War: ಇಸ್ರೇಲ್-ಯುಎಸ್ ಜಂಟಿ ದಾಳಿಗೆ ಇರಾನ್ ರಕ್ಷಣಾ ಸಚಿವ, ಐಆರ್‌ಜಿಸಿ ಕಮಾಂಡರ್ ಸಾವು
Iran-Israel War: ಇರಾನ್, ಯುಎಸ್, ಮತ್ತು ಇಸ್ರೇಲ್ ಮೂರು ರಾಷ್ಟ್ರಗಳು ಯುದ್ಧದ ಕಾರಣದಿಂದಾಗಿ ಜಾಗತಿಕವಾಗಿ ಮುಂಚೂಣಿಗೆ ಬಂದಿವೆ. ನಿರೀಕ್ಷೆಯಂತೆ ಯುಎಸ್ ಸಹ ಇರಾನ್ ಮೇಲೆ ದಾಳಿ ಮಾಡಿದೆ. ಇಂದು ಶನಿವಾರ (ಫೆ.28) ಇಸ್ರೇಲ್ ಮತ್ತು ಅಮೆರಿಕ ದೇಶಗಳು ಇರಾನ್ ಮೇಲೆ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಕಮಾಂಡರ್ ಹಾಗೂ ರಕ್ಷಣಾ ಸಚಿವ ಮೇಜರ್ ಜನರಲ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಇನ್ನಷ್ಟು ನಿಖರ ಮಾಹಿತಿಗಳು ಸಿಗಬೇಕಿದೆ.
ವರದಿಗಳ ಪ್ರಕಾರ, ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಮೊಹಮ್ಮದ್ ಪಕ್ಪೌರ್ ಹಗೂ ಇರಾನ್ ರಕ್ಷಣಾ ಸಚಿವ ಮೇಜರ್ ಜನರಲ್ ಅಮೀರ್ ಹತಾಮಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇಸ್ರೇಲ್ ಪಡೆಗಳು ಮತ್ತು ಇರಾನ್ ಅಧಿಕಾರಿಗಳು ಈ ಹೇಳಿಕೆಯನ್ನು ಪರಿಶೀಲಿಸಿ ಅಧಿಕೃತ ಮಾಹಿತಿ ಇನ್ನೂವರೆಗೂ ನೀಡಿಲ್ಲ.

260 ದಿನಗಳ ಕಾಲ ಐಆರ್‌ಜಿಸಿ ಮುನ್ನಡೆಸಿದ್ದ ಪಕ್ಪೌರ್
ಇರಾನ್‌ನ ಮಿಲಿಟರಿ ರಚನೆಯಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಪಾಕ್ಪೌರ್ ಅವರನ್ನು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಸುಮಾರು 260 ದಿನಗಳ ಕಾಲ ಐಆರ್‌ಜಿಸಿಯನ್ನು ಮುನ್ನಡೆಸಿದ್ದ ಕೀರ್ತಿ ಅವರದ್ದು. ಅವರನ್ನು ಇರಾನ್, ಇಸ್ರೇಲ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಐಆರ್‌ಜಿಸಿ ಕಮಾಂಡರ್ ಹುಸೇನ್ ಸಲಾಮಿ ಅವರ ಪದಚ್ಯುತಿಗೊಳಿಸಿದ ನಂತರ 2025 ರಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಮೊಹಮ್ಮದ್ ಪಕ್ಪೌರ್ ಅವರನ್ನು ಮೇಜರ್ ಜನರಲ್ ಹುದ್ದೆಗೆ ಬಡ್ತಿ ನೀಡಿದ್ದರು.
