂತು ಪರಮಾಣು ಕ್ಷಿಪಣಿ ಹಾರಿಸಿದ್ದ ಎಂಬ ಸುದ್ದಿ ಬೆಚ್ಚಿ ಬೀಳಿಸಿದೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಅಕ್ಷರಶಃ ರೊಚ್ಚಿಗೆದ್ದಿದ್ದಾನೆ. ತನ್ನ ಶತ್ರುಗಳ ಸರ್ವನಾಶಕ್ಕೆ ಸಿದ್ಧನಾಗಿದ್ದಾನೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಆಟಕ್ಕೆ ಬೆಂಕಿ ಹಚ್ಚಲು ಕಿಮ್ ಜಾಂಗ್ ಉನ್ (kim jong un) ಕರೆ ನೀಡಿದ್ದು, ಉತ್ತರ ಕೊರಿಯಾ (north korea) ಕಳೆದ ವಾರವಷ್ಟೇ 'ಹ್ವಾಸಾಂಗ್-18' ಹೆಸರಿನ ಭಯಾನಕ ಕ್ಷಿಪಣಿ ಉಡಾಯಿಸಿತ್ತು. ಕಿಮ್ ಈ ಕ್ಷಿಪಣಿಯ ಯಶಸ್ಸಿನ ಬಳಿಕ ಗೆಲುವಿನ ನಗೆ ಬೀರಿದ್ದ. ಆದ್ರೆ ಇದೇ ಕ್ಷಿಪಣಿ ಅಸಲಿ ಕಥೆ ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಬೆವರು ಹರಿಯುವಂತೆ ಮಾಡಿದೆ. ಯಾವಾಗ ಏನಾಗುತ್ತೋ? ಎಂಬ ಭಯವದ ವಾತಾವರಣ ಸೃಷ್ಟಿಸಿದೆ.

'ಹ್ವಾಸಾಂಗ್-18' ಹೆಸರಿನ ಭಯಾನಕ ಕ್ಷಿಪಣಿ ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗದ ಮತ್ತು ಶತ್ರುಗಳ ನೆಲವನ್ನು ತಕ್ಷಣ ಸರ್ವನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಕಳೆದ ವಾರ ಇದೇ ಕ್ಷಿಪಣಿಯನ್ನ ಉತ್ತರ ಕೊರಿಯಾ ಉಡಾಯಿಸಿತ್ತು. ಇದೀಗ 'ಹ್ವಾಸಾಂಗ್-18' ಕ್ಷಿಪಣಿ ಪರೀಕ್ಷೆ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಸಿಕ್ಕಿದೆ. 'ಹ್ವಾಸಾಂಗ್-18' ಉಡಾವಣೆ ಮಾಡಿದ್ದ ಕಿಮ್, ಉಡಾವಣೆ ಮಾಡುವಾಗ ಗಾಲ್ಫ್ ಮೈದಾನದಲ್ಲಿ ಇದ್ದ ಎನ್ನಲಾಗಿದೆ! ದೊಡ್ಡಣ್ಣ ಅಮೆರಿಕದ ಎದೆ ನಡುಗಿಸಲು ಈ ಅಸ್ತ್ರ ಸಾಕು ಎಂಬಂತೆ ಬಿಲ್ಡಪ್ ಕೊಡುತ್ತಿರುವ ಕಿಮ್, ಯಾವುದೋ ಭಯಾನಕ ಸ್ಕೆಚ್ ಹಾಕಿರುವಂತೆ ಕಾಣುತ್ತಿದೆ.
ಎಲ್ಲಿಂದ ಬೇಕಾದರೂ ಉಡಾವಣೆ!
ಶತ್ರುಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದಲೇ ಇಂತಹ ಕೆಲಸ ಮಾಡಿದ್ದಾನೆ ಕಿಮ್ ಎನ್ನಲಾಗಿದೆ. ಅಷ್ಟಕ್ಕೂ ಕಿಮ್ ಜಾಂಗ್ ಉನ್ ಗಾಲ್ಫ್ ಮೈದಾನದಲ್ಲೇ ನಿಂತು ಪರಮಾಣು ಸಾಮರ್ಥ್ಯದ ಕ್ಷಿಪಣಿ ಉಡಾವಣೆ ಮಾಡಲು ಕಾರಣವೇ ಬೇರೆ. ಟ್ರಂಪ್, ಕಿಮ್ ನಡುವೆ ಕಿತ್ತಾಟ ನಡೆಯುವಾಗ ಇಬ್ಬರೂ ತಮ್ಮ ಕ್ಷಿಪಣಿಗಳ ಬಗ್ಗೆ ಮಾತನಾಡಿದ್ದರು. ಅದೇ ಸಂದರ್ಭದಲ್ಲಿ ಕಿಮ್ ತನ್ನ ಸಾಮರ್ಥ್ಯ ಏನು ಎಂಬುದನ್ನ ಅಮೆರಿಕ ಅಧ್ಯಕ್ಷನಿಗೆ ತಿಳಿಸಲು ಪ್ರಯತ್ನಿಸಿದ್ದ. ಒಟ್ಟಾರೆ ಇಬ್ಬರು ತಿಕ್ಕಲು ನಾಯಕರ ನಡುವೆ ಇಂತಹದ್ದೊಂದು ಜಗಳ ನಡೆದ ನಂತರ, ಅದನ್ನೇ ಕಿಮ್ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುತ್ತಿದೆ.

