Iran Protest: ಇರಾನ್ ಪ್ರತಿಭಟನೆ ಭೀಕರ, 35 ಜನರು ಹಿಂಸಾಚಾರಕ್ಕೆ ಬಲಿ
ಇರಾನ್ ನೆಲದಲ್ಲಿ ಭುಗಿಲೆದ್ದಿರುವ ಹೋರಾಟ ಭೀಕರ ಸ್ವರೂಪ ಪಡೆದುಕೊಂಡಿದೆ, ಇರಾನ್ ಜನ ತಮ್ಮದೇ ದೇಶದಲ್ಲಿ ತುತ್ತು ಅನ್ನ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದಾರೆ. ಭೀಕರವಾದ ಹಣದುಬ್ಬರ ಮತ್ತು ಸೂಕ್ತ ಆರ್ಥಿಕ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಹೋರಾಟ ಭುಗಿಲೆದ್ದಿದೆ. ಹಾಗೇ ಅಲ್ಲಿ ಹತ್ತಾರು ವರ್ಷಗಳಿಂದ ಅಧಿಕಾರ ಹಿಡಿದಿರುವ ಸರ್ವಾಧಿಕಾರಿ ವಿರುದ್ಧ ಕೂಡ ರೊಚ್ಚಿಗೆದ್ದಿದ್ದಾರೆ ಅಲ್ಲಿನ ಜನ. ಇಷ್ಟೆಲ್ಲಾ ಬಡಿದಾಟದ ನಡುವೆ ದಿಢೀರ್ ಹಿಂಸಾಚಾರ ಭುಗಿಲೆದ್ದು, 35 ಜನರು ಈ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಕಾಣುವ ಆತಂಕವೂ ಇದೀಗ ಆವರಿಸಿದೆ.
ಇರಾನಿಯನ್ ರಿಯಾಲ್ ಬೆಲೆ ಭಾರಿ ಕುಸಿತ ಕಂಡ ನಂತರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅಮೆರಿಕನ್ ಡಾಲರ್ ಎದುರು ಇರಾನಿಯನ್ ರಿಯಾಲ್ ಭಾರಿ ದೊಡ್ಡ ಕುಸಿತ ಕಂಡು ಹಣದುಬ್ಬರ ಏರಿಕೆ ಆಗುತ್ತಿದೆ. ಇದೇ ಕಾರಣಕ್ಕೆ ಇರಾನ್ ನೆಲದಲ್ಲಿ ಈಗ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿ ಜನರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವಂತೆ ಆಗಿದೆ. ಇಷ್ಟೆಲ್ಲಾ ಒತ್ತಡದ ನಡುವೆಯೇ ದಿಢೀರ್ ಹಿಂಸಾರೂಪ ತಾಳಿರುವ ಪ್ರತಿಭಟನೆಗಳು ಹಲವರ ಜೀವ ಬಲಿ ಪಡೆಯುತ್ತಿವೆ. ಒಂದೇ ದಿನ 35 ಜನರು ಹಿಂಸಾಚಾರಕ್ಕೆ ಬಲಿಯಾಗಿರುವುದು ಇಡೀ ಜಗತ್ತಿನ ಗಮನ ಸೆಳೆದಿದೆ.

ಭುಗಿಲೆದ್ದ ಬೃಹತ್ ಹೋರಾಟ
ಇಸ್ರೇಲ್ ಜೊತೆಗೆ ಕೆಲವು ತಿಂಗಳ ಹಿಂದಷ್ಟೇ ಯುದ್ಧ ಮಾಡಿ ಸದ್ದು ಮಾಡಿದ್ದ ಇರಾನ್ ತನ್ನದೇ ನೆಲದಲ್ಲಿ ನಡೆಯುತ್ತಿರುವ ಹೋರಾಟ ಕಂಟ್ರೋಲ್ ಮಾಡಲು ಆಗುತ್ತಿಲ್ಲ. ಇದರ ಪರಿಣಾಮವಾಗಿ ಹಿಂಸೆಯ ರೂಪ ಪಡೆದಿರುವ ಇರಾನ್ ಹೋರಾಟ ಹಲವರ ಜೀವ ಬಲಿ ಪಡೆದುಕೊಂಡಿದೆ. ಈ ಕಾರಣಕ್ಕೆ 1200ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನವಾಗಿದ್ದು, ಇರಾನ್ ದೇಶದಲ್ಲಿ ಒಟ್ಟು 31 ಪ್ರಾಂತ್ಯಗಳ ಪೈಕಿ 27 ಪ್ರಾಂತ್ಯಗಳಲ್ಲಿನ 250 ಸ್ಥಳಗಳಿಗೆ ಪ್ರತಿಭಟನೆ ವ್ಯಾಪಿಸಿದೆ ಎಂಬ ಮಾಹಿತಿಯು ಸಿಕ್ಕಿದೆ. ಇಷ್ಟೆಲ್ಲದರ ನಡುವೆ ಭುಗಿಲೆದ್ದ ಹಿಂಸಾಚಾರ ಪರಿಣಾಮ, ಹಲವರು ಜೀವ ಕಳೆದುಕೊಂಡು ಕುಟುಂಬಗಳನ್ನು ಅನಾಥವಾಗಿಸಿ ಹೋಗಿದ್ದಾರೆ.
ಪರಿಸ್ಥಿತಿ ಮತ್ತಷ್ಟು ಕಠೋರ?
ಇರಾನ್ ದೇಶದಲ್ಲಿ ಸರ್ವಾಧಿಕಾರ ತೊಲಗಲಿ ಎಂದು ಪ್ರತಿಭಟನೆ ಆರಂಭ ಮಾಡಿರುವ ಲಕ್ಷಾಂತರ ಜನರು, ಇದೇ ತಿಕ್ಕಾಟವನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೊಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಕಡೆ ಇರಾನ್ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಅಲ್ಲದೆ ಸರ್ವಾಧಿಕಾರಿ ಖಮೇನಿ ಕುರಿತು ಚರ್ಚೆ ಇನ್ನಷ್ಟು ಜೋರಾಗಿದೆ. ಹೀಗಾಗಿ ಹೋರಾಟಗಳು ಇದೀಗ ಇನ್ನಷ್ಟು ಹೆಚ್ಚಾಗುವ ಭೀತಿ ಮೂಡಿದೆ.












Click it and Unblock the Notifications