Kash Patel: ಭಾರತ ಮೂಲದ ವ್ಯಕ್ತಿ ಈಗ ಅಮೆರಿಕದ ಎಫ್‌ಬಿಐ ಮುಖ್ಯಸ್ಥ!
ಡೊನಾಲ್ಡ್ ಟ್ರಂಪ್ ಸರ್ಕಾರವೇ ಬರಲಿ, ಜೋ ಬೈಡನ್ ಸರ್ಕಾರವೇ ಇರಲಿ ಅಮೆರಿಕದಲ್ಲಿ ಈಗ ಭಾರತೀಯರದ್ದೇ ಮೇಲುಗೈ ಆಗಿದೆ. ಭಾರತ ಮೂಲದ ಕೋಟ್ಯಂತರ ಜನರು ಈಗಾಗಲೇ ಅಮೆರಿಕದಲ್ಲಿ ಬದುಕು ಕಟ್ಟಿ ಕೊಂಡಿದ್ದಾರೆ. ಅಲ್ಲದೆ ಇನ್ನೂ ಬಹುತೇಕರು ಅಮೆರಿಕಗೆ ವಲಸೆ ಹೋಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂತಹ ಸಮಯದಲ್ಲೇ ಅಮೆರಿಕದ ಸರ್ಕಾರಗಳಲ್ಲಿ ಕೂಡ ಮಹತ್ವದ ಹುದ್ದೆ ಪಡೆಯುವಷ್ಟು ಶಕ್ತಿ ಹೊಂದಿರುವ ಭಾರತ ಮೂಲದ ನಾಯಕರಿಗೆ ದೊಡ್ಡ ದೊಡ್ಡ ಸ್ಥಾನಗಳೇ ಸಿಗುತ್ತಿವೆ.
ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಎಫ್‌ಬಿಐಗೆ ಈಗ ಭಾರತ ಮೂಲದ ವ್ಯಕ್ತಿ ನಿರ್ದೇಶಕರಗಿ ಆಯ್ಕೆ ಆಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಜೊತೆಗಾರರಲ್ಲಿ ಬಹುತೇಕರು ಭಾರತ ಮೂಲದ ನಂಟು ಹೊಂದಿದ್ದಾರೆ. ವಿವೇಕ್ ರಾಮಸ್ವಾಮಿ ಕೂಡ ಮಹತ್ವದ ಹುದ್ದೆ ಪಡೆದುಕೊಂಡು, ಅಮೆರಿಕ ಸರ್ಕಾರದ ಆಡಳಿತ ಸುಧಾರಣೆ ಮಾಡುತ್ತಿದ್ದಾರೆ. ಅದೇ ರೀತಿ ಈಗ ಕಾಶ್ ಪಟೇಲ್ ಕೂಡ ಅಮೆರಿಕದ ಪ್ರಮುಖ ಹುದ್ದೆ ಅಲಂಕರಿಸಿದ್ದು, ಎಫ್‌ಬಿಐ ಮುಖ್ಯಸ್ಥರಾಗಿ ಕಾಶ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಡೊನಾಲ್ಡ್ ಟ್ರಂಪ್ & ಭಾರತೀಯರ ನಂಟು
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಗೆದ್ದು ಅಧ್ಯಕ್ಷರಾಗಲು ಭಾರತ ಮೂಲದ ಮತದಾರರ ಪ್ರಭಾವ ಕೂಡ ಹೆಚ್ಚಾಗಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಪಕ್ಷವಾದ ರಿಪಬ್ಲಿಕನ್ ಪಾರ್ಟಿಯಲ್ಲಿ ಕೂಡ ಭಾರತ ಮೂಲದವರೇ ಹೆಚ್ಚಾಗಿದ್ದಾರೆ. ಹೀಗಿದ್ದಾಗ ಮತ್ತೆ ಭಾರತ ಮೂಲದ ವ್ಯಕ್ತಿಗೆ ಮಣೆ ಹಾಕಲಾಗಿದೆ.
ಟ್ರಂಪ್ ಸರ್ಕಾರದಲ್ಲಿ ಇನ್ನೂ ಹಲವು ಹುದ್ದೆಗಳು ಖಾಲಿ ಇದ್ದು, ಆ ಹುದ್ದೆಗಳಿಗೆ ಕೂಡ ಭಾರತ ಮೂಲದ ವ್ಯಕ್ತಿಗಳೇ ಆಯ್ಕೆ ಆಗುವ ನಿರೀಕ್ಷೆ ಇದೆ. ಅಲ್ಲದೆ ಮುಂದಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನ ಕೂಡ ಭಾರತ ಮೂಲದ ವ್ಯಕ್ತಿಗೆ ಸಿಗುತ್ತಾ? ಎಂಬ ಕುತೂಹಲ ಹೆಚ್ಚಾಗಿದೆ. ಡೆಮಾಕ್ರಟಿಕ್ ಪಾರ್ಟಿ ಅಭ್ಯರ್ಥಿಯಾಗಿ ಟ್ರಂಪ್ ವಿರುದ್ಧ ಸ್ಪರ್ಧೆ ಮಾಡಿದ್ದ ಕಮಲಾ ಹ್ಯಾರಿಸ್ ಕೂಡ ಭಾರತ ಮೂಲದವರೇ ಆಗಿದ್ದರು.
ಕೆನಡಾ ದೇಶದಲ್ಲೂ ಭಾರತೀಯರು ಹೆಚ್ಚು
ಒಟ್ನಲ್ಲಿ ಒಂದು ಕಾಲದಲ್ಲಿ ಅಮೆರಿಕದ ಸಹಾಯ ಪಡೆಯುತ್ತಿದ್ದ ಭಾರತ ಇದೀಗ ಅಮೆರಿಕ ಸರ್ಕಾರದಲ್ಲಿ ಪ್ರಭಾವ ಬೀರುವ ಹಂತಕ್ಕೆ ಬೆಳೆಯುತ್ತಿದೆ. ಅದರಲ್ಲೂ ಭಾರತ ಮೂಲದವರು ಅಮೆರಿಕದಲ್ಲಿ ಸೆಟಲ್ ಆಗುತ್ತಿರುವುದು ಕೂಡ ಪರೋಕ್ಷವಾಗಿ ಈ ಪ್ರಭಾವ ಹೆಚ್ಚಿಸುತ್ತಿದ್ದು, ಅಮೆರಿಕದ ಪಕ್ಕದ ದೇಶ ಕೆನಡಾದಲ್ಲಿ ಕೂಡ ಭಾರತ ಮೂಲದವರು ಹೆಚ್ಚಾಗಿ ಇದ್ದಾರೆ. ಈ ಮೂಲಕ ಕೆನಡಾ ಅಧಿಕಾರ ಕೂಡ ಭಾರತ ಮೂಲದ ನಂಟು ಹೊಂದಿದ ವ್ಯಕ್ತಿ ಕೈಗೆ ಸಿಗುವ ನಿರೀಕ್ಷೆ ಇದೆ. ಬ್ರಿಟನ್ ಸೇರಿದಂತೆ ಯುರೋಪ್ ದೇಶಗಳಲ್ಲೂ ಭಾರತೀಯರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ.












Click it and Unblock the Notifications