ಹುಚ್ಚಾಟವನ್ನು ಇಲ್ಲಿಗೇ ನಿಲ್ಲಿಸಿ: ಇಸ್ರೇಲ್‌ಗೆ ಟರ್ಕಿ ಅಧ್ಯಕ್ಷರ ಬೆದರಿಕೆ- ಯಹೂದಿ ರಾಷ್ಟ್ರದ ವಿರುದ್ಧ ರೊಚ್ಚಿಗೇಳುತ್ತಿವೆ ಮುಸ್
ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದೆ. ನಾಗರಿಕರು ಸೇರಿದಂತೆ ಸಾವಿರಾರು ಪ್ಯಾಲೆಸ್ತೀನಿಯರು ಇಸ್ರೇಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾವನ್ನು ನಾಶ ಮಾಡಿಯೇ ತೀರುತ್ತೇವೆಂದು ಇಸ್ರೇಲ್ ಬೆದರಿಕೆ ಹಾಕಿದೆ. ಯಹೂದಿ ರಾಷ್ಟ್ರದ ಈ ನಡೆಯನ್ನು ವಿಶ್ವಸಂಸ್ಥೆ ಖಂಡಿಸಿದೆ. ಈಗ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್ ಇಸ್ರೇಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಹುಚ್ಚುತನವನ್ನು ಇಸ್ರೇಲ್ ತಕ್ಷಣವೇ ನಿಲ್ಲಿಸಬೇಕು. ಪ್ಯಾಲೆಸ್ತೇನ್ ಮೇಲಿನ ದಾಳಿಯನ್ನು ತಕ್ಷಣವೇ ಕೊನೆಗೊಳಿಸಬೇಕು ಎಂದು ಟರ್ಕಿ ಅಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.

'ಕಳೆದ ರಾತ್ರಿ ಗಾಜಾದ ಮೇಲೆ ಇಸ್ರೇಲಿ ಬಾಂಬ್ ದಾಳಿಗಳು ತೀವ್ರಗೊಂಡಿವೆ. ಮತ್ತೊಮ್ಮೆ ಮಹಿಳೆಯರು, ಮಕ್ಕಳು ಮತ್ತು ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ದಾಳಿ ನಡೆಸುತ್ತಿವೆ. ಇದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಬಿಕ್ಕಟ್ಟನ್ನು ಉಂಟು ಮಾಡಿದೆ' ಎಂದು ರೆಸೆಪ್ ತಯ್ಯಿಪ್ ಎರ್ಡೊಗನ್ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹೇಳಿದ್ದಾರೆ.
'ಇಸ್ರೇಲ್ ತಕ್ಷಣವೇ ಈ ಹುಚ್ಚುತನವನ್ನು ನಿಲ್ಲಿಸಬೇಕು. ಅಮಾನವೀಯ ದಾಳಿಯನ್ನು ಕೊನೆಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಇಸ್ತಾನ್‌ಬುಲ್‌ನಲ್ಲಿ ಪ್ಯಾಲೆಸ್ತೀನಿಗಳನ್ನು ಬೆಂಬಲಿಸಿ ರ್ಯಾಲಿ ನಡೆಸಲಾಗುತ್ತಿದೆ. ಇದಕ್ಕೆ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಬೆಂಬಲ ಸೂಚಿಸಿದ್ದಾರೆ.

'ನಾವು ಇಸ್ರೇಲ್‌ನ ಕಿರುಕುಳದ ವಿರುದ್ಧ ಪ್ಯಾಲೇಸ್ಟಿನಿಯನ್ ಜನರೊಂದಿಗೆ ನಿಲ್ಲುತ್ತೇವೆ. ಈ ಕುರಿತು ನಾವು ಜೋರಾಗಿ ಮತ್ತು ಸ್ಪಷ್ಟವಾಗಿ ಘೋಷಿಸುತ್ತೇವೆ' ಎಂದು ಹೇಳಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ 1,400 ಜನರು ಹತರಾಗಿದ್ದಾರೆ. 229 ಒತ್ತೆಯಾಳುಗಳನ್ನು ಹಮಾಸ್ ತೆಗೆದುಕೊಂಡು ಹೋಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ದಾಳಿ ನಡೆಸುತ್ತಿದೆ. ಇಸ್ರೇಲಿನ ಪ್ರತಿಕಾರದ ದಾಳಿಗಳಲ್ಲಿ 7,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇಷ್ಟು ದಿನಗಳ ಕಾಲ ವೈಮಾನಿಕ ದಾಳಿ ನಡೆಸುತ್ತಿದ್ದ ಇಸ್ರೇಲ್ ಈಗ ನೆಲದ ಮೂಲಕ ಕಾರ್ಯಚರಣೆಗೆ ಇಳಿಯುತ್ತಿದೆ. ಹಮಾಸ್ ಅನ್ನು ಹತ್ತಿಕ್ಕಲು ಇಸ್ರೇಲ್ ಮಿಲಿಟರಿ ಗಾಜಾದ ಮೇಲೆ ಸಂಪೂರ್ಣ ಆಕ್ರಮಣಕ್ಕೆ ಮುಂದಾಗಿದೆ.

ಪ್ಯಾಲೇಸ್ಟಿನಿಯನ್ ಟೆಲಿಕಾಂ ಪೂರೈಕೆದಾರ ಸಂಸ್ಥೆಯಾಗಿರುವ ಪಾಲ್ಟೆಲ್ ಪ್ರಕಾರ, ಬಾಂಬ್ ಸ್ಫೋಟವು ಇಂಟರ್ನೆಟ್, ಸೆಲ್ಯುಲಾರ್ ಮತ್ತು ಲ್ಯಾಂಡ್‌ಲೈನ್ ಸೇವೆಗಳಿಗೆ ಸಂಪೂರ್ಣ ಅಡ್ಡಿಯನ್ನು ಉಂಟುಮಾಡಿದೆ ಎಂದು ಹೇಳಿದೆ.
ಗಾಜಾ ಪಟ್ಟಿಯ ಸುಮಾರು 2.3 ಮಿಲಿಯನ್ ಜನರು ಹೊರಗಿನ ಪ್ರಪಂಚದ ಸಂಪರ್ಕದಿಂದ ಕಡಿತಗೊಂಡಿದ್ದಾರೆ. ಕಾರಣ, ಇಲ್ಲಿ ಕೇವಲ ಸೆಟಲೈಟ್ ಫೋನ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ನೆರವು ನೀಡುವ ಗುಂಪುಗಳು ಗಾಜಾ ಪಟ್ಟಿಯಲ್ಲಿರುವ ತಮ್ಮ ತಂಡಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿವೆ. ಗಾಯಗೊಂಡವರನ್ನು ತಲುಪಲು ಆಂಬ್ಯುಲೆನ್ಸ್‌ಗಳಿಗೆ ಅಸಾಧ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.












Click it and Unblock the Notifications