Israel-Hamas war: ಇಸ್ರೇಲ್ ವಿರುದ್ಧ ನ್ಯೂಯಾರ್ಕ್‌ನಲ್ಲಿ ಭುಗಿಲೆದ್ಧ ಪ್ರತಿಭಟನೆ- ಬೈಡನ್‌ಗೆ ಶುರವಾಯ್ತು ತಲೆನೋವು
ನ್ಯೂಯಾರ್ಕ್, ಅಕ್ಟೋಬರ್ 14: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಬಾಂಬ್ ದಾಳಿಯನ್ನು ಖಂಡಿಸಿ ಸಾವಿರಾರು ಪ್ರತಿಭಟನಾಕಾರರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಬೀದಿಗಿಳಿದಿದ್ದಾರೆ. ಪ್ಯಾಲೆಸ್ತೀನ್ ಸ್ವತಂತ್ರವಾಗಲಿ ಎಂದು ಘೋಷಣೆ ಕೂಗಿದ್ದಾರೆ. ಅಮೆರಿಕ ಸರ್ಕಾರ ಇಸ್ರೇಲ್ ಪರ ಬ್ಯಾಟ್ ಬೀಸಿದ ಸಂದರ್ಭದಲ್ಲೇ ಈ ಪ್ರತಿಭಟನೆಗಳು ಭುಗಿಲೆದ್ದಿವೆ. ಇದು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರನ್ನು ಚಿಂತೆಗೀಡು ಮಾಡಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
'ಇಸ್ರೇಲಿ ಆಕ್ರಮಣ ಗಾಜಾದ ಮೇಲೆ ಅಕ್ರಮಣ ಮಾಡುತ್ತಿದೆ. ಪ್ಯಾಲೆಸ್ತೀನ ಪ್ರದೇಶಗಳು ವಿಮೋಚನೆಯಾಗಬೇಕಿದೆ' ಎಂದು ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿದ್ದಾರೆ.

ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ತಳ್ಳಿರುವ ಯುವ ಪ್ರತಿಭಟನಾಕಾರರು ಇಸ್ರೇಲ್‌ಗೆ ಬೆಂಬಲ ನೀಡಿರುವ ಅಮೆರಿಕ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.
ಇಸ್ರೇಲ್ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ. ಪ್ಯಾಲೆಸ್ತೀನ್ ಜನರ ಮೇಲೆ ಬಲತ್ಕಾರ ನಡೆಸಿದೆ. ಬೈಡನ್ ಸರ್ಕಾರ ಇಸ್ರೇಲ್‌ಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
'ಇಸ್ರೇಲ್‌ನ ವಸಾಹತುಶಾಹಿ ನಡೆಯು ಈಗ ಕೊನೆಗೊಳ್ಳಬೇಕಿದೆ. ಇಲ್ಲದಿದ್ದರೆ, ಹಿಂಸಾಚಾರದ ಹೆಚ್ಚುತ್ತಲೇ ಇರುತ್ತದೆ. ಪ್ಯಾಲೆಸ್ತೀನ್ ಮೇಲೆ ದಬ್ಬಾಳಿಕೆ ಮುಂದುವರಿಯುತ್ತದೆ' ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

'ನದಿಯಿಂದ ಸಮುದ್ರದ ವರೆಗೆ, ಪ್ಯಾಲೆಸ್ತೀನ್ ಮುಕ್ತವಾಗಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಇದೇ ರೀತಿಯ ಪ್ರತಿಭಟನೆಗಳು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಭುಗಿಲೆದ್ದಿವೆ.
ಹಮಾಸ್ ಉಗ್ರಗಾಮಿಗಳು ಕಳೆದ ಶನಿವಾರ ಗಾಜಾ ಪಟ್ಟಿ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಸಾವಿರಾರು ಜನರು ಮೃತಪಟ್ಟಿದ್ದಾರೆ. ಇಸ್ರೇಲಿಗಳು, ಪ್ಯಾಲೆಸ್ತೀನಿಗಳು ಮತ್ತು ವಿದೇಶಿಯರು ಈ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಹೆಚ್ಚಿನವರು ನಾಗರಿಕರಾಗಿದ್ದಾರೆ. ಉಗ್ರಗಾಮಿಗಳ ದಾಳಿಯಿಂದ ಕೆರಳಿದ ಇಸ್ರೇಲ್ ಪ್ರತಿಕಾರದ ಯುದ್ಧವನ್ನು ಘೋಷಿಸಿದೆ.
ನೆಲದ ಆಕ್ರಮಣಕ್ಕೆ ಇಸ್ರೇಲ್ ಮುಂದಾಗಿದೆ. ಇದಕ್ಕೆ ಮುಂಚಿತವಾಗಿ ಶುಕ್ರವಾರದಂದು ಉತ್ತರ ಗಾಜಾದ ಜನರನ್ನು ತಮ್ಮ ಈ ಪ್ರದೇಶವನ್ನು ತೊರೆಯುವಂತೆ ಇಸ್ರೇಲ್ ಎಚ್ಚರಿಕೆ ನೀಡಿದೆ. ಸುಮಾರು 2.3 ಮಿಲಿಯನ್ ಜನರು ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಅರ್ಧರಷ್ಟು ಜನರಿಗೆ ತಮ್ಮ ಪ್ರದೇಶವನ್ನು ತೊರೆಯುವಂತೆ ಹೇಳಲಾಗಿದೆ.
ಉತ್ತರ ಗಾಜಾದಲ್ಲಿರುವ ಸುಮಾರು 1.1 ಮಿಲಿಯನ್ ಪ್ಯಾಲೆಸ್ತೇನಿಯರು ಮುಂದಿನ 24 ಗಂಟೆಗಳಲ್ಲಿ ದಕ್ಷಿಣಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ ಎಂದು ಯುಎನ್ ಹೇಳಿದೆ. ಇಸ್ರೇಲಿ ಮಿಲಿಟರಿ ಆದೇಶವನ್ನು ಧಿಕ್ಕರಿಸಲು ಹಮಾಸ್ ಜನರನ್ನು ಒತ್ತಾಯಿಸಿದೆ.
ಉತ್ತರ ಗಾಜಾದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು 24 ಗಂಟೆಗಳ ಒಳಗೆ ಸ್ಥಳಾಂತರಗೊಳ್ಳಬೇಕು ಎಂಬ ಇಸ್ರೇಲ್‌ನ ಆದೇಶ ಅತ್ಯಂತ ಅಪಾಯಕಾರಿ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ. ಇದು ಸರಳವಾಗಿ ಆಗುವಂತಹುದೂ ಅಲ್ಲ. ಯುದ್ಧಗಳು ಸಹ ನಿಯಮಗಳನ್ನು ಹೊಂದಿವೆ ಎಂದು ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
ಗಾಜಾ ನಗರದಲ್ಲಿ ಇಸ್ಲಾಮಿಸ್ಟ್ ಗುಂಪಿನ ವೈಮಾನಿಕ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದ ಹಮಾಸ್‌ನ ಹಿರಿಯ ಮಿಲಿಟರಿ ಕಮಾಂಡರ್ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಮಿಲಿಟರಿ ಶನಿವಾರ ತಿಳಿಸಿದೆ.












Click it and Unblock the Notifications