ಪಾಕ್ಪೌರ್ ಅವರಿಗೆ ಬಡ್ತಿ ನೀಡುವ ಮೂಲಕ ಸೇನಾ ಕಾರ್ಯಾಚರಣೆಯ ಸಿದ್ಧತೆಯನ್ನು ಬಲಪಡಿಸುವುದು, ಆಂತರಿಕ ಏಕತೆಯಲ್ಲಿ ಸುಧಾರಣೆ ತರುವುದು, ತಮ್ಮ ಒಟ್ಟಾರೆ ಸಾಮರ್ಥ್ಯ ಹೆಚ್ಚಿಸುವ ಗುರಿ ಇರಾನ್ ಹೊಂದಿತ್ತು. ಅಷ್ಟೇ ಅಲ್ಲದೇ ಇದೆಲ್ಲವನ್ನು ಮಾಡಬಲ್ಲ ಶಕ್ತಿಗಳು ಇವರಲ್ಲಿದ್ದವು ಎಂದು ಇರಾನ್ ಸಹ ನಂಬಿತ್ತು. ತಿಂಗಳ ಹಿಂದಷ್ಟೇ ರಾಜತಾಂತ್ರಿಕತೆ ಹದಗೆಟ್ಟ ಸಂದರ್ಭದಲ್ಲಿ ಪಾಕ್ಪೌರ್ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಕಟ್ಟೆಚ್ಚರಿಕೆ ನೀಡಿದ್ದರು. ಇದೀಗ ಅವರನ್ನೇ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿ ಆಗಿದೆ.
ಶನಿವಾರ ಮಧ್ಯಾಹ್ನ 12 ಗಂಟೆ (ಭಾರತೀಯ ಕಾಲಮಾನ) ಸುಮಾರಿಗೆ ಇಸ್ರೇಲ್ ಸೇನೆಯು ಇರಾನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಹಾರಿಸಿತು. ಅನೇಕ ಪ್ರದೇಶಗಳಲ್ಲಿ ಎಚ್ಚರಿಕೆ ಸೈರನ್‌ಗಳು ಮೊಳಗಿದವು. ಇದು ಔಪಚಾರಿಕ ತುರ್ತು ಪರಿಸ್ಥಿತಿಗೆ ಕಾರಣವಾಯಿತು. ಟೆಲ್ ಅವೀವ್ ಮತ್ತು ದೇಶದ ಇತರ ಭಾಗಗಳಲ್ಲಿ ಶನಿವಾರ ರಾತ್ರಿಯಿಡೀ ಎಚ್ಚರಿಕೆಗಳು ಕೇಳಿಬರುತ್ತಿವೆ. ನಿವಾಸಿಗಳ ರಕ್ಷಣೆಗೆ ಅಧಿಕಾರಿಗಳು ಸೂಚಿಸಿದರು. ಇರಾನ್, ಇಸ್ರೇಲ್, ಇರಾಕ್ ಭಾಗದಲ್ಲಿ ನಾಗರಿಕ ವಾಯುಯಾನ ಸಂಚಾರ ಸ್ಥಗಿತಗೊಂಡಿತು.
ವೈಮಾನಿಕ ದಾಳಿಯ ಸಂಪೂರ್ಣ ವಿವರ
ಪೂರ್ವ ನಿಯೋಜಿತದಂತೆ ಇರಾನ್‌ನ ಟೆಹರಾನ್‌ನಲ್ಲಿರುವ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಪ್ರದೇಶ ಗುರಿಯಾಗಿಸಿಕೊಂಡು ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಯುದ್ಧದ ಉದ್ವಿಗ್ನತೆ ಕೆಲವೇ ಹೊತ್ತಿನಲ್ಲಿ ಹೆಚ್ಚಾಯಿತು. 86 ವರ್ಷದ ಖಮೇನಿಯನ್ನು ಕಚೇರಿ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. ಬಳಿಕ ಇರಾನ್ ಸಹ ಪ್ರತಿದಾಳಿಗೆ ಸಜ್ಜಾಯಿತು. ಬಹ್ರೇನ್, ಕುವೈತ್ ಮತ್ತು ಕತಾರ್‌ನಲ್ಲಿರುವ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತು. ಬಳಿಕ ಇಸ್ರೇಲ್ ಮತ್ತು ಯುಎಸ್ ಜಂಟಿಯಾಗಿ ವೈಮಾನಿಕ ದಾಳಿ ಮುಂದುವರಿಸಿದೆ. ಯುಎಸ್ ಜೊತೆಗೆ ಅಣು ಒಪ್ಪಂದ ಮಾತುಕತೆ ಸಂದರ್ಭದಲ್ಲಿ ನಡೆದ ಇಂದಿನ ಯುದ್ಧದ ಬೆಳವಣಿಗೆಗಳು ಜಾಗತಿಕವಾಗಿ ಸುದ್ದಿ ಆಗಿದೆ. ಇದು ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡುತ್ತಾ? ಅಂತಲೂ ಚರ್ಚೆ ಶುರುವಾಗಿದೆ.