ಉ.ಕೊರಿಯಾ ಶತ್ರುಗಳಿಗೆ ನಡುಕ
ಕಿಮ್ ಜಾಂಗ್ ಉನ್ ತಲೆಕೆಟ್ಟರೆ ಏನು ಬೇಕಾದರು ಮಾಡುವ ಮನುಷ್ಯ. ಹೀಗಾಗಿ ಮುಂದೆ ಯುದ್ಧದ ಭೀತಿ ನಿರ್ಮಾಣವಾಗಿ, ಉತ್ತರ ಕೊರಿಯಾ ಪರಮಾಣು ದಾಳಿ ನಡೆಸಿದರೆ ಕಿಮ್ ಎಲ್ಲಿಂದ ಬೇಕಾದರೂ ಕ್ಷಿಪಣಿ ಹಾರಿಸಬಲ್ಲ ಎಂಬ ಭಯ ಜಪಾನ್, ದಕ್ಷಿಣ ಕೊರಿಯಾಗೆ ಶುರುವಾಗಿದೆ. ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಈ ಎರಡೂ ದೇಶಗಳ ಮೇಲೆ ಯಾವಾಗ ಬೇಕಾದರೂ ಕಿಮ್ ದಾಳಿ ನಡೆಸಿ, ಪುಡಿ ಪುಡಿ ಮಾಡಬಹುದು. ಈಗಾಗಲೇ ಉತ್ತರ ಕೊರಿಯಾ ಬಳಿ ಇರುವ ಕ್ಷಿಪಣಿಗಳ ಸಾಮರ್ಥ್ಯ ನೋಡಿದರೆ ಭಯ ಮೂಡುವುದು ಪಕ್ಕಾ.
ಇಷ್ಟೆಲ್ಲಾ ಬೆಳವಣಿಗೆ ನಡುವೆ ಕಿಮ್ ಜಾಂಗ್ ಉನ್ ತೋರಿಸುತ್ತಿರುವ ಕ್ಷಿಪಣಿ ಆಟಕ್ಕೆ ಅಮೆರಿಕ ಬೆಚ್ಚಿದೆ. ಹೀಗಾಗಿ ಬಹಿರಂಗ ಹೇಳಿಕೆ ನೀಡುತ್ತಿಲ್ಲ, ಉತ್ತರ ಕೊರಿಯಾದ ನಡೆ ವಿರುದ್ಧ ಎಚ್ಚರಿಕೆ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೂ ಮೊದಲು ಉ.ಕೊರಿಯಾ ಕ್ಷಿಪಣಿ ಪರೀಕ್ಷೆ ಮಾಡಿದ ತಕ್ಷಣ ಅಮೆರಿಕ ರಿಯಾಕ್ಟ್ ಮಾಡುತ್ತಿತ್ತು, ಎಚ್ಚರಿಕೆ ನೀಡುತ್ತಿತ್ತು. ಆದ್ರೆ ಈಗ ಸೈಲೆಂಟ್ ಆಗಿರೋದು ಯಾಕೆ? ಎಂಬ ಅನುಮಾನ ಮೂಡಿದೆ. ಇಷ್ಟೆಲ್ಲದರ ನಡುವೆ 3ನೇ ಮಹಾಯುದ್ಧದ ಕಾರ್ಮೋಡ ಕೂಡ ಆವರಿಸುತ್ತಿದೆ.

100ಕ್ಕೂ ಹೆಚ್ಚು ಕ್ಷಿಪಣಿ ಪ್ರಯೋಗ
ಈಗ ಹೊಸ ಉಪಗ್ರಹ ಉಡಾವಣೆಗೆ ಸಜ್ಜಾಗಿರುವ ಕಿಮ್ ಜಾಂಗ್ ಉನ್ ಅಮೆರಿಕ ಮತ್ತು ಜಪಾನ್, ದಕ್ಷಿಣ ಕೊರಿಯಾ ವಿರುದ್ಧ ಅದೆಷ್ಟು ರೊಚ್ಚಿಗೆದ್ದಿದ್ದಾನೆ ಎಂದರೆ, ಕಳೆದ 1 ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪರೀಕ್ಷಾರ್ಥ ಪ್ರಯೋಗ ನಡೆಸಿದ್ದಾನೆ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸುತ್ತಿದ್ದಾನೆ.












Click it and Unblock the Notifications