Israel-Hamas war: ಇಸ್ರೇಲ್‌ನಲ್ಲಿರುವ 12 ಸಾವಿರ ಕನ್ನಡಿಗರ ಪರಿಸ್ಥಿತಿ ಹೇಗಿದೆ ಗೊತ್ತೇ? ವರದಿ, ವಿವರ
Israel-Hamas war: ಯುದ್ಧ ಪೀಡಿತ ಇಸ್ರೇಲ್‌ನ ವಿವಿಧ ನಗರಗಳಲ್ಲಿ ಸುಮಾರು 12 ಸಾವಿರ ಕನ್ನಡಗರು ನೆಲೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವರೆಗೆ ಇವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಭಾರತೀಯರ ಸುರಕ್ಷತೆಗಾಗಿ ಭಾರತ ಮತ್ತು ಇಸ್ರೇಲಿ ಸರ್ಕಾರಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ನೆಲೆಸಿರುವವರಿಗಾಗಿ ಭಾರತೀಯ ರಾಯಭಾರ ಕಚೇರಿ ಟೋಲ್-ಫ್ರೀ ಸಂಖ್ಯೆಯನ್ನು ನೀಡಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಟೋಲ್-ಫ್ರೀ ನಂಬರ್ ಮೂಲಕ ಸಂಪರ್ಕಿಸಬಹುದು ಎಂದು ಹೇಳಲಾಗಿದೆ.
ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿರುವ ವಲಸಿಗರು ಮನೆಗಳಿಗೆ ಕರೆ ಮಾಡಿದ್ದಾರೆ. ತಾವು ಸುರಕ್ಷಿತವಾಗಿ ಇರುವುದಾಗಿ ಸಂಬಂಧಿಕರಿಗೆ ಹೇಳಿದ್ದಾರೆ.

ಇಸ್ರೇಲ್‌ನ ಟೆಲ್ ಅವೀವ್ ನಗರದಲ್ಲಿ ವಾಸವಾಗಿರುವ ಮಂಗಳೂರು ಕಡೆಯ ದೀಪಕ್ ಪಿಂಟೋ ದೂರವಾಣಿ ಮೂಲಕ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಜೊತೆ ಮಾತನಾಡಿದ್ದಾರೆ.
'ಉತ್ತರ ಕನ್ನಡದ 3,000 ಕ್ಕೂ ಹೆಚ್ಚು ಜನರು ಇಲ್ಲಿ ( ಟೆಲ್ ಅವೀವ್ ) ವಾಸಿಸುತ್ತಿದ್ದಾರೆ. ನಾವು ಕ್ಯಾಥೋಲಿಕ್ ಸೊಸೈಟಿ ಸೇರಿದಂತೆ ಹಲವಾರು ಸಂಸ್ಥೆಗಳನ್ನು ಹೊಂದಿದ್ದೇವೆ. ನಾವು ಪರಸ್ಪರ ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮಲ್ಲಿ ಕುಮಟಾ, ಕಾರವಾರ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರದ ಜನ ಇದ್ದಾರೆ. ಚಿಂತೆ ಮಾಡುವಂತಹ ಪರಿಸ್ಥಿತಿ ಏನೂ ಇಲ್ಲ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ' ಎಂದು ತಿಳಿಸಿದ್ದಾರೆ.
'ನಮ್ಮಲ್ಲಿ ಹೆಚ್ಚಿನವರು ಹೊನ್ನಾವರದವರು. ಒಟ್ಟಾರೆ ಕನ್ನಡಿಗರನ್ನು ತೆಗೆದುಕೊಂಡರೆ ನಾವು 12,000 ಜನ ಇದ್ದೇವೆ. ವಲಸಿಗ ಕನ್ನಡಿಗರಲ್ಲಿ ಬಹುತೇಕರು ಮನೆಗಳಲ್ಲಿ ಕೇರ್‌ಟೇಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