50-70 ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿ ಇರಾನ್
ಇಂದಿನ ದಾಳಿಗೆ ಪ್ರತಿಯಾಗಿ ಇಸ್ರೇಲ್ ಮೇಲೆ ಇರಾನ್ ಸುಮಾರು 50-70 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿ ತಕ್ಕ ಉತ್ತರಿ ನೀಡಿತು. ಟೆಲ್ ಅವೀವ್‌ನಾದ್ಯಂತ ಸೈರನ್‌ಗಳು ಮೊಳಗಿದವು. ಸರ್ಕಾರ ತುರ್ತು ಅಧಿಸೂಚನೆ ಹೊರಡಿಸಿತು. ಇದೇ ವೇಳೆ ಟೆಹರಾನ್ ನಲ್ಲಿನ ಸರ್ಕಾರಿ ಮತ್ತು ಮಿಲಿಟರಿ ಕಟ್ಟಡಗಳ ಬಳಿ ಪ್ರಬಲ ಸ್ಫೋಟಗಳು ಸಂಭವಿಸಿ, ಗಗನದೆತ್ತರಕ್ಕೆ ಹೊಗೆ ಆವರಿಸಿತು. ಈ ಮೂಲಕ ಕ್ಷಿಪಣಿಗಳು ಪರಸ್ಪರ ಎರಡು ದೇಶಗಳ ಮೇಲೆ ಹಾರಿದವು. ಇದು ಯುದ್ಧದ ವೇಳೆ ಕ್ಷಿಪಣಿಗಳ ವಿನಿಮಯದಂತಿತ್ತು.
ಇರಾನ್ ಮೇಲೆ ಇಸ್ರೇಲ್ ದಾಳಿ ಬೆನ್ನಲ್ಲೆ ಪ್ರತಿಕ್ರಿಯಿಸಿದ ಯುಎಸ್ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್‌ನಲ್ಲಿ "ಪ್ರಮುಖ ಯುದ್ಧ ಕಾರ್ಯಾಚರಣೆಗಳು ಆರಂಭವಾಗಿದೆ ಎಂದರು. ಇರಾನ್ ನಲ್ಲಿ ನಾವು ಅಮೆರಿಕಾದ ಜನರನ್ನು ರಕ್ಷಿಸುವ ಉದ್ದೇಶ ಹೊಂದಿದ್ದೇವೆ ಎಂದು ಟ್ರಂಫ್ ವಿಡಿಯೋ ಹೇಳಿಕೆ ನೀಡಿದರು. ತಮ್ಮ ವೈಮಾನಿಕ ದಾಳಿಯು ಇರಾನ್‌ನ ಕ್ಷಿಪಣಿ ಮತ್ತು ನೌಕಾ ವ್ಯವಸ್ಥೆ ಮೇಲೆ ಗುರಿಯಾಗಿ ನಡೆಯಲಿದೆ ಎಂದು ಎಚ್ಚರಿಸಿದರು. ಅಣು ಒಪ್ಪಂದ ಸಂಬಂಧ ಇರಾನ್ ಹಾಗೂ ಯುಎಸ್ ಜೊತೆಗೆ ಮೂರು ಭಾರಿ ಮಾತುಕತೆ ನಡೆದಿತ್ತು. ಇಂದು ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ಜಿನೆವಾದಲ್ಲಿ ನಡೆದಿದೆ. ಈ ಮಧ್ಯೆ ಯುಎಸ್ ಹಾಗೂ ಇರಾನ್ ಮಧ್ಯ ಯುದ್ಧವೂ ಏರ್ಪಟ್ಟಿದೆ. ಈ ಬೆಳವಣಿಗೆ ಜಾಗತಿಕವಾಗಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications