ನೈರೋಬಿಯಲ್ಲಿ ಉಗ್ರರ ಅಟ್ಟಹಾಸ 43 ಸಾವು
ನೈರೋಬಿ, ಸೆ.22 : ಮುಂಬೈದಾಳಿ ಮಾದರಿಯಲ್ಲಿ ಕೀನ್ಯಾದ ನೈರೋಬಿಯ ಮಾಲ್ ಒಂದರಲ್ಲಿ ಶನಿವಾರ ರಾತ್ರಿ ಇಸ್ಲಾಮಿಕ್ ಉಗ್ರರು ರಕ್ತಪಾತ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ 43 ಮಂದಿ ಮುಗ್ಧರು ಸಾವನ್ನಪ್ಪಿದ್ದಾರೆ.
ಬಂದೂಕುಧಾರಿ ಇಸ್ಲಾಮಿಕ್ ಉಗ್ರಗಾಮಿಗಳು ಗ್ರೆನೇಡ್‌ಗಳನ್ನು ಎಸೆಯುತ್ತಾ, ರೈಫಲ್ ದಾಳಿಯ ಮೂಲಕ ಮಾಲ್ ಪ್ರವೇಶಿಸಿ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದಾರೆ. ನಾಲ್ಕು ಮಹಡಿಯ ಕಟ್ಟಡದಲ್ಲಿ ಘಟನೆಯಿಂದಾಗಿ ಜನರ ಆರ್ತನಾದ ಮುಗಿಲು ಮುಟ್ಟಿತ್ತು.

ಘಟನೆಯಿಂದ ಇಬ್ಬರು ಭಾರತೀಯರು ಸೇರಿ 43 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ವಾಹಿನಿಯಲ್ಲಿ ಮಾತನಾಡಿದ ಕೀನ್ಯಾ ಅಧ್ಯಕ್ಷರು, ಮೃತರಲ್ಲಿ ತಮ್ಮ ಕುಟುಂಬದ ಆಪ್ತರು ಕೂಡ ಸೇರಿದ್ದಾರೆ ಎಂದು ಹೇಳಿದ್ದಾರೆ.
ಮೃತಪಟ್ಟವರಲ್ಲಿ ವಿದೇಶೀಯರೂ ಸೇರಿದ್ದಾರೆ. ಗುಂಡಿನ ದಾಳಿ ಆರಂಭವಾದ 12 ಗಂಟೆಗಳ ಬಳಿಕ, ಭಾನುವಾರ ಬೆಳಗ್ಗಿನವರೆಗೂ ಉಗ್ರಗಾಮಿಗಳು ಕಟ್ಟಡದೊಳಗೆ ಅವಿತುಕುಳಿತಿದ್ದು, ಹಲವರನ್ನು ಒತ್ತೆಯಿಟ್ಟುಕೊಂಡಿರುವ ಶಂಕೆಯಿದೆ.
ಸ್ಥಳದಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದು, ಒತ್ತೆಯಾಳುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡುವುದಾಗಿ ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಟಾ ಹೇಳಿದ್ದಾರೆ. ಶನಿವಾರ ಮಧ್ಯಾಹ್ನ ದಾಳಿ ಆರಂಭವಾದಾಗ, ಯಾರೆಲ್ಲಾ ಮುಸ್ಲಿಮರು ಎಂದು ಬಂದೂಕುಧಾರಿಗಳು ಕೇಳಿ, ಅವರಿಗೆ ಮಾತ್ರ ತಪ್ಪಿಸಿಕೊಳ್ಳಲು ಅವಕಾಶ ನೀಡಿದ್ದಾರೆ.
ಸೋಮಾಲಿಯಾದ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಅಲ್-ಶಬಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. 2011ರಲ್ಲಿ ಸೋಮಾಲಿಯದಲ್ಲಿ ಕೀನ್ಯಾ ಪಡೆಗಳು ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಿದ್ದೇವೆ. ಇನ್ನಷ್ಟು ದಾಳಿಗಳು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಮತ್ತು ಸೇನಾಪಡೆಗಳು ಕಟ್ಟಡವನ್ನು ಸುತ್ತುವರಿದಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಅಮೆರಿಕಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ.
ಗುರುತು ಪತ್ತೆ : ಉಗ್ರರ ದಾಳಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯರ ಗುರುತು ಪತ್ತೆಯಾಗಿದೆ. ಚೆನ್ನೈ ಮೂಲದ ಶ್ರೀಧರ್ ನಟರಾಜನ್(40) ಮತ್ತು ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್ ಅವರ ಪುತ್ರ ಪರಮಾನ್ಯು ಜೈನ್(8) ಎಂಬವರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದು, ಮುವತ್ತೈದು ಭಾರತೀಯರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಗೆ ಸಂಬಂಧಿಸಿದಂತೆ ಭಾರತೀಯರ ರಕ್ಷಣೆಗಾಗಿ ಭಾರತೀಯ ರಾಯಭಾರಿ ಕಚೇರಿ ಕೀನ್ಯಾ ಸರ್ಕಾರದೊಂದಿಗೆ ನಿರಂತರವಾಗಿ ಸಮರ್ಪಕದಲ್ಲಿದೆ. ಗಾಯಗೊಂಡಿರುವವರನ್ನು ಮಂಜುಳಾ ಶ್ರೀಧರ್, ಮುಕ್ತಾ ಜೈನ್, ಕುಮಾರ್ ಪೂರ್ವಿ ಜೈನ್, ನಟರಾಜನ್ ರಾಮಚಂದ್ರನ್ ಎಂದು ಗುರುತಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.












Click it and Unblock the Notifications