'ನಮಗೆ ಉತ್ತಮ ಸಂಬಳ ನೀಡಲಾಗುತ್ತದೆ. ಕುಟುಂಬಗಳು ನಮಗೆ ಬಾಡಿಗೆಗೆ ಹಣ ನೀಡುತ್ತವೆ. ವಸತಿ, ಆಹಾರ ಮತ್ತು ಸಂಬಳವನ್ನು ಒದಗಿಸುತ್ತವೆ. ಇದು ಭಾರತೀಯ ಕರೆನ್ಸಿಯಲ್ಲಿ 1.5 ಲಕ್ಷ ರೂಪಾಯಿಗಿಂತ ಕಡಿಮೆಯಿಲ್ಲ' ಎಂದು ಅವರು ಹೇಳಿದ್ದಾರೆ.
'ನಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ನಮಗೆ ಕರೆಗಳು ಬರುತ್ತಿವೆ. ಇಲ್ಲಿ ನಮ್ಮ ಜೀವಕ್ಕೆ ಯಾವುದೇ ಬೆದರಿಕೆ ಇಲ್ಲ. ಇಸ್ರೇಲ್ ಮತ್ತು ಭಾರತ ಎರಡೂ ಸರ್ಕಾರಗಳು ನಮ್ಮನ್ನು ನೋಡಿಕೊಳ್ಳುತ್ತಿವೆ. ಕನ್ನಡಿಗರಲ್ಲಿ ಯಾವುದೇ ರೀತಿಯಾದ ಸಾವು-ನೋವು ಸಂಭವಿಸಿಲ್ಲ. ಇಸ್ರೇಲಿಗಳು ನಮಗೆ ಮನೆಯೊಳಗೆ ಇರಲು ಹೇಳಿದ್ದಾರೆ' ಎಂದು ಇರುವ ಗಾಡ್‌ಫ್ರೇ ಫೆರ್ನಾಂಡಿಸ್ ಹೇಳಿದ್ದಾರೆ. ಹಡೆರಾ ನಗರವು ಟೆಲ್ ಅವೀವ್‌ನಿಂದ ಸುಮಾರು 100 ಕಿಮೀ ದೂರದಲ್ಲಿದೆ.
ಫರ್ನಾಂಡಿಸ್ ಹೊನ್ನಾವರದ ಕಾಸರಕೋಡಿನವರಾಗಿದ್ದು, ಕಳೆದ ಎರಡು ವರ್ಷಗಳಿಂದ ಇಸ್ರೇಲ್‌ನಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಟೆಲ್ ಅವೀವ್‌ನಲ್ಲಿ ಯಾವುದೇ ಶೆಲ್ ದಾಳಿ ನಡೆಯದಿದ್ದರೂ, ಸೋಮವಾರ ಕೆಲವು ಕ್ಷಿಪಣಿಗಳು ಇಸ್ರೇಲ್ ರಾಜಧಾನಿಯ ಮೇಲೆ ಕಾಣಿಸಿಕೊಂಡಿವೆ. ಇವುಗಳನ್ನು ಹೊಡೆದುರುಳಿಸುವಲ್ಲಿ ಇಸ್ರೇಲ್ ಸೇನೆ ಸಫಲವಾಗಿದೆ.

'ಚಿಂತೆ ಮಾಡುವ ಪರಿಸ್ಥಿತಿ ಏನೂ ಇಲ್ಲ. ಕೋಲ್ಕತ್ತಾದ ಮಹಿಳೆಯೊಬ್ಬರು ನಾಪತ್ತೆಯಾಗಿರುವುದನ್ನು ಹೊರತುಪಡಿಸಿ, ಭಾರತೀಯರಿಗೆ ಸಂಬಂಧಿಸಿದ ಯಾವುದೇ ಘಟನೆಗಳು ನಡೆದಿಲ್ಲ. ವೈಮಾನಿಕ ದಾಳಿ ಅಥವಾ ಕ್ಷಿಪಣಿ ಸಮೀಪಿಸಿದಾಗಲೆಲ್ಲಾ ಸೈರನ್‌ಗಳು ಮೊಳಗುತ್ತವೆ ಮತ್ತು ಜನರು ಬಂಕರ್‌ಗಳಿಗೆ ತೆರಳುತ್ತಾರೆ' ಎಂದು ಫರ್ನಾಂಡಿಸ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ಮೂಲದ ದೇವದಾಸ್ ಶೆಟ್ಟಿ 15 ವರ್ಷಗಳಿಂದ ಇಸ್ರೇಲ್‌ನಲ್ಲಿದ್ದಾರೆ. ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ಅವರು, ಇಸ್ರೇಲ್‌ನಲ್ಲಿ ಕೆಲಸ ಮಾಡುವವರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ತನ್ನ ನಾಗರಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ಇಸ್ರೇಲ್‌ನಲ್ಲಿ ಉಡುಪಿ ಜಿಲ್ಲೆಯ ಸುಮಾರು 200 ಜನರು ಇರಬಹುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಜನರು ಸುರಕ್ಷಿತವಾಗಿರಲು ಎಲ್ಲೆಂದರಲ್ಲಿ ಬಂಕರ್‌ಗಳಿವೆ ಎಂದು ತಿಳಿಸಿದ್ದಾರೆ.
ಕನ್ನಡಿಗರ ರಕ್ಷಣೆಗೆ ಬದ್ಧ ಎಂದ ಸಿಎಂ
ಇಸ್ರೇಲ್ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.
'ಇಸ್ರೇಲ್‌ನಲ್ಲಿರುವ ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ ಅಥವಾ ಯುದ್ಧದ ಕಾರಣದಿಂದಾಗಿ ನಿಮಗೆ ತಕ್ಷಣದ ಸಹಾಯ ಬೇಕಾದರೆ, ನೀವು ಸಹಾಯವಾಣಿಗೆ ಕರೆ ಮಾಡಬಹುದು' ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಸಹಾಯವಾಣಿಯನ್ನು (080-22340676 ಮತ್ತು 080-22253707) ತೆರೆದಿದೆ. ಕಾಲ್ ಸೆಂಟರ್ ಕೇವಲ ಒಂದು ಕರೆಯನ್ನು ಸ್ವೀಕರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏಕೆಂದರೆ ಅನೇಕ ಜನರು ವಿದೇಶಾಂಗ ಸಚಿವಾಲಯದ ಸಹಾಯವಾಣಿಗಳಿಗೆ ನೇರವಾಗಿ ಡಯಲ್ ಮಾಡುತ್ತಿರಬಹುದು ಎಂದೂ ಅವರು ಹೇಳಿದ್ದಾರೆ.












Click it and Unblock the Notifications